ಕೊಪ್ಪಳ , 31 ಮೇ (ಹಿ.ಸ.) :
ಆ್ಯಂಕರ್ : ಪ್ರವಾಸೋದ್ಯಮ ಇಲಾಖೆಯಿಂದ ಎಸ್.ಸಿ.ಎಸ್.ಪಿ./ಟಿ.ಎಸ್.ಪಿ. ಯೋಜನೆ ಅಡಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ಪ್ರವಾಸೋದ್ಯಮ, ಅತಿಥ್ಯ ಕ್ಷೇತ್ರದಲ್ಲಿ ಕೌಶಲ್ಯಾಭಿವೃದ್ಧಿ ತರಬೇತಿಗೆ ಮರು ಅರ್ಜಿ ಆಹ್ವಾನಿಸಲಾಗಿದೆ.
ಪ್ರವಾಸೋದ್ಯಮ ಕ್ಷೇತ್ರದಲ್ಲಿ ಕೌಶಲ್ಯಾಭಿವೃದ್ಧಿ ತರಬೇತಿ ಕಾರ್ಯಕ್ರಮವನ್ನು 2024-25ನೇ ಸಾಲಿನಲ್ಲಿ ಎಸ್.ಸಿ.ಎಸ್.ಪಿ/ ಟಿ.ಎಸ್.ಪಿ. ಯೋಜನೆ ಅಡಿಯಲ್ಲಿ ಪರಿಶಿಷ್ಟ ಜಾತಿಯ 292 ಅಭ್ಯರ್ಥಿಗಳಿಗೆ ಮತ್ತು ಪರಿಶಿಷ್ಟ ಪಂಗಡದ 162 ಅಭ್ಯರ್ಥಿಗಳಿಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಅತಿಥ್ಯ ಕ್ಷೇತ್ರದ ಸಂಸ್ಥೆಗಳಾದ ಫುಡ್ ಕ್ರಾಫ್ಟ್ ಇನ್ಸ್ಟಿಟ್ಯೂಟ್, ಮೈಸೂರು ಹಾಗೂ ಹೋಟೆಲ್ ಮ್ಯಾನೇಜ್ಮೆಂಟ್ ಸಂಸ್ಥೆ ಬೆಂಗಳೂರು ರವರ ಮೂಲಕ ವಸತಿರಹಿತ ಕಾರ್ಯಕ್ರಮವನ್ನು ಜಾರಿಗೊಳಿಸಲು ಉದ್ದೇಶಿಸಲಾಗಿದೆ.
ತರಬೇತಿ ಅವಧಿಯು ನಾಲ್ಕು ತಿಂಗಳ ಅವಧಿಯದ್ದಾಗಿದ್ದು, 5ನೇ ತರಗತಿ ವಿದ್ಯಾರ್ಹತೆ ಹೊಂದಿದವರಿಗೆ ರೂಂ ಅಟೆಂಡೆಂಟ್ ತರಬೇತಿ, 8ನೇ ತರಗತಿ ವಿದ್ಯಾರ್ಹತೆ ಹೊಂದಿದವರಿಗೆ ಮಲ್ಟಿ ಕ್ಯೂಸನ್ ಕುಕ್ ತರಬೇತಿ ಹಾಗೂ 10ನೇ ತರಗತಿ ವಿದ್ಯಾರ್ಹತೆ ಹೊಂದಿದವರಿಗೆ ಫುಡ್ & ಬೆವರೇಜ ಸರ್ವಿಸ್ ಸ್ಟೆವರ್ಡ್ ತರಬೇತಿಯನ್ನು ನೀಡಲಾಗುವುದು. ಅಭ್ಯರ್ಥಿಗಳು 20 ರಿಂದ 45 ವಯೋಮಾನದವರಾಗಿರಬೇಕು.
ಆಸಕ್ತ ಅಭ್ಯರ್ಥಿಗಳು ಜೂನ್ 12 ರೊಳಗೆ ಸಹಾಯಕ ನಿರ್ದೇಶಕರ ಕಛೇರಿ, ಪ್ರವಾಸೋದ್ಯಮ ಇಲಾಖೆ, 2ನೇ ಮಹಡಿ, ಜಿಲ್ಲಾಡಳಿತ ಭವನ, ಹೊಸಪೇಟೆ ರಸ್ತೆ, ಕೊಪ್ಪಳ ಇಲ್ಲಿಂದ ಅರ್ಜಿಯನ್ನು ಉಚಿತವಾಗಿ ಪಡೆದು ಭರ್ತಿ ಮಾಡಿ ಅಗತ್ಯ ದಾಖಲೆಗಳೊಂದಿಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಕಛೇರಿಗೆ ಭೇಟಿ ನೀಡಬಹುದು ಹಾಗೂ ದೂರವಾಣಿ ಸಂಖ್ಯೆ: 08539-225566 ಗೆ ಸಂಪರ್ಕಿಸಬಹುದು ಎಂದು ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್