ವ್ಯಸನ ಮುಕ್ತ ಸಮಾಜ ನಿರ್ಮಾಣಕ್ಕಾಗಿ ಎಲ್ಲರೂ ಕೈಜೋಡಿಸಿ : ದಡ್ಡೆ ಕರೆ
ವಿಜಯಪುರ, 01 ಆಗಸ್ಟ್ (ಹಿ.ಸ.) : ಆ್ಯಂಕರ್ : ವ್ಯಸನ ಮುಕ್ತ ಹಾಗೂ ಆರೋಗ್ಯಯುತ ಸುಂದರ ಸಮಾಜ ನಿರ್ಮಾಣ ಮಾಡುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದ್ದು ಈ ಕಾರ್ಯಕ್ಕಾಗಿ ಎಲ್ಲರೂ ಕೈಜೋಡಿಸಬೇಕು ಎಂದು ಉಪ ವಿಭಾಗಾಧಿಕಾರಿ ಗುರುನಾಥ ದಡ್ಡೆ ಹೇಳಿದರು. ನಗರದ ಕಂದಗಲ್ ಶ್ರೀ ಹಣುಮಂತ ರಂಗಮಂದಿರದಲ್ಲಿ ಶುಕ್ರವಾ
ದಡ್ಡೆ


ವಿಜಯಪುರ, 01 ಆಗಸ್ಟ್ (ಹಿ.ಸ.) :

ಆ್ಯಂಕರ್ : ವ್ಯಸನ ಮುಕ್ತ ಹಾಗೂ ಆರೋಗ್ಯಯುತ ಸುಂದರ ಸಮಾಜ ನಿರ್ಮಾಣ ಮಾಡುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದ್ದು ಈ ಕಾರ್ಯಕ್ಕಾಗಿ ಎಲ್ಲರೂ ಕೈಜೋಡಿಸಬೇಕು ಎಂದು ಉಪ ವಿಭಾಗಾಧಿಕಾರಿ ಗುರುನಾಥ ದಡ್ಡೆ ಹೇಳಿದರು.

ನಗರದ ಕಂದಗಲ್ ಶ್ರೀ ಹಣುಮಂತ ರಂಗಮಂದಿರದಲ್ಲಿ ಶುಕ್ರವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ, ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ, ಸಮಾಜ ಕಲ್ಯಾಣ ಇಲಾಖೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಹಯೋಗದಲ್ಲಿ ಆಯೋಜಿಸಿದ ಡಾ.ಮಹಾಂತ ಶಿವಯೋಗಿಗಳ ಜನ್ಮ ದಿನಾಚರಣೆ ಪ್ರಯುಕ್ತ ವ್ಯಸನ ಮುಕ್ತ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಮಾತನಾಡಿದ ಅವರು, ನಮ್ಮ ಆರೋಗ್ಯವೂ ಒಳಗೊಂಡ0ತೆ ಸಮಾಜದ ಆರೋಗ್ಯಕ್ಕೆ ಹಾನಿಕಾರಕವಾದ ಯಾವುದೇ ತರಹದ ವ್ಯಸನಕ್ಕೆ ಒಳಗಾಗದೇ,ಉತ್ತಮ ಹವ್ಯಾಸ ರೂಢಿಸಿಕೊಂಡು, ಸದೃಢ ಸಮಾಜ ನಿರ್ಮಾಣ ಮಾಡಿ ಅದನ್ನು ಗಟ್ಟಿಗೊಳಿಸುವ ಬಹು ದೊಡ್ಡ ಹೊಣೆಗಾರಿಕೆ ನಮ್ಮದಾಗಿದೆ. ಅದನ್ನು ಅರಿತು ಮಾದಕ ವಸ್ತುಗಳ ಸೇವನೆಯಂತಹ ದುರ್ವ್ಯಸನ ಹಾಗೂ ದುಶ್ಚಟಗಳಿಂದ ದೂರವಿದ್ದು, ಬದುಕು ಹಸನಗೊಳಿಸಿಕೊಳ್ಳಬೇಕು ಎಂದು ಅವರು ಹೇಳಿದರು.

ಉಪನ್ಯಾಸ ನೀಡಿದ ಹಿರಿಯ ಪತ್ರಕರ್ತರಾದ ವಾಸುದೇವ ಹೆರಕಲ್ ಅವರು ಮಾತನಾಡಿ ಮೊಬೈಲ್ ಕೂಡ ಒಂದು ವ್ಯಸನವಾಗಿದೆ ಅವಶ್ಯಕತೆಗೆ ತಕ್ಕಂತೆ ಮಿತವಾಗಿ ಬಳಕೆ ಮಾಡಬೇಕು. ವಿಧ್ಯಾರ್ಥಿ ಜೀವನದಲ್ಲಿ ವ್ಯಾಸಂಗಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಆಸಕ್ತಿವಹಿಸಿ ಅಧ್ಯಯನ ಮಾಡುವ ಮೂಲಕ ಬಾಳು ಸುಂದರ ಗೊಳಿಸಿಕೊಳ್ಳಬೇಕು. ಡಾ.ಮಹಾಂತ ಶಿವಯೋಗಿಗಳು ಈ ದಿಸೆಯಲ್ಲಿ ವ್ಯಸನಮುಕ್ತ ಸಮಾಜ ಕನಸು ಹೊಂದಿ ಆ ದಿಸೆಯಲ್ಲಿ ನಿರಂತರ ಕಾರ್ಯ ನಿರ್ವಹಿಸಿದ್ದಾರೆ ಎಂದು ಅವರು ಹೇಳಿದರು.

ಮಹಾಂತ ಶಿವಯೋಗಿಗಳು ಜನರಲ್ಲಿನ ವ್ಯಸನಗಳನ್ನು ತಮ್ಮ ಜೋಳಿಗೆಗೆ ಭಿಕ್ಷೆ ರೂಪದಲ್ಲಿ ಪಡೆದು, ಸನ್ಮಾರ್ಗದ ಪಥ ತೋರಿದವರಾಗಿದ್ದು, ಅವರ ಜೀವನಾದರ್ಶ ಅವರ ತತ್ವ ವಿಚಾರಗಳು ಅಳವಡಿಸಿಕೊಳ್ಳುವ ಮೂಲಕ ಈ ಕಾರ್ಯಕ್ರಮದ ಉದ್ದೇಶಗಳನ್ನು ಅರ್ಥ ಮಾಡಿಕೊಂಡು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಆರೋಗ್ಯಕ್ಜೆ ಹಾನಿಕರವಾದ ವಸ್ತುಗಳನ್ನು ತ್ಯಜಿಸಬೇಕು ಎಂದು ಅವರು ತಿಳಿಸಿದರು.

ಜಿಲ್ಲಾ ಮಾನಸಿಕ ಆರೋಗ್ಯ ಘಟಕದ ಮನೋರೋಗ ತಜ್ಞರಾದ ಡಾ.ಮಂಜುನಾಥ ಮಸಳಿ ಅವರು ಉಪನ್ಯಾಸ ನೀಡಿ, ಕೆಲಸದ ಒತ್ತದ, ಸಹವಾಸ ದೋಷ, ಫ್ಯಾಷನ್, ಸಂಬ0ಧಗಳಲ್ಲಿನ ಬಿರುಕು, ಕೌಟುಂಬಿಕ ಸಮಸ್ಯೆ, ಆರ್ಥಿಕ ಸಮಸ್ಯೆಗಳು ವ್ಯಸನಕ್ಕೆ ಅಂಟಿಕೊಳ್ಳುವ ಮಾರ್ಗಗಳಾಗಬಾರದು. ದುಶ್ಚಟಗಳ ಕಡೆಗಣಿಸಿ ಅವುಗಳಿಂದ ಹೊರಬರಲು ಪ್ರತಿಯೊಬ್ಬರು ಉತ್ತಮ ಹವ್ಯಾಸ ಹಾಗೂ ಅಭ್ಯಾಸಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಆ ನಿಟ್ಟಿನಲ್ಲಿ ಸಮಾಜವನ್ನು ಜೋಡಿಸುವಂತಹ ಕೆಲಸವನ್ನು ಪ್ರತಿಯೊಬ್ಬರು ಮಾಡೋಣ. ಜೋಳಿಗೆ ಹಿಡಿದು ಸಮಾಜ ಸುಧಾರಣೆ ಮಾಡಲು ಮುಂದಾದ ಮಹಾಂತೇಶ ಶಿವಯೋಗಿಗಳ ಜೀವನದ ಮೌಲ್ಯಗಳನ್ನು ನಮ್ಮೆಲ್ಲರ ಜೀವನದಲ್ಲಿ ಅಳವಡಿಸಿಕೊಳ್ಳೋಣ ಎಂದು ಅವರು ಹೇಳಿದರು.

ಇಂದಿನ ಒತ್ತಡದ ಜೀವನ ಶೈಲಿಯಲ್ಲಿ ಮಾನಸಿಕ ಆರೋಗ್ಯ ಕಾಪಾಡಿಕೊಳ್ಳುವುದು ದೊಡ್ಡ ಸವಾಲು. ಪ್ರತಿಯೊಬ್ಬರು ತಮ್ಮ ಜೀವನದ ಯಾವುದಾದಾರೂ ಒಂದು ಸನ್ನಿವೇಶಗಳಲ್ಲಿ ಮಾನಸಿಕ ಆರೋಗ್ಯ ಸಮಸ್ಯೆ ಎದುರಿಸುತ್ತಿರುವವರ ಸಹಾಯಕ್ಕಾಗಿ ಇರುವ ರಾಷ್ಟಿçಯ ಟೆಲಿ ಮಾನಸಿಕ ಆರೋಗ್ಯಕ್ಕೆ ಇರುವ ಉಚಿತ ಸಹಾಯವಾಣಿ 14416 ಸಂಖ್ಯೆಗೆ ಕರೆ ಮಾಡಿ ತಮ್ಮ ಸಮಸ್ಯೆ ಪರಿಹರಿಸಿಕೊಳ್ಳಬಹುದಾಗಿದೆ ಎಂಬ ಮಾಹಿತಿ ಈ ಸಂದರ್ಭದಲ್ಲಿ ಅವರು ನೀಡಿದರು.

ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ರಾಜಶೇಖರ ದೈವಾಡಿ ಅವರುಮ ವ್ಯಸನ ಮುಕ್ತ ಕುರಿತ ಪ್ರಮಾಣ ವಚನ ಬೋಧಿಸಿದರು. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕರಾದ ಅಮರೇಶ ದೊಡಮನಿ ಸ್ವಾಗತಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಸಂತೋಷ ಭೋವಿ ವಂದಿಸಿದರು. ಸಂಗೀತಾ ಮಠಪತಿ ಅವರು ಕಾರ್ಯಕ್ರಮವನ್ನು ಅತ್ಯಂತ ಸೊಗಸಾಗಿ ನಿರೂಪಿಸಿದರು.

ಖ್ಯಾತ ಗಾಯಕ ವಿರೇಶ ಹಾಗೂ ಅವರ ತಂಡ ಕಾರ್ಯಕ್ರಮಕ್ಕೆ ಮೊದಲು ಪ್ರಸ್ತುತಪಡಿಸಿದ ಗಾಯನ ಪ್ರೇಕ್ಷಕರ ಮನಮುಟ್ಟಿತು.

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತಿಯ ಮುಖ್ಯ ಲೆಕ್ಕಾಧಿಕಾರಿಗಳಾದ ರಾಮಣ್ಣ ಅಥಣಿ, ಜಿಲ್ಲಾ ಶಸ್ತçಚಿಕಿತ್ಸಕರಾದ ಶಿವಾನಂದ ಮಾಸ್ತಿಹೊಳಿ, ಜಿಲ್ಲಾ ಎನ್‌ಐಸಿ ಅಧಿಕಾರಿ ಶಿವಾನಂದ ಗೂಗವಾಡ, ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ವಿಜಯಪುರದ ವಿಭಾಗೀಯ ನಿಯಂತ್ರಣಾಧಿಕಾರಿಗಳಾದ ನಾರಾಯಣಪ್ಪ ಕುರುಬರ, ಆರೋಗ್ಯ ಇಲಾಖೆಯ ಅಧಿಕಾರಿಗಳಾದ ಜಿ.ಎಂ.ಕೊಲೂರು, ರೇಖಾ ದಶವಂತ, ವಾರ್ತಾ ಇಲಾಖೆಯ ಸುರೇಶ ಅಂಬಿಗೇರ್, ಮಂಜುಳಾ ದುರ್ಗನವರ, ವೈಷ್ಣವಿ, ವಿದ್ಯಾಶ್ರೀ ಹೊಸಮನಿ, ಪ್ರಕಾಶ ಘಟಕಾಂಬಳೆ, ನಾಗೇಶ್ ಸಾಗರ, ಆಶಾ ಕಾರ್ಯಕರ್ತೆಯರು, ವಿವಧ ಕಾಲೇಜಿನ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಮನೋರೋಗ ತಜ್ಞರು ಡಾ.ಮಂಜುನಾಥ ಮಸಳಿ ಅವರು ವ್ಯಸನಗಳಿಂದಾಗುವ ದುಷ್ಪರಿಣಾಮ ಹಾಗೂ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಕುರಿತು ಪಿಪಿಟಿ ಮೂಲಕ ಒಂದು ಗಂಟೆಯವರೆಗೆ ಸುದಿರ್ಘವಾಗಿ ಉದಾಹರಣೆ ಸಹಿತ ವಿವರಿಸಿದರು.

ಜನಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಅಪರ ಜಿಲ್ಲಾಧಿಕಾರಿಗಳಿಂದ ಚಾಲನೆ : ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ,ಕರ್ನಾಟಕ ರಾಜ್ಯಮದ್ಯಪಾನ ಸಂಯಮ ಮಂಡಳಿ,ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ,ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ,ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ,ಸಮಾಜ ಕಲ್ಯಾಣ ಇಲಾಖೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಹಯೋಗದಲ್ಲಿ, ಡಾ.ಮಹಾಂತ ಶಿವಯೋಗಿಗಳ ಜನ್ಮ ದಿನಾಚರಣೆ ಪ್ರಯುಕ್ತ ವ್ಯಸನ ಮುಕ್ತ ದಿನಾಚರಣೆ ಕಾರ್ಯಕ್ರಮ ಹಿನ್ನೆಲೆಯಲ್ಲಿ ಶ್ರೀ ಸಿದ್ಧೇಶ್ವರ ದೇವಸ್ಥಾನದ ಆವರಣದಿಂದ ಆರಂಭಗೊ0ಡ ಜನಜಾಗೃತಿ ಜಾಥಾಗೆ ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ಅವರು ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು.

ಜಾಗೃತಿ ಜಾಥಾವು ಗಾಂಧಿ ಚೌಕ,ಡಾ.ಬಿ.ಆರ್.ಅಂಬೇಡ್ಕರ್ ವೃತ್ತ, ಬಸವೇಶ್ವರ ವೃತ್ತ,ಕನಕದಾಸ ವೃತ್ತದ ಮೂಲಕ ಸಾಗಿ ನಗರದ ಕಂದಗಲ್ ಶ್ರೀ ಹನುಮಂತರಾಯ ರಂಗ ಮಂದಿರದಲ್ಲಿ ಸಮಾವೇಶಗೊಂಡಿತು.

ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿ ಸಂಪತ್ ಗುಣಾರಿ, ಸಮಾಜಕಲ್ಯಾಣ ಇಲಾಖೆ ಉಪ ನಿರ್ದೇಶಕರಾದ ಮಹೇಶ ಪೋತದಾರ,ಪಿಯು ಡಿಡಿ ಚಂದ್ರಶೇಖರ ಹೊಸಮನಿ,ಜಿಲ್ಲಾ ಪಂಚಾಯತಿಯ ಮುಖ್ಯ ಲೆಕ್ಕಾಧಿಕಾರಿ ರಾಮಣ್ಣ ಅಥಣಿ, ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ವಿಭಾಗೀಯ ನಿಯಂತ್ರಣಾಧಿಕಾರಿಗಳಾದ ನಾರಾಯಣಪ್ಪ ಕುರುಬರ, ಜಿಲ್ಲಾ ಎನ್‌ಐಸಿ ಅಧಿಕಾರಿ ಶಿವಾನಂದ ಗೂಗವಾಡ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಸಂತೋಷ ಭೋವಿ, ವಿಜಯಪುರ ತಾಲೂಕಾ ಆರೋಗ್ಯಾಧಿಕಾರಿಗಳಾದ ಕೆ.ಡಿ ಗುಂಡಬಾವಡಿ, ಸೇರಿದಂತೆ ವಿವಿಧ ಶಾಲಾ ಕಾಲೇಜಿನ ವಿದ್ಯಾರ್ಥಿಗಳು ಸಾರ್ವಜನಿಕರು ಉಪಸ್ಥಿತರಿದ್ದರು.

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande