ಬೇವಿನಹಳ್ಳಿ ಗ್ರಾಮ ಪಂಚಾಯಿತಿ ಶಾಲೆಗಳಿಗೆ ಮೂಲಭೂತ ಸೌಕರ್ಯ ಒದಗಿಸಲು ಬದ್ಧ : ಗೀತಾ
ಯಿಂದ
ಬೇವಿನಹಳ್ಳಿ ಗ್ರಾಮ ಪಂಚಾಯಿತಿ  ಶಾಲೆಗಳಿಗೆ ಮೂಲಭೂತ ಸೌಕರ್ಯ ಒದಗಿಸಲು ಬದ್ಧ - ಗೀತಾ


ಕೊಪ್ಪಳ, 04 ಡಿಸೆಂಬರ್ (ಹಿ.ಸ.) :

ಆ್ಯಂಕರ್ : ಬೇವಿನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸರ್ಕಾರಿ ಶಾಲೆಗಳಿಗೆ ಸರ್ಕಾರದಿಂದ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಮುಂದಿನ ಬಜೆಟ್ ನಲ್ಲಿ ನೀಲನಕ್ಷೆ ತಯಾರಿಸಿ ಹಂತ ಹಂತವಾಗಿ ಸೌಲಭ್ಯಗಳನ್ನು ಒದಗಿಸಲಾಗುವುದು ಎಂದು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಗೀತಾ ಹೇಳಿದರು.

ಜಿಲ್ಲೆಯ ಶಹಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಮಕ್ಕಳ ಹಕ್ಕುಗಳ ಗ್ರಾಮಸಭೆಯನ್ನು ದೀಪ ಬೆಳಗುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಬೇವಿನಹಳ್ಳಿ, ಲಿಂಗದಹಳ್ಳಿ ಮತ್ತು ಶಹಪುರ ಗ್ರಾಮಗಳ ಸರ್ಕಾರಿ ಶಾಲೆಗಳ ಮೈದಾನ, ಕಾಂಪೌ0ಡ್, ವಿದ್ಯುತ್, ಕುಡಿಯುವ ನೀರು, ಶೌಚಾಲಯ, ಕಂಪ್ಯೂಟರ್ ಗಳ ದುರಸ್ಥಿ, ಶಾಲಾ ಕಟ್ಟಡಗಳಿಗೆ ಬಣ್ಣ ಹಚ್ಚುವುದು ಸೇರಿದಂತೆ ಇತರೆ ಸೌಲಭ್ಯಗಳನ್ನು ಒದಗಿಸಲು ಯೋಜನೆ ರೂಪಿಸುವುದಾಗಿ ಹೇಳಿದರು.

ಮೂರೂ ಗ್ರಾಮಗಳ ಶಾಲೆಗಳ ಮಕ್ಕಳು ತಮ್ಮ ಶಾಲೆಗಳ ಕುಂದುಕೊರತೆಗಳ ಬಗ್ಗೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಗಮನಕ್ಕೆ ತಂದರು. ಮಕ್ಕಳೊಂದಿಗೆ ಸಂವಹನ ನಡೆಸಿದ ಗೀತಾ ಅವರು ಮಕ್ಕಳ ಆಸೆಗಳನ್ನು ಈಡೇರಿಸಲು ತಮ್ಮ ಗ್ರಾಮ ಪಂಚಾಯಿತಿಯಿಂದ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ಗ್ರಾಮ ಪಂಚಾಯಿತಿ ಸದಸ್ಯರಾದ ಹಾಲಪ್ಪ ತೋಟದ ಮಕ್ಕಳ ಹಕ್ಕುಗಳ ಸಭೆ, ಸಾಮಾಜಿಕ ಲೆಕ್ಕ ಪರಿಶೋಧನೆ ಸಮಗ್ರ ಶಿಕ್ಷಣದ ಜಂಟಿ ಸಭೆಯ ಅಧ್ಯಕ್ಷತೆ ವಹಿಸಿದ್ದರು.

ಶಾಲಾ ಸುಧಾರಣಾ ಸಮಿತಿ ಅಧ್ಯಕ್ಷ ಹುಲ್ಲೇಶ್ ಸಿಂದೋಗಿ, ಕೊಪ್ಪಳ ತಾ.ಪಂ.ಸಾಮಾಜಿಕ ಲೆಕ್ಕ ಪರಿಶೋಧನೆಯ ಸಂಯೋಜಕ ಈರಣ್ಣ ಸಾಲಮನಿ, ರೀಡ್ಸ್ ಸಂಸ್ಥೆಯ ಮಂಜುನಾಥ, ಜಿಲ್ಲಾ ಮಕ್ಕಳ ಘಟಕದ ರವಿ ಬಡಿಗೇರ, ಎ.ಎನ್.ಎಂ.ಮಲ್ಲಮ್ಮ, ಎಸ್ ಡಿ ಎಂ ಸಿ ಉಪಾಧ್ಯಕ್ಷೆ ರೇವತಿ ಗೋನಾಳ, ಪಿ.ಎಲ್.ಡಿ.ಬ್ಯಾಂಕಿನ ನಿರ್ದೇಶಕಿ ಲಕ್ಷಿದೇವಿ ಚೌಧರಿ, ಗ್ರಾ.ಪಂ.ಸದಸ್ಯ ಮುರಳಿಧರ, ಕಾರ್ಯದರ್ಶಿ ಶಿವಾನಂದ ಪಂಥರ, ಶಾಲಾ ಮುಖ್ಯೋಪಾಧ್ಯಾಯರಾದ ದೇವರಾಜ ಎ.ಎಸ್. ಸೇರಿದಂತೆ ತ್ರಿಗ್ರಾಮಗಳ ಗ್ರಾಮಸ್ಥರು, ಪೋಷಕರು ಮತ್ತು ಶಾಲಾ ಮಕ್ಕಳು ಇದ್ದು ಸಭೆಯಲ್ಲಿ ಮಕ್ಕಳ ಹಕ್ಕುಗಳ ಬಗ್ಗೆ ಚರ್ಚಿಸಿದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande