ಕೊಪ್ಪಳ, 15 ಜುಲೈ (ಹಿ.ಸ.) :
ಆ್ಯಂಕರ್ : ಬೆಂಗಳೂರಿನ ದೊಡ್ಡಬಳ್ಳಾಪುರ ವ್ಯಾಪ್ತಿಯ ದೇವನಹಳ್ಳಿ ಭೂ ಹೋರಾಟಕ್ಕೆ ಐತಿಹಾಸಿಕ ಜಯ ಲಭಿಸಿದ್ದಕ್ಕೆ ಅಶೋಕ ವೃತ್ತದಲ್ಲಿ ಬಲ್ಡೋಟಾ ಕಾರ್ಖಾನೆ ವಿರೋಧಿ ಹೋರಾಟಗಾರರು, ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನ, ಪರಿಸರ ಹಿತರಕ್ಷಣಾ ವೇದಿಕೆ ಸದಸ್ಯರು ಮಂಗಳವಾರ ವಿಜಯೋತ್ಸವ ಆಚರಿಸಿ, ಸಿಹಿ ಹಂಚಿ ಸಂಭ್ರಮಿಸಿದ್ದಾರೆ.
ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನ ಸಮಿತಿ ಪ್ರಧಾನ ಸಂಚಾಲಕ ಪ್ರೊ. ಅಲ್ಲಮಪ್ರಭು ಬೆಟ್ಟದೂರು ಅವರು, 1198 ದಿನಗಳ ಸುಧೀರ್ಘ ಹೋರಾಟದ ನಂತರ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ರೈತಪರ ಎಂಬ ಸಂದೇಶ ನೀಡಿ 1777 ಎಕರೆ ಭೂಮಿಯ ಸ್ವಾಧೀನ ಕೈಬಿಟ್ಟಿರುವದು ಸ್ವಾಗತಾರ್ಹ. ಇದೇ ರೀತಿಯಲ್ಲಿ ಕೊಪ್ಪಳ ಸೇರಿದಂತೆ ರಾಜ್ಯದ ನಾನಾ ಕಡೆಗಳಲ್ಲಿ ಕಾರ್ಖಾನೆ, ಅಭಿವೃದ್ಧಿ ಹೆಸರಲ್ಲಿ ರೈತರನ್ನು ಒಕ್ಕಲೆಬ್ಬಿಸುವ ಕೆಲಸ ಮಾಡುತ್ತಿರುವದು ಸಹ ಕೈಬಿಡಬೇಕು. ಕೃಷಿ ಭೂಮಿ ಉಳಿಯಬೇಕು, ಭೂ ಸುಧಾರಣೆ ಕಾಯ್ದೆ ತಿದ್ದುಪಡಿ ತೆಗೆಯಬೇಕು. ದೇವನಹಳ್ಳಿ ಮಾದರಿಯಲ್ಲಿ ಕೊಪ್ಪಳ ನಗರಕ್ಕೆ ಹೊಂದಿಕೊಂಡು ಮೋಸದಿಂದ ಬಂದಿರುವ ಹೆಸರು ಬದಲಿಸಿಕೊಂಡು ಉರಿಯುತ್ತಿರುವ ಬಲ್ಡೋಟಾದ ಬಿಎಸ್‍ಪಿಎಲ್ ಕಾರ್ಖಾನೆ ಸೇರಿ ಎಲ್ಲಾ ಕಂಪನಿಗಳನ್ನು ಕೊಪ್ಪಳ ಬಿಟ್ಟು ತೊಲಗಿಸಬೇಕು ಎಂದು ಮನವಿ ಮಾಡಿದರು.
ಮುಖಂಡ ಮಂಜುನಾಥ ಜಿ. ಗೊಂಡಬಾಳ ಅವರು, ಆಗಷ್ಟ್ 4 ರ ಸೋಮವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೊಪ್ಪಳಕ್ಕೆ ಆಗಮಿಸುತ್ತಿದ್ದು, ಬಲ್ಡೋಟಾ ಹಾಗೂ ಕಿರ್ಲೋಸ್ಕರ್ ವಿಸ್ತರಿಸಲು ನೀಡಿರುವ ಭೂಮಿಯನ್ನು ರದ್ದು ಮಾಡಿದಲ್ಲಿ ಮುಖ್ಯಮಂತ್ರಿಗಳ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಕೊಪ್ಪಳದಲ್ಲಿ ಆಚರಿಸಲಾಗುತ್ತದೆ ಎಂದರು.
ಮುಖಂಡ ಬಸವರಾಜ ಶೀಲವಂತರ ಅವರು, ಕೊಪ್ಪಳಕ್ಕೆ ಮುಖ್ಯಮಂತ್ರಿಗಳು ಬರುವ ಮುನ್ನವೇ ಕಾರ್ಖಾನೆ ರದ್ದುಗೊಳಿಸಿದ ಬಗ್ಗೆ ಆದೇಶ ನೀಡಿ ಬರಲಿ ಎಂದರು.
ಹಿರಿಯ ಪತ್ರಕರ್ತ ಸೋಮರಡ್ಡಿ ಅಳವಂಡಿ, ಸಂಘಟಕರಾದ ಕೆ. ಬಿ. ಗೋನಾಳ, ಮಹಾಂತೇಶ ಕೊತಬಾಳ, ಶರಣು ಗಡ್ಡಿ, ಭೀಮಸೇನ ಕಲಕೇರಿ, ತಿಪ್ಪಯ್ಯಸ್ವಾಮಿ ಹೊಲಗೇರಿ, ಕನಕಪ್ಪ ಪೂಜಾರ, ಬಂದೇನವಾಜ್ ಮಣಿಯಾರ, ಗಾಳೆಪ್ಪ ಮುಂಗೋಲಿ, ಕಾಶಿಮ್ ಸರ್ದಾರ, ನಾಗರಾಜ್ ಜಿ., ಮಕ್ಬೂಲ್ ರಾಯಚೂರು, ಪರಶುರಾಮ ವಣಗೇರಿ ಇಂದರಗಿ, ಮುತ್ತುರಾಜ್ ಹಡಪದ, ಗವಿಸಿದ್ದಪ್ಪ ಹಲಿಗಿ ಕುಣಿಕೇರಿ, ರಮೇಶ ಬೂದಗುಂಪಿ, ಮುದುಕಪ್ಪ ಹೊಸಮನಿ, ಆನಂದ ಗೊಂಡಬಾಳ, ಗವಿಸಿದ್ದಪ್ಪ ಹಂಡಿ ಇತರರು ಇದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್