ಬಾಲ್ಯ ವಿವಾಹ ಪ್ರಕರಣಗಳನ್ನು ತಡೆಗಟ್ಟುವದು ಪ್ರತಿಯೊಬ್ಬರ ಜವಾಬ್ದಾರಿ : ಡಾ ಎಂ. ಆರ್. ರವಿ .
ಬಾಲ್ಯ ವಿವಾಹ ಪ್ರಕರಣಗಳನ್ನು ತಡೆಗಟ್ಟುವದು ಪ್ರತಿಯೊಬ್ಬರ ಜವಾಬ್ದಾರಿ ಡಾ ಎಂ ಆರ್ ರವಿ .
ಚಿತ್ರ : ಕೋಲಾರ ಜಿಲ್ಲಾಧಿಕಾರಿ ಡಾ. ಎಂಆರ್ ರವಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ನಡೆಸಿದರು.ಪ್ರಗತಿ ಪರಿಶೀಲನೆ ನಡೆಸಿದರು.


ಕೋಲಾರ, ೨೪ ಜುಲೈ (ಹಿ.ಸ.) :

ಆ್ಯಂಕರ್ : ಬಾಲ್ಯ ವಿವಾಹ ಮತ್ತು ಬಾಲ ಗರ್ಭಿಣಿಯರ ಪ್ರಮಾಣವನ್ನು ಕಡಿಮೆ ಮಾಡಲು ಸಂಬಂಧಪಟ್ಟ ಅಧಿಕಾರಿಗಳು ಒತ್ತು ನೀಡಬೇಕು ಎಂದು ಜಿಲ್ಲಾಧಿಕಾರಿ ಡಾ. ಎಂಆರ್ ರವಿ ಅವರು ಅಭಿಪ್ರಾಯಪಟ್ಟರು.

ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಮಕ್ಕಳ ರಕ್ಷಣಾ ನಿರ್ದೇಶನಾಲಯ, ಮಿಷನ್ ವಾತ್ಸಲ್ಯ ಯೋಜನೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಇವರ ವತಿಯಿಂದ ಹಮ್ಮಿಕೊಂಡಿದ್ದ, ಇಲಾಖೆಯ ಯೋಜನೆಗಳ ಮೊದಲನೇ ತ್ರೈಮಾಸಿಕ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಬಾಲ್ಯ ವಿವಾಹ ನಿಷೇಧ ಕಾಯ್ದೆಯ ತಡೆಗಟ್ಟಲು ಗ್ರಾಮೀಣ ಪ್ರದೇಶ ಹಾಗೂ ಕೆಲ ಸಮುದಾಯಗಳಲ್ಲಿ ಪ್ರದೇಶಗಳಿಗೆ ಹೋಗಿ ಅರಿವು ಮತ್ತು ಪ್ರಚಾರ ಕಾರ್ಯಕ್ರಮಗಳನ್ನು ಮಾಡಿ ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿದರು.

ಏಕವ್ಯಕ್ತಿ ಪೋಷಕರ ಪ್ರಕರಣಗಳನ್ನು ಪ್ರಕರಣಗಳನ್ನು ಪತ್ತೆ ಹಚ್ಚಿ ಗೃಹಲಕ್ಷ್ಮಿ ಯೋಜನೆ ತಲುಪುವಂತೆ ಕಾರ್ಯನಿರ್ವಹಿಸಿ. ಸರ್ಕಾರಿ ದತ್ತು ಸಂಸ್ಥೆಯು ೦-೬ ವರ್ಷದೊಳಗಿನ ಕುಟುಂಬದ ಪ್ರೀತಿ ವಂಚಿತ, ಅನಾಥ, ಪರಿತ್ಯಕ್ತ ಹಾಗೂ ನಿರ್ಗತಿಕ ಮಕ್ಕಳ ಪುನರ್ವಸತಿಗೆ ನೆರವಾಗುವ ಒಂದು ಸೂಕ್ತ ಸಂಸ್ಥೆ. ಇಂತಹ ಮಕ್ಕಳಿಗೆ ಶಾಶ್ವತ ಕುಟುಂಬದ ವ್ಯವಸ್ಥೆಯನ್ನು ಕಾನೂನು ಬದ್ಧವಾಗಿ ಕಲ್ಪಿಸಲು ದತ್ತು ಸಂಸ್ಥೆಯು ನೆರವಾಗುತ್ತದೆ. ವೀಕ್ಷಣಾಲಯ ಕಾನೂನಿನೊಂದಿಗೆ ಸಂಘರ್ಷಕ್ಕೊಳಪಟ್ಟ ೧೮ ವರ್ಷದೊಳಗಿನ ಮಕ್ಕಳ ವಿರುದ್ಧ ದಾಖಲಾಗಿರುವ ಪ್ರಕರಣದ ವಿಚಾರಣೆ ಬಾಕಿ ಇರುವ ಅವಧಿಯಲ್ಲಿ ತಾತ್ಕಾಲಿಕವಾಗಿ ಅಭಿರಕ್ಷಣೆ ಒದಗಿಸುವ ಸಂಸ್ಥೆಯಾಗಿದೆ ಎಂದರು.

ಮಕ್ಕಳ ಕಲ್ಯಾಣ ಸಮಿತಿಯ ಮುಂದೆ ಬಂದ ಮಕ್ಕಳ ಪ್ರಕರಣ ವಿಚಾರಣೆ ವೇಳೆಯಲ್ಲಿ ರಕ್ಷಣೆ ಮತ್ತು ಘೋಷಣೆ ಅಗತ್ಯವಿರುವ ಮಕ್ಕಳ ಪಾಲನೆ ಮತ್ತು ರಕ್ಷಣೆಗಾಗಿ ಹಾಗೂ ದೀರ್ಘಾವಧಿ ಪುನರ್ವಸತಿಗಾಗಿ ಬಾಲಕರ ಮತ್ತು ಬಾಲಕಿಯರಿಗಾಗಿ ಪ್ರತ್ಯೇಕ ಬಾಲ ಮಂದಿರಗಳನ್ನು ಸ್ಥಾಪಿಸಲಾಗಿದೆ. ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸರ್ಕಾರಿ ಮಕ್ಕಳ ಪಾಲನಾ ಸಂಸ್ಥೆಗಳಲ್ಲಿ ಒಟ್ಟು ೧೨೫ ಮಕ್ಕಳು ದಾಖಲಾಗಿರುತ್ತಾರೆ ಎಂದರು.

ಮುಖ್ಯಮಂತ್ರಿ ಬಾಲಸೇವಾ ಯೋಜನೆಯಡಿ ಕೋವಿಡ್-೧೯ ರಿಂದ ಇಬ್ಬರು ಪೋಷಕರನ್ನು ಕಳೆದುಕೊಂಡ ೮ ಮಕ್ಕಳಿಗೆ ಮಾಸಿಕ ರೂ.೩,೫೦೦/ಗಳ ಆರ್ಥಿಕ ಧನ ಸಹಾಯವನ್ನು ಆರ್.ಟಿ.ಜಿ.ಎಸ್ ಮುಖಾಂತರ ಫಲಾನುಭವಿಗಳ ಬ್ಯಾಂಕ್ ಖಾತೆಗೆ ನೇರ ನಗದು ವರ್ಗಾವಣೆಯನ್ನು ಮಾಡಲಾಗುತ್ತಿದೆ. ಪಿ.ಎಂ ಕೇರ್ ಫಾರ್ ಚಿಲ್ಡನ್ ಯೋಜನೆಯಡಿ ಮಕ್ಕಳ ಮಾಹಿತಿಯನ್ನು ಪಿ.ಎಂ. ಕೇರ್ ಪೋರ್ಟಲ್ನಲ್ಲಿ ಅಳವಡಿಸಲಾಗಿದ್ದು, ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ ಎಂದರು.

ರಾಷ್ಟ್ರ ವ್ಯಾಪ್ತಿಯಲ್ಲಿ ಚಾಲ್ತಿಯಲ್ಲಿರುವ ಮಕ್ಕಳ ಸಹಾಯವಾಣಿ ಯಾವುದೇ ರೀತಿಯಲ್ಲಿ ಸಂಕಷ್ಟದಲ್ಲಿ ಸಿಲುಕಿರುವ ರಕ್ಷಣೆ ಮತ್ತು ಪೋಷಣೆ ಅವಶ್ಯಕತೆ ಇರುವ ಮಕ್ಕಳಿಗೆ ತುರ್ತು ಸೇವೆಯನ್ನು ಒದಗಿಸಲು ಮಕ್ಕಳ ಸಹಾಯವಾಣಿ-೧೦೯೮ ನ್ನು ಇ.ಆರ್.ಎಸ್.ಎಸ್-೧೧೨ ನೊಂದಿಗೆ ವಿಲೀನಗೊಳಿಸಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧೀನದಲ್ಲಿ ಅನುಸ್ಥಾನಗೊಳಿಸಲಾಗುತ್ತಿದೆ ಎಂದು ತಿಳಿಸಿದರು.

೬ ವರ್ಷ ವಯಸ್ಸಿನ ಮೇಲ್ಪಟ್ಟ ಬಾಲಕ-ಬಾಲಕಿಯರನ್ನು ಸ್ಥಳೀಯ ಮೂರಾರ್ಜಿ ದೇಸಾಯಿ ಶಾಲೆಗಳಲ್ಲಿ ದಾಖಲು ಮಾಡಲು ಕ್ರಮಕೈಗೊಳ್ಳಿ ಎಂದು ಸೂಚಿಸಿದ ಅವರು ಈಗಾಗಲೇ ೧೧೦೮ ಅಂಗನವಾಡಿಗಳಿಗೆ ಸ್ವಂತ ಕಟ್ಟಡ ಇದ್ದು, ಉಳಿದ ಅಂಗನವಾಡಿ ಕೇಂದ್ರಗಳಿಗೆ ನಿವೇಷನ ಒದಗಿಸುವ ಪ್ರಕ್ರಿಯೆ ಚಾಲನೆಯಲ್ಲಿದೆ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿ ಬಾಲಸೇವಾ ಯೋಜನೆ, ಉಪಕಾರ ಯೋಜನೆ, ಪ್ರಾಯೋಜಕತ್ವ ಯೋಜನೆ, ಪೋಕೋ ಕಾಯ್ದೆಯಡಿ ಪರಿಹಾರ ಯೋಜನೆ, ಬಾಲನ್ಯಾಯ ಯೋಜನೆ, ಬಾಲ್ಯವಿವಾಹ ತಡೆ ಯೋಜನೆ, ಭಿಕ್ಷಟನಾ ನಿರ್ಮೂಲನಾ ಯೋಜನೆ, ಬಾಲ ಕಾರ್ಮಿಕರ ಕಾಯ್ದೆ, ಮಕ್ಕಳ ಸಹಾಯವಾಣಿ ಪ್ರಕರಣಗಳು, ಕುಟುಂಬ ದೌರ್ಜನ್ಯ ತಡೆ ಯೋಜನೆ, ಬಾಲಕಿಯರ ವಸತಿ ನಿಲಯಗಳ ನಿರ್ವಹಣೆ, ಸಖಿ ವನ್ ಸ್ಟಾಪ್ ಯೋಜನೆ, ಸ್ವಾದರಗೃಹ ಯೋಜನೆ, ಪೋಷಣೆ ಅಭಿಯಾನ, ಮಿಷನ್ ಶಕ್ತಿ ಯೋಜನೆ, ಮಾತೃವಂದನ ಮತ್ತು ಗೃಹಲಕ್ಷ್ಮಿ ಯೋಜನೆಗಳು ಸೇರಿದಂತೆ ಹಲವಾರು ಯೋಜನೆಗಳ ಕುರಿತು ಪ್ರಗತಿ ಪರಿಶೀಲನೆ ನಡೆಸಲಾಯಿತು.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಕಾರ್ಯನಿರ್ವಹಣಾಧಿಕಾರಿಗಳಾದ ಪ್ರವೀಣ್ ಬಿ ಬಾಗೇವಾಡಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ನಾರಾಯಣಸ್ವಾಮಿ, ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.

ಚಿತ್ರ : ಕೋಲಾರ ಜಿಲ್ಲಾಧಿಕಾರಿ ಡಾ. ಎಂಆರ್ ರವಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ನಡೆಸಿದರು.ಪ್ರಗತಿ ಪರಿಶೀಲನೆ ನಡೆಸಿದರು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande