ರಾಯಚೂರು, 31 ಮೇ (ಹಿ.ಸ.) :
ಆ್ಯಂಕರ್ : ಜಿಲ್ಲೆಯಲ್ಲಿ ಜೂನ್ 12ರಂದು ನಡೆಯುವ ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆಯ ಹಿನ್ನೆಲೆಯ ನಾನಾ ಕಾರ್ಯಕ್ರಮಗಳಿಗೆ ಅಗತ್ಯ ಸಿದ್ಧತೆಯನ್ನು ಕೈಗೊಳ್ಳಬೇಕು ಎಂದು ಅಪರ ಜಿಲ್ಲಾಧಿಕಾರಿಗಳಾದ ಶಿವಾನಂದ ಅವರು ಬೇರೆ ಬೇರೆ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಮೇ.31ರ ಶನಿವಾರ ದಂದು ನಗರದ ನೂತನ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ನಡೆದ ವಿಶ್ವ ಬಾಲ ಕಾರ್ಮಿಕ ಪದ್ಧತಿಯ ವಿರೋಧಿ ದಿನಾಚರಣೆ ಪೂರ್ವಭಾವಿ ಸಿದ್ಧತಾ ಸಭೆಯ ಅಧ್ಯಕ್ಷತೆ ಅವರು ಮಾತನಾಡಿದರು.
ಜೂನ್ 12ರಂದು ರಾಯಚೂರ ಜಿಲ್ಲಾ ಕೇಂದ್ರ ಸೇರಿದಂತೆ ಎಲ್ಲಾ ತಾಲೂಕುಗಳಲ್ಲಿ ಸಹ ವಿಶ್ವ ಬಾಲ ಕಾರ್ಮಿಕ ಪದ್ಧತಿಯ ವಿರೋಧಿ ದಿನವನ್ನು ಆಚರಣೆ ಮಾಡಬೇಕು. ಈ ಬಗ್ಗೆ ಆಯಾ ತಹಸೀಲ್ದಾರರು ಆಯಾ ತಾಲೂಕುಗಳಲ್ಲಿ ಸಿದ್ಧತೆಗಳನ್ನು ಕೈಗೊಳ್ಳಬೇಕು. ಆಯಾ ತಾಲೂಕುಗಳಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ಸ್ಥಳೀಯ ತಾಲೂಕು, ಹೋಬಳಿ ಮತ್ತು ಗ್ರಾಮಮಟ್ಟದ ಅಧಿಕಾರಿಗಳು, ಸ್ವಯಂ ಸೇವಾ ಸಂಸ್ಥೆಯ ಪ್ರತಿನಿಧಿಗಳ ಸಹಕಾರೊಂದಿಗೆ ಶಿಕ್ಷಣ ಇಲಾಖೆಯಿಂದ ಸ್ಥಳೀಯ ಸರ್ಕಾರಿ ಶಾಲೆಯ 9 ಹಾಗೂ 10ನೇ ತರಗತಿಯ ಮಕ್ಕಳಿಂದ ಜಿಲ್ಲೆಯಾದ್ಯಂತ ಎಲ್ಲ ಕಡೆಗೆ ಪ್ರಭಾತ ಪೇರಿ ನಡೆಸಿ ಮಕ್ಕಳನ್ನು ಶಾಲೆಗೆ ಸೇರಿಸುವಂತೆ, ಮಕ್ಕಳನ್ನು ದುಡಿಯಲು ಹಚ್ಚಬಾರದು ಎಂದು ಜನಜಾಗೃತಿ ಮೂಡಿಸಬೇಕು ಎಂದರು.
ಆಯಾ ತಹಸೀಲ್ಧಾರರು ಈಗಿನಿಂದಲೇ ಆಯಾ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ವಿಷಯ ತಿಳಿಸಿ ಬಿಇಓ ಅವರ ಮೂಲಕ ಎಲ್ಲ ಶಾಲೆಗಳಿಗೆ ಪತ್ರ ಬರೆಯಿಸಿ ಎಲ್ಲ ಸರ್ಕಾರಿ ಶಾಲೆಗಳಲ್ಲಿ ಪ್ರಭಾತಪೇರಿ ನಡೆಸಲು ಸಿದ್ಧತೆಯನ್ನು ಮಾಡಿಕೊಳ್ಳಬೇಕು. ಬರೀ ಜಾಗೃತಿ ಮೂಡಿಸಿದರಷ್ಟೇ ಸಾಲದು ಸಂಬಂಧಿಸಿದ ಅಧಿಕಾರಿಗಳು ಅಥವಾ ತಹಸೀಲ್ದಾರರು ದಿನಾಚರಣೆಯ ದಿನದಂದು ಆಯಾ ಕಡೆಗಳಲ್ಲಿ ಸಂಚರಿಸಿ ಆಕಸ್ಮಿಕ ಭೇಟಿ ನೀಡಿ ಬಾಲ ಕಾರ್ಮಿಕರನ್ನು ರಕ್ಷಣೆ ಮಾಡಿದಲ್ಲಿ ದಿನಾಚರಣೆ ವಿಶೇಷ ಅರ್ಥ ಬರಲಿದೆ ಎಂದು ಅಪರ ಜಿಲ್ಲಾಧಿಕಾರಿಗಳು ಸಲಹೆ ಮಾಡಿದರು.
ಪ್ರತಿಜ್ಞಾವಿಧಿ ಸ್ವೀಕರಿಸಿ: ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆಯಂದು ಪೂರ್ವಾಹ್ನ 11 ಗಂಟೆಗೆ ಎಲ್ಲಾ ಸರ್ಕಾರಿ ನೌಕರರು ಕೆಲಸ ನಿರ್ವಹಿಸುವ ಸ್ಥಳದಲ್ಲಿಯೇ ಒಟ್ಟಾಗಿ ಸೇರಿ ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆ ಪ್ರಮಾಣ ವಚನ ಸ್ವೀಕರಿಸಲು ಕಾರ್ಮಿಕ ಇಲಾಖೆಯಿಂದ ಎಲ್ಲ ಇಲಾಖೆಗಳಿಗೆ ಸುತ್ತೋಲೆ ಹೊರಡಿಸಿ ಕ್ರಮವಹಿಸಬೇಕು ಎಂದು ಅಪರ ಜಿಲ್ಲಾಧಿಕಾರಿಗಳು ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಪಂಚಾಯಿತಿಗಳಲ್ಲಿ ಡಂಗುರ ಸಾರಿ: ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆ ಕಾರ್ಯಕ್ರಮವನ್ನು ಜೂನ್ 12ರಂದು ಜಿಲ್ಲೆಯ ಪ್ರತಿಯೊಂದು ಗ್ರಾಮಗಳಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷರು, ಉಪಾಧ್ಯಕ್ಷರು, ಸರ್ವ ಸದಸ್ಯರು, ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಕಾರ್ಯದರ್ಶಿಗಳು, ಬಿಲ್ ಕಲೆಕ್ಟರ್, ಬೀಟ್ ಪೆÇಲೀಸ್, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು ಹಾಗೂ ಎಲ್ಲಾ ಸಿಬ್ಬಂದಿ ಒಟ್ಟಾಗಿ ಸೇರಿ ಕಾರ್ಯಕ್ರಮ ಆಚರಣೆ ಮಾಡಿ ಪ್ರಮಾಣ ವಚನ ಸ್ವೀಕರಿಸುವ ಹಾಗೂ ಈ ದಿನದಂದು ಬಾಲಕಾರ್ಮಿಕ ಹಾಗೂ ಕಿಶೋರ ಕಾರ್ಮಿಕ ವಿರೋಧಿ ಪದ್ಧತಿ ಕುರಿತು ಗ್ರಾಮಗಳಲ್ಲಿ ಡಂಗೂರ ಸಾರಿ ಜನಜಾಗೃತಿ ಮೂಡಿಸಬೇಕು ಎಂದು ಸೂಚನೆ ನೀಡಿದರು.
ವಿದ್ಯಾರ್ಥಿಗಳಿಗೆ ಸನ್ಮಾನ: ಬಾಲಕಾರ್ಮಿಕ ಹಾಗೂ ಕಿಶೋರ ಕಾರ್ಮಿಕತೆಯಿಂದ ಬಿಡುಗಡೆಗೊಂಡು ಶಾಲಾ ಮುಖ್ಯವಾಹಿನಿಗೆ ಸೇರಿಸಿರುವ ಮಕ್ಕಳು ಎಸ್ಎಸ್ಎಲ್ಸಿ, ಪಿಯುಸಿ, ಪದವಿ ಹಾಗೂ ಡಿಪ್ಲೋಮಾ ನಲ್ಲಿ ಶೇ.75 ಹೆಚ್ಚಿಗೆ ಅಂಕ ಪಡೆದ ವಿದ್ಯಾರ್ಥಿಗಳಿಗೆ ಕಾರ್ಯಕ್ರಮ ದಿನ ವೇದಿಕೆಯಲ್ಲಿ ಸನ್ಮಾನಿಸಿ ಗೌರವಿಸಲು ಸಭೆಯಲ್ಲಿ ನಿರ್ಣಯಿಸಲಾಯಿತು.
ಜಿಂಗಲ್ಸ್ ಮೂಲಕ ಪ್ರಚಾರ ನಡೆಸಿ: ಜಿಲ್ಲೆಯ ಮಹಾನಗರ ಪಾಲಿಕೆ, ನಗರಸಭೆ, ಪುರಸಭೆ ಸೇರಿದಂತೆ ಎಲ್ಲಾ ಪಟ್ಟಣ ಪಂಚಾಯತ್ಗಳಲ್ಲಿ ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆಯನ್ನು ಆಚರಿಸಿ ಪ್ರಮಾಣ ವಚನ ಸ್ವೀಕರಿಸಬೇಕು. ಅಲ್ಲದೆ ಕಸ ವಿಲೆವಾರಿ ವಾಹನಗಳಲ್ಲಿ ಉಚಿತವಾಗಿ ಬಾಲಕಾರ್ಮಿಕ ಹಾಗೂ ಕಿಶೋರ ಕಾರ್ಮಿಕ ವಿರೋಧಿ ಪದ್ಧತಿ ಕುರಿತು ಪುರಸಭೆ ನಗರಸಭೆ ಕಸಿ ವಿಲೇವಾರಿ ವಾಹನಗಳಲ್ಲಿ ಜಿಂಗಲ್ಸ್ ಪ್ರಸಾರಕ್ಕೆ ಅಥವಾ ಘೋಷಣೆಗಳನ್ನು ಕೂಗಿಸುವ ಸೂಕ್ತ ವ್ಯವಸ್ಥೆ ಮಾಡಿಸಲು ಜಿಲ್ಲೆಯ ಎಲ್ಲ ನಗರ ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳಿಗೆ ಸುತ್ತೋಲೆ ಕಳುಹಿಸಿ ಕ್ರಮ ವಹಿಸಬೇಕು ಎಂದು ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಿಗೆ ಸೂಚನೆ ನೀಡಲಾಯಿತು.
ಕಾಲ್ನಡಿಗೆ ಜಾಥಾ: ಜೂನ್ 12ರ ಬೆಳಿಗ್ಗೆ 8 ಗಂಟೆಗೆ ನಗರದ ಹಳೆಯ ಜಿಲ್ಲಾಧಿಕಾರಿಗಳ ಕಚೇರಿಯ ಆವರಣದಿಂದ ಆರಂಭಿಸಿ ಪ್ರಮುಖ ಬೀದಿಗಳಲ್ಲಿ ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆಯ ಕಾಲ್ನಡಿಗೆ ಜಾಥಾವು ಅಚ್ಚುಕಟ್ಟಾಗಿ ನಡೆಯಬೇಕು. ಈ ವೇಳೆ ಆಟೋ ಮೈಕಿಂಗ್ ಮೂಲಕ ಘೋಷಣೆಗಳೊಂದಿಗೆ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಬಾಲಕಾರ್ಮಿಕ ಅನಿಷ್ಠ ಪದ್ಧತಿಯನ್ನು ಹೋಗಲಾಡಿಸಲು ಜಾಗೃತಿ ಮೂಡಿಸಬೇಕು. ಕಾರ್ಯಕ್ರಮಕ್ಕೆ ಆಗಮಿಸಿದ ಮಕ್ಕಳಿಗೆ ಹಾಲು ಮಜ್ಜಿಗೆ ವಿತರಿಸುವ ಸಂಬಂಧ ಕೆಎಂಎಫ್ಗೆ ಪತ್ರ ಬರೆಯಲು ಕ್ರಮ ವಹಿಸಬೇಕು ಎಂದು ಅಪರ ಜಿಲ್ಲಾಧಿಕಾರಿಗಳು ಕಾರ್ಮಿಕ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಪೊಲೀಸ್ ಬಂದೋಬಸ್ತಗೆ ಸೂಚನೆ: ರಾಯಚೂರ ನಗರ ಸೇರಿದಂತೆ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ನಡೆಯುವ ಜಾಥಾ, ಪ್ರಭಾತಪೇರಿ ಮತ್ತು ಇನ್ನೀತರ ಕಾರ್ಯಕ್ರಮಗಳಿಗೆ ಜಿಲ್ಲಾ ಪೊಲೀಸ್ ಇಲಾಖೆಯು ಸೂಕ್ತ ಪೊಲೀಸ್ ಬಂದೋಬಸ್ತ್ ವ್ಯವಸ್ಥೆಗೆ ಕ್ರಮ ವಹಿಸಬೇಕು ಎಂದು ಸಭೆಯಲ್ಲಿ ಕಾರ್ಮಿಕ ಇಲಾಖೆಯ ಜಿಲ್ಲಾ ಅಧಿಕಾರಿ ಆರತಿ ಅವರು ಕೋರಿದರು.
ಜೂನ್ 12ರಂದು ನಡೆಯುವ ನಾನಾ ಕಾರ್ಯಕ್ರಮಗಳ ರೂಪುರೇಷಗಳ ಬಗ್ಗೆ ಕಾರ್ಮಿಕ ಇಲಾಖೆಯ ಯೋಜನಾ ನಿರ್ದೇಶಕರಾದ ಮಂಜುನಾಥ ರೆಡ್ಡಿ ಅವರು ಸಭೆಗೆ ಮಾಹಿತಿ ನೀಡಿದರು.
ಸಭೆಯಲ್ಲಿ ತಹಶೀಲ್ದಾರ್ ಬಿ.ರಾಜಶೇಖರ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಮಕ್ಕಳ ರಕ್ಷಣಾಧಿಕಾರಿ ಅಮರೇಶ ಹರಿವಿ, ಸರ್ವೋದಯ ಸಂಸ್ಥೆಯ ಮುಖ್ಯಸ್ಥರಾದ ಅಶೋಕ ಕಾಮತ್, ಹಿಂದುಳಿದ ವರ್ಗಗಳ ಇಲಾಖೆಯ ಕಚೇರಿ ಮೇಲ್ವಚಾರಕರಾದ ಮಹಾಂತೇಶ ಕುದರಿ, ರಾಯಚೂರು ತಾಲೂಕು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕರಾದ ಪುಷ್ಟಲತಾ, ಕಾರ್ಖಾನೆಗಳ ಸಹಾಯಕ ನಿರ್ದೇಶಕರಾದ ಅನ್ನಪೂರ್ಣ ಸೇರಿದಂತೆ ಇತರರು ಇದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್