ಬಳ್ಳಾರಿ, 24 ಜುಲೈ (ಹಿ.ಸ.) :
ಆ್ಯಂಕರ್ : ಬಳ್ಳಾರಿ ನಗರ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯ ಮೂರು ಜನವಸತಿ ಪ್ರದೇಶದಲ್ಲಿ ‘ನಮ್ಮ ಕ್ಲಿನಿಕ್’ ಕೇಂದ್ರಗಳನ್ನು ಬಳ್ಳಾರಿ ನಗರ ಶಾಸಕ ನಾರಾ ಭರತರೆಡ್ಡಿ ಅವರು ಗುರುವಾರ ಉದ್ಘಾಟಿಸಿ, ಲೋಕಾರ್ಪಣೆ ಮಾಡಿದ್ದಾರೆ.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮಹಾನಗರ ಪಾಲಿಕೆ ಇವರ ಸಂಯುಕ್ತಾಶ್ರಯದಲ್ಲಿ ನಗರದ ಕರಿಮಾರೆಮ್ಮ ಕಾಲೋನಿ, ಶ್ರೀರಾಂಪುರ ಕಾಲೋನಿ, ಎ.ಪಿ.ಎಂಸಿ ಮಾರುಕಟ್ಟೆ ವ್ಯಾಪ್ತಿಯಲ್ಲಿ ಚೇಂಬರ್ ಉಚಿತ ಆಸ್ಪತ್ರೆಯಲ್ಲಿ ‘ನಮ್ಮ ಕ್ಲಿನಿಕ್’ ಗಳನ್ನು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ನಾರಾ ಭರತರೆಡ್ಡಿ ಅವರು, ಸಾರ್ವಜನಿಕರು ಚಿಕಿತ್ಸೆಗಾಗಿ ದೂರದ ಸ್ಥಳಗಳಿಗೆ ಹೋಗುವ ಅಗತ್ಯವಿಲ್ಲ. ಬಡ, ಆರ್ಥಿಕವಾಗಿ ಹಿಂದುಳಿದವರು ಸಮೀಪದ `ನಮ್ಮ ಕ್ಲಿನಿಕ್’ನಲ್ಲಿ ಚಿಕಿತ್ಸೆ ಪಡೆದು, ಉಚಿತವಾಗಿ ಔಷಧಿಯನ್ನು ಪಡೆಯಲು ಅವಕಾಶ ಕಲ್ಪಿಸಲಾಗಿದೆ ಎಂದರು.
ಇಂದಿರಾನಗರದಲ್ಲಿ ಇರುವ ‘ನಮ್ಮ ಕ್ಲಿನಿಕ್’ ಅನ್ನು 5 ಕೋಟಿ ರೂ. ವೆಚ್ಚದಲ್ಲಿ ಸುಸಜ್ಜಿತ ಆಸ್ಪತ್ರೆಯನ್ನಾಗಿ, ಮಿಲ್ಲರ್‍ಪೇಟೆಯಲ್ಲಿ ಹೆರಿಗೆ ಆಸ್ಪತ್ರೆಯನ್ನು, ಬಳ್ಳಾರಿ ಜಿಲ್ಲಾ ಆಸ್ಪತ್ರೆ ಆವರಣದಲ್ಲಿ 300 ಹಾಸಿಗೆಗಳ ಆಸ್ಪತ್ರೆಯನ್ನು ನಿರ್ಮಾಣ ಮಾಡಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಯಲ್ಲಾ ರಮೇಶ್ ಬಾಬು ಅವರು, ಬಳ್ಳಾರಿ ಜಿಲ್ಲೆಗೆ 2023-24 ನೇ ಸಾಲಿಗೆ 12 `ನಮ್ಮ ಕ್ಲಿನಿಕ್’ ಮತ್ತು 2024-25 ನೇ ಸಾಲಿಗೆ ಬಳ್ಳಾರಿ ನಗರದಲ್ಲಿ 06, ಸಿರುಗುಪ್ಪ 01 ಮತ್ತು ಕಂಪ್ಲಿ 01 ಸೇರಿ ಒಟ್ಟು 08 ನಮ್ಮ ಕ್ಲಿನಿಕ್‍ಗಳು ಮಂಜೂರಾಗಿವೆ. ಬಳ್ಳಾರಿ ನಗರದಲ್ಲಿ 03 ಲೋಕಾರ್ಪಣೆಗೊಂಡಿದ್ದು, ಒಟ್ಟು 20 `ನಮ್ಮ ಕ್ಲಿನಿಕ್’ಗಳು ಜಿಲ್ಲೆಯಲ್ಲಿ ಸೇವೆ ಸಲ್ಲಿಸುತ್ತಿವೆ ಎಂದರು.
ಸೋಮವಾರದಿಂದ ಶನಿವಾರದವರೆಗೆ `ನಮ್ಮ ಕ್ಲಿನಿಕ್’ ಒಬ್ಬ ವೈದ್ಯಾಧಿಕಾರಿ, ನರ್ಸಿಂಗ್ ಸ್ಟಾಫ್, ಲ್ಯಾಬ್ ಟೆಕ್ನಿಷಿಯನ್ ಹಾಗೂ ಡಿ-ದರ್ಜೆ ನೌಕರರು ಇರಲಿದ್ದಾರೆ.
ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆಯ ಸದಸ್ಯ ಮಿಂಚು ಶ್ರೀನಿವಾಸ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಎನ್.ಬಸರೆಡ್ಡಿ, ಜಿಲ್ಲಾ ಆರ್‍ಸಿಹೆಚ್ ಅಧಿಕಾರಿ ಡಾ. ಹನುಮಂತಪ್ಪ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ಮರಿಯಂಬಿ, ಜಿಲ್ಲಾ ಕುಷ್ಠರೋಗ ನಿರ್ಮೂಲನಾಧಿಕಾರಿ ಡಾ. ವೀರೇಂದ್ರ ಕುಮಾರ್, ಜಿಲ್ಲಾ ಕ್ಷಯರೋಗ ನಿರ್ಮೂಲನಾಧಿಕಾರಿ ಡಾ. ಇಂದ್ರಾಣಿ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಖುರ್ಸುದ್ ಬೇಗಂ ಸೇರಿದಂತೆ ನಮ್ಮ ಕ್ಲಿನಿಕ್‍ಗಳ ವೈದ್ಯಾಧಿಕಾರಿಗಳು, ಸಿಬ್ಬಂದಿ ವರ್ಗ ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್