ಯೂರಿಯಾ ಗೊಬ್ಬರಕ್ಕಾಗಿ ರೈತರ ಪರದಾಟ
ಗದಗ, 24 ಜುಲೈ (ಹಿ.ಸ.) : ಆ್ಯಂಕರ್ : ಯೂರಿಯಾ ಗೊಬ್ಬರಕ್ಕಾಗಿ ಗದಗ ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದ ಕೃಷಿ ಪರಿಕರ ಅಂಗಡಿಯೆದುರು ನಸುಕಿನಲ್ಲಿಯೇ ರೈತರು ಸರದಿ ಸಾಲಿನಲ್ಲಿ ನಿಂತು ನೂಕು ನುಗ್ಗಾಟದೊಂದಿಗೆ ಪೊಲೀಸರ ಕಾವಲಿನಲ್ಲಿ ಗೊಬ್ಬರ ಪಡೆಯುವಂತಾಗಿದೆ. ಮುಂಗಾರಿನ ಸಕಾಲಿಕ ಮಳೆಯಿಂದ ಬಿತ್ತನೆ ಮಾಡಿದ ಬೆ
ಪೋಟೋ


ಗದಗ, 24 ಜುಲೈ (ಹಿ.ಸ.) :

ಆ್ಯಂಕರ್ : ಯೂರಿಯಾ ಗೊಬ್ಬರಕ್ಕಾಗಿ ಗದಗ ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದ ಕೃಷಿ ಪರಿಕರ ಅಂಗಡಿಯೆದುರು ನಸುಕಿನಲ್ಲಿಯೇ ರೈತರು ಸರದಿ ಸಾಲಿನಲ್ಲಿ ನಿಂತು ನೂಕು ನುಗ್ಗಾಟದೊಂದಿಗೆ ಪೊಲೀಸರ ಕಾವಲಿನಲ್ಲಿ ಗೊಬ್ಬರ ಪಡೆಯುವಂತಾಗಿದೆ.

ಮುಂಗಾರಿನ ಸಕಾಲಿಕ ಮಳೆಯಿಂದ ಬಿತ್ತನೆ ಮಾಡಿದ ಬೆಳೆಗಳು ಸಮೃದ್ಧವಾಗಿ ಬೆಳೆದಿವೆ. ಆದರೆ ಕಳೆದ 20 ದಿನಗಳಿಂದ ಮಳೆಯೇ ಆಗದ್ದರಿಂದ ಯೂರಿಯಾ ಗೊಬ್ಬರದ ಅವಶ್ಯಕತೆಯಿದ್ದರೂ

ರೈತರು ಸುಮ್ಮನಿದ್ದರು. ಕಳೆದ ಎರಡು ದಿನಗಳಿಂದ ತಾಲೂಕಿನಾದ್ಯಂತ ಉತ್ತಮ ಮಳೆಯಾಗಿದ್ದರಿಂದ ಗೊಬ್ಬರ ದಾಸ್ತಾನು ಬಂದಿರುವ ಸುದ್ದಿ ತಿಳಿದ ನೂರಾರು ರೈತರು ಏಕಕಾಲಕ್ಕೆ ದೌಡಾಯಿಸಿದ್ದಾರೆ.

ದೊಡ್ಡರ ಅಂಗಡಿ ತೆರೆಯುವ ಮುನ್ನವೇ ನೂರಾರು ರೈತರು ಏಕಕಾಲಕ್ಕೆ ಸೇರಿದ್ದರಿಂದ ನೂಕುನುಗ್ಗಲು ಉಂಟಾಯಿತು. ರೈತರು ಪರಸ್ಪರ ವಾಗ್ವಾದಕ್ಕಿಳಿದ ವಿಷಯ ತಿಳಿದ ಪೊಲೀಸರು ರೈತರನ್ನು ಸಾಲಿನಲ್ಲಿ ನಿಲ್ಲಿಸಿದರು.

ಕೃಷಿ ಇಲಾಖೆ ಈಗಾಗಲೇ ನೂರಾರು ಟನ್ ಯೂರಿಯಾ ಗೊಬ್ಬರ ಮಾರಾಟ ಮಾಡಲಾಗಿದೆ. ಮಾರಾಟಗಾರ ಎಲ್ಲ ಅಂಗಡಿಗಳಿಗೂ ಭೇಟಿ ನೀಡಿ ಪರಿಶೀಲಿಸಲಾಗುತ್ತಿದೆ. ಯಾರೂ ಕೃತಕ ಅಭಾವ ಸೃಷ್ಟಿಸುವ/ಹೆಚ್ಚಿನ ಲಾಭಕ್ಕೆ ಮಾರುವುದು ಕಂಡು ಬಂದಿಲ್ಲ. ಇನ್ನಷ್ಟು ಬೇಡಿಕೆ ಸಲ್ಲಿಸಲಾಗಿದ್ದು, ಯೂರಿಯಾ ಪೂರೈಕೆಯಾಗಲಿದೆ. ರೈತರು ಹರಳು ಯೂರಿಯಾಕ್ಕೆ ಮುಗಿಬೀಳುವ ಬದಲು ನ್ಯಾನೋ ಯೂರಿಯಾ ಬಳಸಬೇಕು ಎಂದು ಶಿರಹಟ್ಟಿ ಸಹಾಯಕ ಕೃಷಿ ನಿರ್ದೇಶಕ ರೇವಣಪ್ಪ ಮನಗೂಳಿ ತಿಳಿಸಿದರು.

ಅಧಿಕಾರಿಗಳ ಸೂಚನೆಯಂತೆ ಪ್ರತಿ ರೈತರಿಗೆ 2/3 ಚೀಲ ಕೊಟ್ಟು ಸಮಾಧಾನಪಡಿಸಿದರು. ಲಕ್ಷ್ಮೀಶ್ವರ ನೆರೆಯ ಕುಂದಗೋಳ, ಶಿರಹಟ್ಟಿ, ಶಿಗ್ಗಾಂವ, ಸವಣೂರ ತಾಲೂಕಿನ ರೈತರೂ ಗೊಬ್ಬರ ಖರೀದಿಗೆ ಬರುತ್ತಿದ್ದು, ಬೇಡಿಕೆ ಹೆಚ್ಚಿದ್ದರಿಂದ ಗೊಬ್ಬರದ ಕೊರತೆ ಕಾಡುತ್ತಿದೆ. ಭಾನುವಾರ ನಾಲೈದು ಅಂಗಡಿಗಳು ಸೇರಿ ಒಟ್ಟು 200 ಟನ್ ಯೂರಿಯಾ ಗೊಬ್ಬರ ಬಂದರೂ ಸರದಿ ಸಾಲಿನಲ್ಲಿ ನಿಂತ ನೂರಾರು ರೈತರು ಗೊಬ್ಬರ ಸಿಗದೇ ಸಪ್ಪೆ ಮೋರೆಯೊಂದಿಗೆ ತೆರಳಿದರು.

ಬೆಳಿಗ್ಗೆಯಿಂದ ಸಾಲಲ್ಲಿ ನಿಂತು ಗೊಬ್ಬರ ಸಿಗದೇ ಹೋಗುತ್ತಿದ್ದೇವೆ. ಯಾವಾಗ ಬರುತ್ತದೆ ಎಂಬ ಮಾಹಿತಿಯೂ ಸಿಗುತ್ತಿಲ್ಲ ಎಂಬ ಮಾತುಗಳು ರೈತರಿಂದ ಕೇಳಿ ಬಂದವು. ಗದಗ ಜಿಲ್ಲೆಗೆ ಗೊಬ್ಬರ ಪೊರೈಕೆಯಲ್ಲಿ ಪ್ರತಿಬಾರಿ ಮಲತಾಯಿಧೋರಣೆ ಎದ್ದು ಕಾಣುತ್ತಿದೆ. ಜಿಲ್ಲೆಗೆ ಅವಶ್ಯವಿರುವಷ್ಟು ಗೊಬ್ಬರ ಕಂಪನಿಯವರು ಪೂರೈಕೆ ಮಾಡುತ್ತಿಲ್ಲ. ಗೊಬ್ಬರ ಕಂಪನಿಗಳು ರೈತರ ಈ ಬೇಡಿಕೆಯನ್ನು ಬಂಡವಾಳ ಮಾಡಿಕೊಂಡು ವ್ಯಾಪಾರಸ್ಥರಿಗೆ ಯೂರಿಯಾದೊಂದಿಗೆ ಇತರೇ ಕಾಂಪ್ಲೆಕ್ಸ್ ಗೊಬ್ಬರ ಖರೀದಿಸುವಂತೆ ಕಟ್ಟಳೆ ಹಾಕುತ್ತಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande