ಗದಗ, 12 ಜುಲೈ (ಹಿ.ಸ.):
ಆ್ಯಂಕರ್:
ಗದಗ ನಗರದ ವಿವೇಕಾನಂದ ಸಭಾ ಭವನದಲ್ಲಿಂದು, ಯುವಧ್ವನಿ ಸಮಾವೇಶದಲ್ಲಿ ಭಾಗವಹಿಸಿದ್ದ ಕರ್ನಾಟಕದ ಸಚಿವ ಪ್ರಿಯಾಂಕ್ ಖರ್ಗೆ ಅವರು ಕೇಂದ್ರದ ಬಿಜೆಪಿ ಸರ್ಕಾರದ ನೀತಿ, ಕಾರ್ಯಪದ್ದತಿ ಹಾಗೂ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಚಾಲನೆಯಲ್ಲಿರುವ ಯೋಜನೆಗಳ ವಿರುದ್ಧ ಕಿಡಿಕಾರಿದರು.
ಭಾಷಣದಲ್ಲಿ ಅವರು, ಮೋದಿ ಅವರ ಆಡಳಿತದಲ್ಲಿ ಹೊಸ ಯೋಜನೆಗಳ ಹೆಸರಲ್ಲಿ ಹಿಂದಿನ ನಮ್ಮ ಸರ್ಕಾರದ ಯೋಜನೆಗಳೇ ಪುನರ್ ನಾಮಕರಣಗೊಂಡಿವೆ. ನ್ಯಾಷನಲ್ ಇ-ಗವರ್‍ನನ್ಸ್ ಪ್ಲ್ಯಾನ್ ಈಗ ಡಿಜಿಟಲ್ ಇಂಡಿಯಾ ಆಗಿದೆ. ಆಮ್ ಆದ್ಮಿ ಭೀಮಾ ಯೋಜನೆ ಅಟಲ್ ಪೆನ್ಷನ್ ಯೋಜನೆ ಆಯ್ತು. ನಿರ್ಮಲ್ ಭಾರತ್ ಯೋಜನೆ ಸ್ವಚ್ಛ ಭಾರತ್ ಆಗಿ ಮಾರ್ಪಟ್ಟಿದೆ, ಎಂದು ಹೇಳಿದರು.
ಮೋದಿ ಸರ್ಕಾರದ 3 ಆರ್: ರೀನೇಮ್, ರೀಪ್ಯಾಕೇಜ್, ರೀಲಾಂಚ್ ಎಂಬ ವಾಗ್ದಾಳಿ ನಡೆಸಿದರು, 11 ವರ್ಷಗಳಿಂದ ಘೋಷಣೆಗಳ ರಾಜಕಾರಣ ನಡೆಯುತ್ತಿದೆ. ರೈತರ ಆದಾಯ ದುಪ್ಪಟ್ಟು, 2 ಕೋಟಿ ಉದ್ಯೋಗ ಇವೆಲ್ಲಾ ಜನರನ್ನ ದಾರಿ ತಪ್ಪಿಸುವ ಮಾತುಗಳು ಮಾತ್ರ ಎಂದು ಖಂಡಿಸಿದರು.
ಅವರು ಆಕ್ರೋಶ ವ್ಯಕ್ತಪಡಿಸಿ, ಚುನಾವಣೆಯಲ್ಲಿ ಚಾಯ್ ವಾಲಾ, ಅಧಿಕಾರಕ್ಕೆ ಬಂದರೆ ಪ್ರಧಾನ ಸೇವಕ, ಪ್ರಶ್ನೆ ಮಾಡಿದರೆ ಚೌಕಿದಾರ, ಕೋಮು ಗಲಭೆಯಲ್ಲಿ ಹೃದಯ ಸಾಮ್ರಾಟ್ ಈ ಸಾಂದರ್ಭಿಕ ರಾಜಕೀಯ ದೇಶದ ಒಳಿತಿಗೆ ಅಲ್ಲ, ಎಂದರು.
ಖರ್ಗೆ ಅವರು ಗಾಂಧಿ, ಗೋಡ್ಸೆ ವಿಚಾರವನ್ನೂ ಎಳೆದು ತಂದು, ಸ್ವಾತಂತ್ರ್ಯ ಹೋರಾಟದ ಕಾಲದಲ್ಲಿ ಹೋರಾಟ ಮಾಡದವರು ಇವತ್ತು ದೇಶಭಕ್ತಿಯ ಸರ್ಟಿಫಿಕೇಟ್ ಕೊಡುತ್ತಿದ್ದಾರೆ. ಬೃಹತ್ ನುಡಿಗಟ್ಟುಗಳಿಂದ ದೇಶಭಕ್ತಿಯು ತೀರ್ಮಾನವಾಗುವುದಿಲ್ಲ, ಎಂದು ಟೀಕಿಸಿದರು.
ಇದಕ್ಕೂ ಮೇಲಿದೆಂದರೆ, ವೀರ ಸಾವರ್ಕರ್ ಅವರ ವಿಷಯದಲ್ಲಿ ಸದನದಲ್ಲೇ ಬಿಜೆಪಿಯವರು ಉತ್ತರ ಕೊಡಲಾಗದೆ ಮೈಮೇಲೆ ಬಿದ್ದರು, ಎಂಬ ಗಂಭೀರ ಆರೋಪವನ್ನು ಮಾಡಿದರು.
---------------
ಹಿಂದೂಸ್ತಾನ್ ಸಮಾಚಾರ್ / Lalita MP