ಬಂಡೀಪುರ, 24 ಜುಲೈ (ಹಿ.ಸ.) :
ಆ್ಯಂಕರ್ : ಕರ್ನಾಟಕದ ಪ್ರಮುಖ ಹುಲಿ ಮೀಸಲು ಪ್ರದೇಶವಾದ ಬಂಡೀಪುರದಲ್ಲಿ ಹುಲ್ಲುಗಾವಲು ಅಭಿವೃದ್ಧಿ ಯೋಜನೆಯ ಹೆಸರಿನಲ್ಲಿ ಸಾರ್ವಜನಿಕ ಹಣದ ದುರುಪಯೋಗ ಹಾಗೂ ಅರಣ್ಯ ಆವಾಸಸ್ಥಾನದ ನಾಶ ಸಂಭವಿಸುತ್ತಿರುವ ಬಗ್ಗೆ ಗಂಭೀರ ಆರೋಪಗಳು ಕೇಳಿ ಬಂದಿವೆ.
ಹುಲ್ಲುಗಾವಲು ಅಭಿವೃದ್ಧಿಗೆ ಸರ್ಕಾರ ಒಂದು ಹೆಕ್ಟೇರ್‌ಗೆ ₹10,000 ರೂ.ಗಳನ್ನು ಮೀಸಲಿಟ್ಟಿದ್ದು, 100 ಹೆಕ್ಟೇರ್‌ಗೆ ₹1 ಕೋಟಿಯಷ್ಟು ವೆಚ್ಚವಾಗುತ್ತಿದೆ. ಈ ಯೋಜನೆಯಡಿಯಲ್ಲಿ ಸ್ಥಳೀಯ ಸಮುದಾಯಗಳನ್ನು ತೊಡಗಿಸಿಕೊಳ್ಳಲು ಯೋಜನೆ ರೂಪಿಸಲಾಯಿತು. ಆದರೆ ಹಿರಿಯ ಅರಣ್ಯಾಧಿಕಾರಿಗಳು ಯೋಜನೆಯು ತ್ವರಿತವಾಗಿ ಪೂರ್ಣವಾಗಬೇಕೆಂಬ ಹೆಸರಿನಲ್ಲಿ ಜೆಸಿಬಿ ಹಾಗೂ ಹಿಟಾಚಿ ಯಂತ್ರೋಪಕರಣಗಳ ಬಳಕೆಗೆ ಮುಂದಾಗಿದ್ದಾರೆ.
ಇದರಿಂದ ಬಂಡೀಪುರದ ವನ್ಯಜೀವಿಗಳ ಆವಾಸಸ್ಥಾನಗಳು ಹಾನಿಗೊಳಗಾಗುತ್ತಿದ್ದು, ನುಗು ವನ್ಯಜೀವಿ ಅಭಯಾರಣ್ಯದಂತಹ ಪ್ರದೇಶಗಳಲ್ಲಿ ದಿಂಡಲ್, ಥರೆ ಸೇರಿದಂತೆ ಹಲವಾರು ಸ್ಥಳೀಯ ಮರ ಪ್ರಭೇದಗಳು ನಾಶವಾಗಿವೆ.
ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ ಮಾರ್ಗಸೂಚಿಗಳ ಪ್ರಕಾರ ಹುಲಿ ಮೀಸಲು ಪ್ರದೇಶಗಳಲ್ಲಿ ಭಾರಿ ಯಂತ್ರೋಪಕರಣಗಳ ಬಳಕೆ ನಿರ್ಬಂಧಿತವಾಗಿದೆ. ಆದರೆ ಬಂಡೀಪುರದಲ್ಲಿ ಈ ನಿಯಮ ಪಾಲನೆಯಾಗುತ್ತಿಲ್ಲ ಎಂಬುದು ಪರಿಸರ ಸಂರಕ್ಷಣಾ ಹೋರಾಟಗಾರರ ಆರೋಪ.
ಈ ಕುರಿತು ಮಾತುನಾಡಿದ ಸ್ಥಳೀಯರು, ಕ್ಷಣಾರ್ಧದಲ್ಲಿ ಹಣ ಗಳಿಸಬಹುದು, ಆದರೆ ಹಿಟಾಚಿ ಮತ್ತು ಜೆಸಿಬಿಗಳಿಂದ ನಾಶವಾದ ಅರಣ್ಯ ಚೇತರಿಸಿಕೊಳ್ಳಲು ದಶಕಗಳೇ ಬೇಕಾಗುತ್ತದೆ, ಎಂದು ವಿಷಾದ ವ್ಯಕ್ತಪಡಿಸಿದ್ದಾರೆ.
ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ ತಕ್ಷಣವೇ ಮಧ್ಯಪ್ರವೇಶಿಸಿ ಸಂರಕ್ಷಿತ ಪ್ರದೇಶಗಳಲ್ಲಿ ಯಂತ್ರೋಪಕರಣಗಳ ಬಳಕೆಗೆ ತಡೆಹಾಕಬೇಕು ಎಂಬ ಆಗ್ರಹವಿದೆ. ಇದಕ್ಕೆ ಜೊತೆಗೆ ಕರ್ನಾಟಕ ಸರ್ಕಾರವು ಹುಲ್ಲುಗಾವಲು ಅಭಿವೃದ್ಧಿಯಲ್ಲಿ ನಡೆಯುತ್ತಿರುವ ಅಕ್ರಮದ ಬಗ್ಗೆ ಸಮಗ್ರ ತನಿಖೆ ನಡೆಸಬೇಕೆಂದು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa