ಹುಬ್ಬಳ್ಳಿ, 15 ಜುಲೈ (ಹಿ.ಸ.) :
ಆ್ಯಂಕರ್ : ದಕ್ಷಿಣ ರೈಲ್ವೆಯಲ್ಲಿನ ಕಾರ್ಯಾಚರಣೆಯ ನಿರ್ಬಂಧಗಳನ್ನು ಗಮನದಲ್ಲಿಟ್ಟುಕೊಂಡು, 07355/07356 ಸಂಖ್ಯೆಯ ಎಸ್ಎಸ್ಎಸ್ ಹುಬ್ಬಳ್ಳಿ - ರಾಮೇಶ್ವರಂ - ಎಸ್ಎಸ್ಎಸ್ ಹುಬ್ಬಳ್ಳಿ ಸಾಪ್ತಾಹಿಕ ವಿಶೇಷ ಎಕ್ಸ್ ಪ್ರೆಸ್ ರೈಲಿನ ಸಂಚಾರದ ಅವಧಿಯನ್ನು ವಿಸ್ತರಿಸಲು ನೈಋತ್ಯ ರೇಲ್ವೆ ಇಲಾಖೆ ನಿರ್ಧರಿಸಿದೆ.
ಈ ವಿಶೇಷ ರೈಲು ತನ್ನ ಹಿಂದಿನ ನಿಗದಿತ ನಿಲ್ದಾಣವಾದ ರಾಮೇಶ್ವರಂ ಬದಲಿಗೆ ರಾಮನಾಥಪುರಂನಲ್ಲಿ ತನ್ನ ಪ್ರಯಾಣವನ್ನು ಕೊನೆಗೊಳಿಸಲಿದೆ ಮತ್ತು ಅಲ್ಲಿಂದಲೇ ತನ್ನ ಹಿಮ್ಮುಖ ಪ್ರಯಾಣವನ್ನು ಪ್ರಾರಂಭಿಸಲಿದೆ. ಆದಾಗ್ಯೂ, ಈ ರೈಲುಗಳು ಪ್ರಸ್ತುತ ಇರುವ ಸಂಯೋಜನೆ, ಸಮಯ ಮತ್ತು ನಿಲುಗಡೆಗಳೊಂದಿಗೆ ತಮ್ಮ ಸಂಚಾರವನ್ನು ಮುಂದುವರಿಸಲಿವೆ.
ಇದರ ಅನ್ವಯ, ಈ ಹಿಂದೆ ಜುಲೈ 26ರವರೆಗೆ ಸಂಚರಿಸಬೇಕಿದ್ದ, 07355 ಸಂಖ್ಯೆಯ ಎಸ್ಎಸ್ಎಸ್ ಹುಬ್ಬಳ್ಳಿ - ರಾಮೇಶ್ವರಂ ಸಾಪ್ತಾಹಿಕ ವಿಶೇಷ ಎಕ್ಸ್ ಪ್ರೆಸ್ ರೈಲು, ಈಗ ಆಗಸ್ಟ್ 9 ರಿಂದ 30, 2025 ರವರೆಗೆ ನಾಲ್ಕು ಹೆಚ್ಚುವರಿ ಟ್ರಿಪ್'ಗಳಿಗೆ ವಿಸ್ತರಿಸಲಾಗಿದೆ. ಈ ರೈಲು ಈಗ ರಾಮೇಶ್ವರಂ ಬದಲು ರಾಮನಾಥಪುರಂನಲ್ಲಿ ತನ್ನ ಸಂಚಾರವನ್ನು ಮೊಟಕುಗೊಳಿಸಲಿದೆ.
ಅದೇ ರೀತಿ, ಈ ಹಿಂದೆ ಜುಲೈ 27ರವರೆಗೆ ಸಂಚರಿಸಬೇಕಿದ್ದ, 07356 ಸಂಖ್ಯೆಯ ರಾಮೇಶ್ವರಂ - ಎಸ್ಎಸ್ಎಸ್ ಹುಬ್ಬಳ್ಳಿ ಸಾಪ್ತಾಹಿಕ ವಿಶೇಷ ಎಕ್ಸ್ ಪ್ರೆಸ್ ರೈಲು, ಈಗ ಆಗಸ್ಟ್ 10 ರಿಂದ 31, 2025 ರವರೆಗೆ ನಾಲ್ಕು ಹೆಚ್ಚುವರಿ ಟ್ರಿಪ್'ಗಳಿಗೆ ವಿಸ್ತರಿಸಲಾಗಿದೆ. ಈ ರೈಲು ಈಗ ರಾಮೇಶ್ವರಂ ಬದಲು ರಾಮನಾಥಪುರಂನಿಂದ ತನ್ನ ಸಂಚಾರವನ್ನು ಪ್ರಾರಂಭಿಸಲಿದೆ ಎಂದು ನೈಋತ್ಯ ರೇಲ್ವೆ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa