




ರಾಯಚೂರು, 04 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ಕರ್ನಾಟಕ ಸರ್ಕಾರದ ರೈತ ವಿರೋಧಿ ನೀತಿಗಳನ್ನು ವಿರೋಧಿಸಿ ರಾಯಚೂರು ಜಿಲ್ಲಾ ಬಿಜೆಪಿಯ ರೈತ ಮೋರ್ಚಾದ ನೇತೃತ್ವದಲ್ಲಿ ನಗರದಲ್ಲಿ ಗುರುವಾರ ಪ್ರತಿಭಟನೆ ನಡೆಸಿ, ಜಿಲ್ಲಾಡಳಿತದ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದೆ.
ರಾಯಚೂರು ಜಿಲ್ಲಾ ಬಿಜೆಪಿಯ ರೈತ ಮೋರ್ಚಾದ ಜಿಲ್ಲಾ ಅಧ್ಯಕ್ಷ ಎಂ. ಸಿದ್ದನಗೌಡ ನೆಲಹಾಳ್ ಅವರ ನೇತೃತ್ವದಲ್ಲಿ ಗುರುವಾರ ಪ್ರತಿಭಟನೆ ನಡೆಯಿತು.
ಎಂ. ಸಿದ್ದನಗೌಡ ನೆಲಹಾಳ್ ಅವರು, ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿಯಿಂದ ಪಾವತಿಸುವ ವಾರ್ಷಿಕ 6000 ರೂಪಾಯಿಗೆ ಪೂರಕವಾಗಿ ಬಿ.ಎಸ್. ಯಡಿಯೂರಪ್ಪ ಅವರು ಜಾರಿಗೆ ತಂದಿದ್ದ ಕರ್ನಾಟಕ ಸರ್ಕಾರದ 4000 ರುಪಾಯಿ ಪಾವತಿಯನ್ನು ಸ್ಥಗಿತಗೊಳಿಸಿದ್ದೀರಿ. ರೈತರ ಮಕ್ಕಳ ಉನ್ನತ ವ್ಯಾಸಂಗಕ್ಕಾಗಿ ಜಾರಿ ಮಾಡಿದ್ದ `ವಿದ್ಯಾನಿಧಿ'ಯನ್ನು ನಿಲ್ಲಿಸಿದ್ದೀರಿ. ಪಂಚ ಗ್ಯಾರೆಂಟಿಗಳ ನೆಪದಲ್ಲಿ ರೈತರು ಮತ್ತು ಕೃಷಿಕರನ್ನು ಹಾಗೂ ಕೃಷಿ ಕ್ಷೇತ್ರವನ್ನು ಸಂಪೂರ್ಣ ಕಡೆಗಣಿಸಿದ್ದೀರಿ ಎಂದು ಆರೋಪಿಸಿದರು.
ತುಂಗಭದ್ರಾ ಜಲಾಶಯದಲ್ಲಿ 80 ಟಿಎಂಸಿ ನೀರಿದ್ದರೂ ಎರಡನೇ ಬೆಳೆಗೆ ನೀರು ಹರಿಸಬೇಕು, ಇಲ್ಲವಾದಲ್ಲಿ ಪ್ರತಿ ಎಕರೆಗೆ 25 ಸಾವಿರ ರೂಪಾಯಿ ನಷ್ಟ ಪರಿಹಾರ ಪಾವತಿಸಬೇಕು. ಕೃಷಿ ಇಲಾಖೆಯ ಸಹಯಧನಕ್ಕೆ ಮೀಸಲಾಗಿ ಹಣ ನೀಡಬೇಕು. ಸಕಾಲದಲ್ಲಿ ಖರೀಧಿ ಕೇಂದ್ರಗಳನ್ನು ತೆರೆಯಬೇಕು - ಬೆಂಬಲ ಬೆಲೆ ಘೋಷಣೆ ಮಾಡಬೇಕು ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಶಾಸಕ ಡಾ.ಶಿವರಾಜ್ ಪಾಟೀಲ್, ಜಿಲ್ಲಾ ಅಧ್ಯಕ್ಷ ವೀರನಗೌಡ ಪಾಟೀಲ್ ಲೆಕ್ಕಿಹಾಳ್, ಮಾಜಿ ವಿಧಾನ ಪರಿಷತ್ ಸದಸ್ಯ ಎನ್. ಶಂಕ್ರಪ್ಪ, ಜಿಲ್ಲಾ ಪ್ರದಾನ ಕಾರ್ಯದರ್ಶಿ ಶಂಕರ್ ರೆಡ್ಡಿ, ಸಂತೋಷ ರಾಜಗೂರು ಜಿಲ್ಲಾ, ಕೆ.ಕರಿಯಪ್ಪ ಸಿಂದನೂರು, ರೈತ ಮೋರ್ಚಾ ಜಿಲ್ಲಾ ಅಧ್ಯಕ್ಷ ಸಿದ್ದನಗೌಡ ನೆಲಹಾಳ್, ಮಂಡಲ ಅಧ್ಯಕ್ಷರುಗಳಾದ ಮಹಾಂತೇಶ್ ಮುಕ್ತಿ, ರಾಘವೇಂದ್ರ ಊಟಕುರ್, ಶರಣಬಸವ ಜೋಳದಹೆಗಡೆ, ಯಂಕೋಬ ನಾಯಕ, ಯುವ ಮೋರ್ಚಾ ಜಿಲ್ಲಾ ಅಧ್ಯಕ್ಷ ವಿನಾಯಕ್ ರಾವ್, ರಾಮಚಂದ್ರ ಕಡಗೋಲ, ವಿಜಯಕುಮಾರ್ ಸಜ್ಜನ್, ಸುಲೋಚನಾ ಬಸವರಾಜ್, ಸುಮಾ ಗಸ್ತಿ, ಹಾಗೂ ರೈತ ಮೋರ್ಚಾ ಜಿಲ್ಲಾ ಹಾಗೂ ಮಂಡಲ ಪದಾಧಿಕಾರಿಗಳು ಕಾರ್ಯಕರ್ತರು ಪಾಲ್ಗೊಂಡಿದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್