
ಕೋಲಾರ, ೦೩ ಡಿಸೆಂಬರ್(ಹಿ.ಸ) :
ಆ್ಯಂಕರ್ : ಮಕ್ಕಳನ್ನು ಪಠ್ಯಕ್ಕೆ ಸೀಮಿತಮಾಡದೇ ಅವರಲ್ಲಿನ ಪ್ರತಿಭೆ ಹೊರತರಲು ಶಿಕ್ಷಣದ ಸಮಗ್ರ ಭಾಗವಾಗಿ ಪ್ರತಿಭಾ ಕಾರಂಜಿ ಹೆಚ್ಚು ಸೂಕ್ತ ಎಂದು ತಾಲ್ಲೂಕಿನ ನರಸಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷ ಕುಮಾರ್ ಅಭಿಪ್ರಾಯಪಟ್ಟರು.
ತಾಲ್ಲೂಕಿನ ನರಸಾಪುರ ಗ್ರಾಮದ ಕೆಪಿಎಸ್ ಶಾಲೆ ಆವರಣದಲ್ಲಿ ಹಮ್ಮಿಕೊಂಡಿದ್ದ ನರಸಾಪುರ ಕ್ಲಸ್ಟರ್ ಹಂತದ ಪ್ರತಿಭಾ ಕಾರಂಜಿ ಸ್ಪರ್ಧೆಗಳಿಗೆ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು.
ಮಕ್ಕಳಲ್ಲಿ ಹುದುಗಿರುವ ಪ್ರತಿಭೆ ಅರಳಲು ಪ್ರತಿಭಾ ಕಾರಂಜಿ ಸೂಕ್ತ ವೇದಿಕೆಯಾಗಿದ್ದು, ಮಕ್ಕಳು ಕೂಡ ಉತ್ಸಾಹದಿಂದ ಪಾಲ್ಗೊಳ್ಳಬೇಕು ಬಹುಮಾನ ಸಿಗಲಿಲ್ಲ ಎಂಬ ಬೇಸರ ಬೇಡ, ಸ್ಪರ್ಧಿಸುವುದು ಮುಖ್ಯ ಎಂಬುದನ್ನು ಅರಿಯಬೇಕು ಎಂದರು.
ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ಎಂಟಿಬಿ ಶ್ರೀನಿವಾಸ್ ಮಾತನಾಡಿ, ಕೆಲವು ಮಕ್ಕಳಲ್ಲಿ ಪಠ್ಯ ಕಲಿಕೆಗೆ ಆಸಕ್ತಿ ಹೊಂದಿದ್ದರೆ ಕೆಲವು ಮಕ್ಕಳಲ್ಲಿ ಕ್ರೀಡೆಗೆ, ಸಾಂಸ್ಕೃತಿಕ ಕಲೆಗಳನ್ನು ಕಲಿಯುವ ಆಸಕ್ತಿ ಸಹಜವಾಗಿಯೇ ಇದ್ದು, ಅವರ ಆಶಯ, ಆಸಕ್ತಿಗೆ ತಕ್ಕಂತೆ ಅವರಿಗೆ ಪ್ರೋತ್ಸಾಹ ನೀಡುವುದು ಶಿಕ್ಷಕರು ಮತ್ತು ಪೋಷಕರ ಕರ್ತವ್ಯವಾಗಿದ್ದು, ಮಕ್ಕಳನ್ನು ಅಂಕ ಗಳಿಸುವ ಯಂತ್ರಗಳಂತೆ ಪರಿಗಣಿಸಬಾರದು ಎಂದರು.
ಕೆಪಿಎಸ್ ಶಾಲೆ ಪ್ರಾಂಶುಪಾಲರಾದ ಮಂಜುಳಾ ಮಾತನಾಡಿ, ಪ್ರತಿಭಾ ಕಾರಂಜಿಗೆ ಆಗಮಿಸುವ ಮಕ್ಕಳಲ್ಲಿನ ಸಂತೋಷ ಕಂಡಾಗ ಖುಷಿಯಾಗುತ್ತದೆ, ಕೆಲವು ಮಕ್ಕಳು ವಿವಿಧ ವೇಷಧಾರಿಗಳಾಗಿ ಬಂದಿದ್ದಾರೆ, ಕೆಲವು ಮಕ್ಕಳು ಜಾನಪದ ನೃತ್ಯಕ್ಕೆ ನಮ್ಮ ಸಂಸ್ಕೃತಿಯ ಪ್ರತಿಕವಾದ ಉಡುಗೆ,ತೊಡುಗೆ ತೊಟ್ಟು ಬಂದಿದ್ದು, ಅವರಲ್ಲಿ ಸ್ಪರ್ಧೆ ನೀಡುವ ಉತ್ಸಾಹ ಕಾಣುತ್ತಿದೆ ಎಂದರು.
ಮುಖ್ಯಶಿಕ್ಷಕ ಗೋಪಿನಾಥ್ ಮಾತನಾಡಿ, ಸರ್ಕಾರ ಶಾಲಾ ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಪ್ರತಿಭಾ ಕಾರಂಜಿ, ಮಕ್ಕಳ ಮೇಳ, ಕ್ರೀಡಾ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. ಇಲ್ಲಿ ಮಕ್ಕಳು ತಮ್ಮಲ್ಲಿರುವ ಕಲೆ, ಸಾಹಿತ್ಯ, ಜಾನಪದ ಪ್ರಾಕಾರದ ಪ್ರತಿಭೆಯನ್ನು ತೋರಿ ಸಾಂಸ್ಕೃತಿಕವಾಗಿ ಮುಂದೆ ಬರಬೇಕು ಎಂದರು.
ಬಿಆರ್‌ಪಿ ಮಲ್ಲಿಕಾರ್ಜುನ್ ಹಾಗೂ ಇಸಿಒ ಕೆ.ಶ್ರೀನಿವಾಸ್ ಮಾತನಾಡಿ, ಮಕ್ಕಳೊಂದಿಗೆ ಸಂವಾದ ನಡೆಸಬೇಕು, ಅವರಲ್ಲಿ ಪಠ್ಯದ ಕುರಿತು ಆಸಕ್ತಿ ಹೆಚ್ಚಿಸಬೇಕು ಅವರ ಮನಸ್ಸನ್ನು ತಮ್ಮ ಬೋಧನೆಯತ್ತ ತಿರುಗಿಸಬೇಕು, ಅದು ಶಿಕ್ಷಕರಲ್ಲಿ ಮಾತ್ರ ಇರುವ ಕಲೆಯಾಗಿದ್ದು, ಶಿಕ್ಷಕರಲ್ಲಿ ಬದ್ದತೆ ಅಗತ್ಯವಿದೆ ಎಂದು ತಿಳಿಸಿದರು.
ಕಾರ್ಯಕ್ರಮದ ಉಸ್ತುವಾರಿ ವಹಿಸಿ ಅಚ್ಚುಕಟ್ಟಾಗಿ ನಡೆಸಿಕೊಟ್ಟ ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ ಬಸವರಾಜ್, ಪ್ರತಿಯೊಂದು ಕಾರ್ಯದಲ್ಲು ಸೋಲು ಗೆಲುವು ಇರುತ್ತದೆ, ಸೋತವೆಂದು ಕುಗ್ಗದೆ, ಗೆದ್ದೆವೆಂದು ಹಿಗ್ಗದೆ ಸಮಾನವಾಗಿ ಸ್ವೀಕರಿಸಿ ಮುಂದೆ ಸಾಗಬೇಕು ಎಂದು ತಿಳಿಸಿ ಪ್ರತಿಭಾ ಕಾರಂಜಿ ಯಶಸ್ವಿಯಾಗಲು ಸಹಕಾರ ನೀಡಿದ ಗ್ರಾಮ ಪಂಚಾಯಿತಿ, ವ್ಯಾಲಿ ಪಬ್ಲಿಕ್ ಶಾಲೆ, ಸೂರ್ಯ ವಿದ್ಯಾಸಂಸ್ಥೆ, ಮುಖ್ಯ ಶಿಕ್ಷಕ ಎನ್.ಚಂದ್ರು, ನಿಕಟಪೂರ್ವ ಸಿಆರ್‌ಪಿ ಗೋವಿಂದ್, ಬೆಳಮಾರನಹಳ್ಳಿ ಸಿಆರ್‌ಪಿ ಎ.ಜಿ.ಮಹೇಶ್, ಶಿಕ್ಷಕರು ಸೇರಿದಂತೆ ಎಲ್ಲರಿಗೂ ಧನ್ಯವಾದ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಕೆಪಿಎಸ್ ಶಾಲೆ ಮುಖ್ಯಶಿಕ್ಷಕಿ ಪಿ.ಭಾರತಿ, ಶಿಕ್ಷಕರ ಸಂಘದ ಉಪಾಧ್ಯಕ್ಷ ಎನ್.ಕೃಷ್ಣಪ್ಪ, ಎನ್.ನಾರಾಯಣಸ್ವಾಮಿ, ವಿ.ಕೃಷ್ಣಪ್ಪ, ಹನುಮಾನ್ ಸಿಂಗ್, ಸೊಮೇಗೌಡ ಸೇರಿದಂತೆ ವಿವಿಧ ಶಾಲೆಗಳ ಮುಖ್ಯಶಿಕ್ಷಕರು, ಶಿಕ್ಷಕರು ಹಾಜರಿದ್ದರು.
ಚಿತ್ರ: ಕೋಲಾರ ತಾಲೂಕಿನ ನರಸಾಪುರ ಕೆಪಿಎಸ್ ಶಾಲೆ ಆವರಣದಲಿ ಕ್ಲಸ್ಟರ್ ಹಂತದ ಪ್ರತಿಭಾ ಕಾರಂಜಿ ಸ್ಪರ್ಧೆಗಳಲ್ಲಿ ವಿಜೇತರಿಗೆ ಗ್ರಾ.ಪಂ ಅಧ್ಯಕ್ಷ ಕುಮಾರ್ ಬಹುಮಾನ ವಿತರಿಸಿದ್ದು, ವಿವಿಧ ವೇಷಧಾರಿ ಚಿಣ್ಣರು ಗಮನ ಸೆಳೆದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್