ನರೇಗಲ್ ಗ್ರಾಮದಲ್ಲಿ ತೊಗರಿ ಬೆಳೆ ಕ್ಷೇತ್ರೋತ್ಸವ
ಕೊಪ್ಪಳ, 03 ಡಿಸೆಂಬರ್ (ಹಿ.ಸ.) : ಆ್ಯಂಕರ್ : ಕೊಪ್ಪಳ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ವತಿಯಿಂದ ಮಂಗಳವಾರ ಕೊಪ್ಪಳ ತಾಲೂಕಿನ ನರೇಗಲ್ ಗ್ರಾಮದ ಶೇಖಪ್ಪ ಭಾರೀಕರ ಅವರ ಹೊಲದಲ್ಲಿ ತೊಗರಿ ಬೆಳೆಯ ಕ್ಷೇತ್ರೋತ್ಸವನ್ನು ಹಮ್ಮಿಕೊಳ್ಳಲಾಯಿತು. ಈ ಕ್ಷೇತ್ರೋತ್ಸವದಲ್ಲಿ ಭಾಗವಹಿಸಿದ ಕೃಷಿ ವಿಸ್ತರಣಾ ಶಿಕ್ಷಣ
ನರೇಗಲ್ ಗ್ರಾಮದಲ್ಲಿ ತೊಗರಿ ಬೆಳೆ ಕ್ಷೇತ್ರೋತ್ಸವ


ಕೊಪ್ಪಳ, 03 ಡಿಸೆಂಬರ್ (ಹಿ.ಸ.) :

ಆ್ಯಂಕರ್ : ಕೊಪ್ಪಳ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ವತಿಯಿಂದ ಮಂಗಳವಾರ ಕೊಪ್ಪಳ ತಾಲೂಕಿನ ನರೇಗಲ್ ಗ್ರಾಮದ ಶೇಖಪ್ಪ ಭಾರೀಕರ ಅವರ ಹೊಲದಲ್ಲಿ ತೊಗರಿ ಬೆಳೆಯ ಕ್ಷೇತ್ರೋತ್ಸವನ್ನು ಹಮ್ಮಿಕೊಳ್ಳಲಾಯಿತು.

ಈ ಕ್ಷೇತ್ರೋತ್ಸವದಲ್ಲಿ ಭಾಗವಹಿಸಿದ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ವಿಸ್ತರಣಾ ಮುಂದಾಳು ಡಾ. ಎಂ.ವಿರವಿ ಅವರು ಮಾತನಾಡುತ್ತಾ, ತೊಗರಿ ಬೆಳೆ ಕರ್ನಾಟಕ ರಾಜ್ಯದ ಒಂದು ಮುಖ್ಯ ದ್ವಿದಳ ಧಾನ್ಯವಾಗಿದ್ದು, ವಾಣಿಜ್ಯ ಬೆಳೆಯಾಗಿದೆ. ಈ ಬೆಳೆಯನ್ನು ಕಲಬುರ್ಗಿ, ವಿಜಯಪುರ ಅಲ್ಲದೇ ವಲಯ 3 ನಲ್ಲಿ ಬರುವ ಕೊಪ್ಪಳ ಜಿಲ್ಲೆಯಲ್ಲಿ ವ್ಯಾಪಕವಾಗಿ ಬೆಳೆಯಲಾಗುತ್ತಿದೆ.

ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ, ರಾಯಚೂರಿನ ವಲಯ ಕೃಷಿ ಸಂಶೋಧನಾ ಕೇಂದ್ರ, ಕಲಬುರ್ಗಿಯಿಂದ ಅಭಿವೃದ್ಧಿಪಡಿಸಲಾದ ಕೆ.ಆರ್.ಜಿ. 33 ಎನ್ನುವತೊಗರಿ ಬೆಳೆಯ ತಳಿಯನ್ನು ಮುಂಚೂಣಿ ಪ್ರಾತ್ಯಕ್ಷಿಕೆಯಾಗಿ ನರೇಗಲ್ ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿತ್ತು.

ಜೂನ್ ತಿಂಗಳಿನಲ್ಲಿ ಬಿತ್ತನೆ ಮಾಡಿದ ಈ ತಳಿಯು ಈಗ ಕಟಾವಿಗೆ ಸಿದ್ಧವಾಗಿದ್ದು, ರೈತರಿಗೆ ಮಾಹಿತಿ ಸಿಗಲಿ ಎಂಬ ಉದ್ದೇಶದಿಂದ ಕ್ಷೇತ್ರೋತ್ಸವ ಆಯೋಜಿಸಲಾಗಿತ್ತು. ಈ ತಳಿಯ ಮುಖ್ಯ ವಿಶೇಷತೆಗಳೆಂದರೆ, ಕಡಿಮೆ ಅವದಿ ಅಂದರೆ 165 ರಿಂದ 180 ದಿನಗಳಲ್ಲಿ ಕಟಾವಿಗೆ ಬರುತ್ತದೆ ಅಲ್ಲದೇ ಪ್ರಮುಖ ರೋಗಗಳಿಗೆ ನಿರೋಧಕ ಶಕ್ತಿಯನ್ನು ಹೊಂದಿದೆ. ಈ ತಳಿ ಕರ್ನಾಟಕದಲ್ಲಿ ಅಷ್ಟೇ ಅಲ್ಲದೆ ಮಧ್ಯಪ್ರದೇಶ, ಮಹಾರಾಷ್ಟç, ಗುಜರಾತ್ ರಾಜ್ಯಗಳಲ್ಲಿ ಕೂಡಬೆಳೆಯಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ರೈತರ ಅನುಕೂಲಕ್ಕಾಗಿ ಬೀಜಗಳನ್ನು ಪೂರೈಕೆ ಮಾಡಲಾಗುವುದು ಎಂದು ತಿಳಿಸಿದರು.

ಗುಳದಳ್ಳಿಯ ಕೃಷಿ ಸಂಶೋಧನಾ ಕೇಂದ್ರದ ಬೀಜ ವಿಜ್ಞಾನಿ ಡಾ. ಹನುಮಂತಪ್ಪ ದಾಸನಹಳ್ಳಿ ಅವರು, ಕೆ.ಆರ್. ಜಿ. 33 ತೊಗರಿ ತಳಿಯ ಬೀಜಗಳ ಬಗ್ಗೆ, ಬೀಜೋಪಚಾರ ಮತ್ತು ಮಾರುಕಟ್ಟೆ ಬಗ್ಗೆ ಹೆಚ್ಚಿನ ಮಾಹಿತಿ ನೀಡಿದರು.

ಕೊಪ್ಪಳ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ಸಹಾಯಕ ಪ್ರಾಧ್ಯಾಪಕರಾದ ವಾಮನಮೂರ್ತಿ ಅವರು, ತೊಗರಿಗೆ ಬರುವ ರೋಗ ಮತ್ತು ಕೀಟಗಳ ಬಗ್ಗೆ ಹಾಗೂ ಮುಂಚೂಣಿ ಪ್ರಾತ್ಯಕ್ಷಿಕೆ ಹಮ್ಮಿಕೊಳ್ಳುವಾಗ ಆಯ್ಕೆ ಮಾಡಿದ ಗುಚ್ಛ ಗ್ರಾಮಗಳು ಮತ್ತು ಫಲಾನುಭವಿ ರೈತರ ಆಯ್ಕೆ ಪ್ರಕ್ರಿಯೆ ಕುರಿತು ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಹಿರಿಯ ಪ್ರಯೋಗ ಶಾಲಾ ಸಹಾಯಕ ಪ್ರಕಾಶ್ ಬಣಕಾರ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ನರೇಗಲ್ ಗ್ರಾಮದ 25ಕ್ಕೂ ಹೆಚ್ಚು ರೈತರು ಮತ್ತು ರೈತ ಮಹಿಳೆಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ತೊಗರಿ ತಳೀಯ ಮಾಹಿತಿ ಪಡೆದು ಮುಂದಿನ ದಿವಸಗಳಲ್ಲಿ ಬೀಜೋತ್ಪಾದನೆಯನ್ನು ಮಾಡಲು ಹೆಚ್ಚು ಆಸಕ್ತಿ ತೋರಿಸಿದರು.

ರೈತರು ಹೆಚ್ಚಿನ ಮಾಹಿತಿಗಾಗಿ ಕೊಪ್ಪಳ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ವಿಜ್ಞಾನಿಗಳಾದ ವಿಸ್ತರಣಾ ಮುಂದಾಳು ಡಾ. ಎಂ.ವಿ.ರವಿ ಮೊ.ನಂ. 9480247745 ಮತ್ತು ಸಹಾಯಕ ಪ್ರಾಧ್ಯಾಪಕರಾದ ವಾಮನಮೂರ್ತಿ ಮೊ.ನಂ. 8217696837 ಗೆ ಸಂಪರ್ಕಿಸಬಹುದು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande