ಗದಗ, 25 ಜುಲೈ (ಹಿ.ಸ.) :
ಆ್ಯಂಕರ್ : ಗದಗ ಜಿಲ್ಲೆಯ ಕೃಷಿಕರು ಈಗ ಗೊಬ್ಬರಕ್ಕಾಗಿ ಪರಿತಪಿಸುತ್ತಿದ್ದಾರೆ. ನಗರದ ನಾಮಜೋಶಿ ರಸ್ತೆಯಲ್ಲಿರುವ ಗೊಬ್ಬರ ಅಂಗಡಿಯ ಮುಂದೆ ನಸುಕಿನಿಂದಲೇ ರೈತರು ಗೊಬ್ಬರದ ನಿರೀಕ್ಷೆಯಲ್ಲಿ ಸಾಲಿನಲ್ಲಿ ನಿಂತಿದ್ದಾರೆ. ಊಟ, ನಿದ್ರೆ ಬದಿಗೊತ್ತಿ ಗೊಬ್ಬರಕ್ಕಾಗಿ ರಸ್ತೆಯಲ್ಲೇ ದಿನ ಕಳೆಯುತ್ತಿದ್ದಾರೆ.
ಗೊಬ್ಬರಕ್ಕಾಗಿ ಗ್ರಾಮೀಣ ಪ್ರದೇಶಗಳಿಂದ ಬಂದ ರೈತರು ಕುಟುಂಬ ಸಮೇತರಾಗಿ ಸಾಲಿನಲ್ಲಿ ನಿಂತು ‘ನಮಗೂ ಗೊಬ್ಬರ ಬೇಕು’ ಎಂದು ಪಟ್ಟುಹಿಡಿದಿದ್ದಾರೆ. ದಿನವಿಡೀ ಮಳೆಯಲ್ಲಿಯೇ ಕ್ಯೂನಲ್ಲಿ ನಿಂತ ರೈತರು, ಅಂಗಡಿಯಲ್ಲಿ ಕೇವಲ 150 ಕೋಪನ್‌ಗಳನ್ನು ಮಾತ್ರ ವಿತರಿಸಲಾಗುತ್ತಿದೆ ಎಂಬ ಆರೋಪ ಮಾಡಿದ್ದಾರೆ. ಉಳಿದವರು ಕೈಬಿಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಈ ನಡುವೆ ಗೊಬ್ಬರ ನೀಡುವ ಹೆಸರಿನಲ್ಲಿ ಹೆಚ್ಚುವರಿ ಹಣ ವಸೂಲಿ ಮಾಡಲಾಗುತ್ತಿದೆ ಎಂಬ ಆರೋಪವೂ ಕೇಳಿಬಂದಿದ್ದು, ರೈತರಿಂದ ಆಕ್ರೋಶ ವ್ಯಕ್ತವಾಗಿದೆ. ಗದಗ ಜಿಲ್ಲೆಯ ಕೇಂದ್ರದಲ್ಲೇ ಈ ರೀತಿಯ ಶೋಷಣೆ ನಡೆಯುತ್ತಿರುವುದು ನಾಚಿಕೆಗೇಡಾಗಿದ್ದು, ಕೃಷಿ ಇಲಾಖೆಯ ಅಧಿಕಾರಿಗಳು ಕುಂಭಕರ್ಣ ನಿದ್ರೆಗೆ ಜಾರಿದ್ದಾರೆ ಎಂದು ರೈತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸರ್ಕಾರ ಗೊಬ್ಬರ ವಿತರಣೆಯನ್ನೆ ಸಮರ್ಪಕವಾಗಿ ವಿತರಣೆ ಮಾಡಬೇಕು ಎಂದು ಒತ್ತಾಯ ಮಾಡಿದರು.
ಹಿಂದೂಸ್ತಾನ್ ಸಮಾಚಾರ್ / lalita MP