ಬೆಂಗಳೂರು, 15 ಜುಲೈ (ಹಿ.ಸ.) :
ಆ್ಯಂಕರ್ : ದೇವನಹಳ್ಳಿ ತಾಲ್ಲೂಕಿನ ಚನ್ನರಾಯಪಟ್ಟಣ ಮತ್ತು ಸುತ್ತಮುತ್ತದ ಗ್ರಾಮಗಳ ಭೂಸ್ವಾಧೀನ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ಕೈಬಿಡಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ವಿಧಾನ ಸೌಧದಲ್ಲಿ ಪ್ರಕಟಿಸಿದರು.
ರೈತರು ತೀವ್ರವಾಗಿ ವಿರೋಧಿಸಿದ್ದ ಹಿನ್ನೆಲೆ ಈ ನಿರ್ಧಾರ ಕೈಗೊಳ್ಳಲಾಗಿದೆ.
ಬೆಂಗಳೂರಿನಲ್ಲಿಂದು ನಡೆದ ಸಭೆಯಲ್ಲಿ ಮುಖ್ಯಮಂತ್ರಿಯವರ ಜೊತೆ ಸಚಿವರು, ರೈತ ಮುಖಂಡರು ಮತ್ತು ಅಧಿಕಾರಿಗಳು ಭಾಗವಹಿಸಿದ್ದರು.
ಭೂಸ್ವಾಧೀನ ವಿರೋಧಿಸಿ ನಡೆದ ಹೋರಾಟ ರಾಜಧಾನಿಯ ಮಟ್ಟಿಗೆ ಬೆಳೆದಿತ್ತು. ಭೂಮಿ ಕೃಷಿಗೆ ಯೋಗ್ಯವಾಗಿದ್ದು, ರೈತರು ಆ ಜಮೀನಿಗೆ ಸಂಪೂರ್ಣವಾಗಿ ಅವಲಂಬಿತರಾಗಿದ್ದಾರೆ ಎಂಬ ಅಂಶ ಸರ್ಕಾರ ಗಮನದಲ್ಲಿಟ್ಟುಕೊಂಡಿದೆ.
ಭೂಮಿ ನೀಡಲು ಸ್ವಯಂಸಿದ್ಧರಾದ ರೈತರಿಂದ ಮಾತ್ರ ಭೂಮಿ ಸ್ವಾಧೀನಪಡಿಸಿಕೊಳ್ಳಲಾಗುವುದು. ಅವರಿಗೆ ಮಾರ್ಗಸೂಚಿ ದರಕ್ಕಿಂತ ಹೆಚ್ಚುವರಿ ಪರಿಹಾರ ಮತ್ತು ಅಭಿವೃದ್ಧಿಪಡಿಸಿದ ಜಾಗ ಒದಗಿಸಲಾಗುವುದು. ಕೃಷಿ ಮುಂದುವರಿಸಲು ಇಚ್ಛೆ ಇರುವ ರೈತರಿಗೆ ಆ ಅವಕಾಶ ನೀಡಲಾಗುತ್ತದೆ ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.
1,777 ಎಕರೆ ಭೂಮಿಯಲ್ಲಿ ಏರೋಸ್ಪೇಸ್ ಉದ್ಯಮ ಸ್ಥಾಪನೆ ಉದ್ದೇಶ ಇದ್ದರೂ, ರೈತ ಹಿತಾಸಕ್ತಿಗೆ ಪ್ರಥಮ ಸ್ಥಾನ ನೀಡಲಾಗಿದೆ. ರೈತರ ಮನವಿಗೆ ಸರಕಾರ ಸಕಾರಾತ್ಮಕವಾಗಿ ಸ್ಪಂದಿಸಲಾಗಿದೆ ಎಂದು ತಿಳಿಸಿದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa