ಕೊಪ್ಪಳ, 24 ಜುಲೈ (ಹಿ.ಸ.) :
ಆ್ಯಂಕರ್ : ಮಿಷನ್ ವಾತ್ಸಲ್ಯ ಯೋಜನೆಯಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮಕ್ಕಳ ಸಹಾಯವಾಣಿ 1098ರ ಪರಿಷ್ಕೃತ ಲೋಗೋವನ್ನು ಜಿಲ್ಲಾಧಿಕಾರಿ ಸುರೇಶ ಬಿ. ಇಟ್ನಾಳ ಅವರು ಗುರುವಾರ ಜಿಲ್ಲಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ ಬಿಡುಗಡೆಗೊಳಿಸಿದರು.
ಕೊಪ್ಪಳ ಜಿಲ್ಲೆಯ ಶೈಕ್ಷಣಿಕ ಸಂಸ್ಥೆಗಳಲ್ಲಿ, ಸರ್ಕಾರಿ ಕಚೇರಿಗಳ ಆವರಣ, ಬಸ್ ನಿಲ್ದಾಣಗಳ ಮತ್ತು ಇನ್ನೂ ಮುಂತಾದ ಸ್ಥಳಗಳಲ್ಲಿ ಮಕ್ಕಳ ಸಹಾಯವಾಣಿ-1098ರ ಕುರಿತು ಶಾಶ್ವತ ಬರಹವನ್ನು ಕಡ್ಡಾಯವಾಗಿ ಬರೆಯಿಸುವಂತೆ ಜಿಲ್ಲಾಧಿಕಾರಿಗಳು ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕೊಪ್ಪಳ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಮಹಾಂತಸ್ವಾಮಿ ಪೂಜಾರ್ ಅವರು ಮಾತನಾಡಿ, ಮಿಷನ್ ವಾತ್ಸಲ್ಯ ಯೋಜನೆಯಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮಕ್ಕಳ ಸಹಾಯವಾಣಿ 1098 ಅನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಮಕ್ಕಳಲ್ಲಿ ಜಾಗೃತಿಯನ್ನು ಮೂಡಿಸಲು ಅದರ ಲೋಗೋವನ್ನ ಬದಲಾಯಿಸಲಾಗಿದ್ದು, ಇದರ ಕುರಿತು ಸಮುದಾಯದಲ್ಲಿ ವ್ಯಾಪಕವಾದ ಜಾಗೃತಿಯನ್ನು ಮೂಡಿಸಬೇಕಾಗಿರುತ್ತದೆ.
ಕರ್ನಾಟಕ ರಾಜ್ಯ ಮಕ್ಕಳ ರಕ್ಷಣಾ ನೀತಿ 2016 ಪರಿಷ್ಕರಣೆ 2023 ರನ್ವಯ ಹಾಗೂ ಮಾನ್ಯ ಉಚ್ಚ ನ್ಯಾಯಾಲಯ ಕರ್ನಾಟಕ ನಿರ್ದೇಶನದಂತೆ ಶೈಕ್ಷಣಿಕ ಸಂಸ್ಥೆಗಳಲ್ಲಿ, ವಸತಿ ನಿಲಯಗಳಲ್ಲಿ, ವಸತಿ ಸಹಿತ ಶೈಕ್ಷಣಿಕ ಸಂಸ್ಥೆಗಳಲ್ಲಿ, ಸರಕಾರಿ ಕಚೇರಿಗಳ ಆವರಣಗಳಲ್ಲಿ ಈ ಮಕ್ಕಳ ಸಹಾಯವಾಣಿಯ ಕುರಿತು ಕಡ್ಡಾಯವಾಗಿ ಸಾರ್ವಜನಿಕರಿಗೆ ಕಾಣುವಂತೆ ಪ್ರದರ್ಶಿಸ ಬೇಕಾಗಿರುತ್ತದೆ.
ಇದರಿಂದ ಸಂಕಷ್ಟ ಪರಿಸ್ಥಿತಿಯಲ್ಲಿರುವ ಮಕ್ಕಳು ತಮ್ಮ ಸಮಸ್ಯೆಗಳ ಕುರಿತು ಅಥವಾ ಮಗುವಿನ ಸಂಕಷ್ಟಕರ ಪರಿಸ್ಥಿತಿಯ ಕುರಿತು ಸಾರ್ವಜನಿಕರು ಈ ಸಹಾಯವಾಣಿಗೆ ಮಾಹಿತಿಯನ್ನು ನೀಡ ಬಹುದಾಗಿದೆ. ಮಾಹಿತಿಯು ಲಭ್ಯವಾದ 60 ನಿಮಿಷದಲ್ಲಿ, ಅಂತಹ ಮಗುವನ್ನ ರಕ್ಷಿಸಿ ಮುಂದಿನ ಪುನರ್ವಸತಿಗಾಗಿ ಮಕ್ಕಳ ಕಲ್ಯಾಣ ಸಮಿತಿ, ಕೊಪ್ಪಳ ರವರ ಮುಂದೆ ಹಾಜರರ್ಪಡಿಸಲಾಗುವುದು ಎಂದು ಅವರು ಸಭೆಯಲ್ಲಿ ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ರಾಮ್ ಎಲ್. ಅರಸಿದ್ದಿ, ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ, ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಮಲ್ಲಿಕಾರ್ಜುನ ತೊದಲಬಾಗಿ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಮಂಜುನಾಥ ಗುಂಡುರ, ಜಿಲ್ಲಾ ತರಬೇತಿ ಕೇಂದ್ರದ ಪ್ರಾಂಶುಪಾಲರಾದ ಕೃಷ್ಣಮೂರ್ತಿ ದೇಸಾಯಿ, ಜಂಟಿ ಕೃಷಿ ನಿರ್ದೇಶಕ ರುದ್ರೇಶಪ್ಪ ಟಿ.ಎಸ್., ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಪರಶುರಾಮ ಶೆಟ್ಟಪ್ಪನವರ, ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಶ್ರೀಶೈಲ ಬಿರಾದಾರ, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಜಗದೀಶ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್