ಸ್ಲಂ ಎಂದು ಘೋಷಣೆ ಮಾಡಲು ಒತ್ತಾಯಿಸಿ ಮನವಿ
ಗದಗ, 24 ಜುಲೈ (ಹಿ.ಸ.) : ಆ್ಯಂಕರ್ : ಗದಗ-ಬೆಟಗೇರಿ ಅವಳಿ ನಗರದಲ್ಲಿಯ ಅಘೋಷಿತ ಗುಡಿಸಲು ಪ್ರದೇಶಗಳನ್ನು ಸ್ಲಂ ಕಾಯ್ದೆ 1973ರ ಪ್ರಕಾರ ಅಧಿಕೃತವಾಗಿ ಸ್ಲಂ ಘೋಷಣೆ ಮಾಡಿ ಸ್ಥಳೀಯವಾಗಿ ನಾಗರಿಕ ಸೌಲಭ್ಯಗಳನ್ನು ಕಲ್ಪಿಸಬೇಕೆಂದು ಸ್ಲಂ ಜನಾಂದೋಲನ-ಕರ್ನಾಟಕ ಮತ್ತು ಗದಗ ಜಿಲ್ಲಾ ಸ್ಲಂ ಸಮಿತಿ ಪದಾಧಿಕಾರಿಗಳು ಕ
ಪೋಟೋ


ಗದಗ, 24 ಜುಲೈ (ಹಿ.ಸ.) :

ಆ್ಯಂಕರ್ : ಗದಗ-ಬೆಟಗೇರಿ ಅವಳಿ ನಗರದಲ್ಲಿಯ ಅಘೋಷಿತ ಗುಡಿಸಲು ಪ್ರದೇಶಗಳನ್ನು ಸ್ಲಂ ಕಾಯ್ದೆ 1973ರ ಪ್ರಕಾರ ಅಧಿಕೃತವಾಗಿ ಸ್ಲಂ ಘೋಷಣೆ ಮಾಡಿ ಸ್ಥಳೀಯವಾಗಿ ನಾಗರಿಕ ಸೌಲಭ್ಯಗಳನ್ನು ಕಲ್ಪಿಸಬೇಕೆಂದು ಸ್ಲಂ ಜನಾಂದೋಲನ-ಕರ್ನಾಟಕ ಮತ್ತು ಗದಗ ಜಿಲ್ಲಾ ಸ್ಲಂ ಸಮಿತಿ ಪದಾಧಿಕಾರಿಗಳು ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯ

ಕಾರ್ಯಪಾಲಕ ಅಭಿಯಂತರರಿಗೆ ಮನವಿ ಸಲ್ಲಿಸಿ ಆಗ್ರಹಿಸಿದರು.

ಗದಗ ಜಿಲ್ಲಾ ಸ್ಲಂ ಸಮಿತಿ ಅಧ್ಯಕ್ಷ ಇಮ್ಮಿಯಾಜ ಆರ್. ಮಾನ್ವಿ ಮಾತನಾಡಿ, ಗದಗ-ಬೆಟಗೇರಿ ನಗರದ ಅನೇಕ ಅಘೋಷಿತ ಗುಡಿಸಲು ಪ್ರದೇಶಗಳನ್ನು ಘೋಷಣೆಗಾಗಿ ಸ್ಥಳೀಯ ನಿವಾಸಿಗಳ ಎಲ್ಲಾ ದಾಖಲೆಗಳೊಂದಿಗೆ ಹಾಗೂ ನಗರಸಭೆಯಿಂದ ನೀಡಲಾಗಿರುವ ಠರಾವು ಪ್ರತಿ ಮತ್ತು ನಿರಾಕ್ಷೇಪಣಾ ಪತ್ರದೊಂದಿಗೆ ಅರ್ಜಿಗಳನ್ನು ಸಲ್ಲಿಸಿ 3 ವರ್ಷಗಳಾದರೂ ಈವರೆಗೂ ಸ್ಲಂ ಘೋಷಣೆ ಕುರಿತು ಅಗತ್ಯ ಕ್ರಮ ಕೈಗೊಳ್ಳದೇ ಸ್ಲಂ ಜನ ವಿರೋಧಿ ನೀತಿಯನ್ನು ಅನುಸರಿಸಲಾಗುತ್ತಿದೆ.

ಗದಗ ಸಮಿತಿಯಿಂದ ಹಲವಾರು ವರ್ಷಗಳಿಂದ ಗದಗ ಜಿಲ್ಲೆಯ ಮತ್ತು ಗದಗ-ಬೆಟಗೇರಿ ನಗರದ ಸ್ಲಂ ಪ್ರದೇಶದ ಕುಟುಂಬಗಳ ವಸತಿ, ಮೂಲಭೂತ ಸೌಲಭ್ಯ, ಹಕ್ಕುಪತ್ರ, ಪರಿಚಯ ಪತ್ರ, ಅಘೋಷಿತ ಗುಡಿಸಲು ಪ್ರದೇಶಗಳ ಘೋಷಣೆ ಇತ್ಯಾದಿ ಹಕ್ಕೊತ್ತಾಯಗಳಿಗೆ ಆಗ್ರಹಿಸಿ ನಿರಂತರ ಪ್ರತಿಭಟನೆಗಳನ್ನು ನಡೆಸಿ ಅಧಿಕಾರಿಗಳ ಗಮನಕ್ಕೆ ತರಲಾಗುತ್ತಿದೆ.

ರಾಜ್ಯ ಸರ್ಕಾರದ ವಸತಿ ಇಲಾಖೆ ಸಚಿವರನ್ನು ಮತ್ತು ಸ್ಲಂ ಬೋರ್ಡ್ ಅಧ್ಯಕ್ಷರನ್ನು ಭೇಟಿ ಮಾಡಿ ಗದಗ-ಬೆಟಗೇರಿ ನಗರದ ಮತ್ತು ಗದಗ ಜಿಲ್ಲೆಯ ವಿವಿಧ ತಾಲೂಕ ಕೇಂದ್ರಗಳಲ್ಲಿ ಬರುವ ಸ್ಲಂ ಬೋರ್ಡ್ ಅಧಿಕಾರಿಗಳು ಸಚಿವರ ಹಾಗೂ ಅಧ್ಯಕ್ಷರ ಆದೇಶವನ್ನು ಗಾಳಿಗೆ ತೂರಿ ಸ್ಲಂ ಜನರ ವಿರೋಧಿ ನೀತಿ ಅನುಸರಿಸುತ್ತಿರುವುದನ್ನು ಖಂಡಿಸುತ್ತೇವೆ.

ಗದಗ-ಬೆಟಗೇರಿ ನಗರದ ಸ್ಲಂ ಪ್ರದೇಶಗಳಲ್ಲಿ ವಸತಿಗಾಗಿ ಪ್ರಧಾನ ಮಂತ್ರಿಗಳ ಆವಾಸ್ ಯೋಜನೆಯಲ್ಲಿ 863 ಮನೆಗಳು ಮಂಜೂರಾಗಿದ್ದು, ಗುತ್ತಿಗೆದಾರರು ಎಲ್ಲಾ ಮನೆಗಳ ಕಟ್ಟಡ ನಿರ್ಮಾಣ ಕಾರ್ಯವನ್ನು ಪೂರ್ಣಗೊಳಿಸಿದ್ದೇವೆ ಎಂದು ಸುಳ್ಳು ಹೇಳಿ ಸರ್ಕಾರದ ಹಣವನ್ನು ದುರ್ಬಳಕ್ಕೆ ಮಾಡಿಕೊಂಡಿರುವುದನ್ನು ತನಿಖೆಗೆ ಒಳಪಡಿಸಬೇಕೆಂದು ಇಮ್ಮಿಯಾಜ್ ಮಾನ್ವಿ ಒತ್ತಾಯಿಸಿದರು.

ಸ್ಲಂ ಪ್ರದೇಶಗಳ ಅಭಿವೃದ್ಧಿ ಮತ್ತು ಸಮಸ್ಯೆಗಳ ಕುರಿತು ಚರ್ಚೆ ನಡೆಸಿ ವಿಶೇಷವಾಗಿ ಗದಗ-ಬೆಟಗೇರಿ ನಗರದಲ್ಲಿರುವ ಸ್ಲಂ ಪ್ರದೇಶಗಳ ಜನಸಂಖ್ಯೆಗೆ ಅನುಗುಣವಾಗಿ ವಸತಿ ಯೋಜನೆಯಲ್ಲಿ ಮನೆಗಳನ್ನು ಮಂಜೂರು ಮಾಡಲು ಹಾಗೂ ಸ್ಥಳೀಯ ಸ್ಲಂ ಪ್ರದೇಶಗಳ ಅಭಿವೃದ್ಧಿಗಾಗಿ ಅನುದಾನ ಮಂಜೂರು ಮಾಡಬೇಕೆಂದು ಮನವಿ ಮಾಡಲಾಗಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಗದಗ ಜಿಲ್ಲಾ ಸ್ಲಂ ಸಮಿತಿ ಕಾರ್ಯದರ್ಶಿ ಅಶೋಕ ಕುಸಬಿ, ಮಹಿಳಾ ಸಮಿತಿ ಸಂಚಾಲಕಿ ಪರವೀನಬಾನು ಹವಾಲ್ದಾರ, ಮೆಹರುನಿಸಾ ಡಂಬಳ, ಸ್ಲಂ ಸಮಿತಿ ಮುಖಂಡರಾದ ಇಬ್ರಾಹಿಂ ಮುಲ್ಲಾ, ಮೌಲಾಸಾಬ ಗಚ್ಚಿ, ಶರಣಪ್ಪ ಸೂಡಿ, ಮೆಹಬೂಬಸಾಬ ಬಳ್ಳಾರಿ. ದುರ್ಗಪ್ಪ ಮಣ್ಣವಡ್ಡರ, ಖಾಜಾಸಾಬ ಇಸ್ಮಾಯಿಲನವರ, ಮೈಮುನ ಬೈರಕದಾರ, ಲಕ್ಷ್ಮೀ ಮಣ್ಣವಡ್ಡರ, ಸಲೀಂ ಹರಿಹರ, ಶಿವಪ್ಪ ರೋಣದ, ರವಿ ಗೋಸಾವಿ, ಜಂದಿಸಾಬ ಬಳ್ಳಾರಿ, ಖಾಜಾಸಾಬ ಬಳ್ಳಾರಿ ಸೇರಿದಂತೆ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande