ಪರಿಸರ ಹಾನಿ ಕುರಿತು ಸೋನಿಯಾ ಗಾಂಧಿ ಕಳವಳ ; ತುರ್ತಾಗಿ ಕ್ರಮ ಕೈಗೊಳ್ಳುವಂತೆ ಮನವಿ
ನವದೆಹಲಿ, 03 ಡಿಸೆಂಬರ್ (ಹಿ.ಸ.) : ಆ್ಯಂಕರ್ : ಅಕ್ರಮ ಗಣಿಗಾರಿಕೆ, ಅರಣ್ಯನಾಶ, ಪರಿಸರ ಕಾನೂನುಗಳ ಸಡಿಲಿಕೆ ಮತ್ತು ಯುರೇನಿಯಂ ಮಿಶ್ರಿತ ಅಂತರ್ಜಲದಂತಹ ಗಂಭೀರ ಪರಿಸರ ಬಿಕ್ಕಟ್ಟಿಗೆ ಕೇಂದ್ರ ಸರ್ಕಾರದ ನೀತಿಗಳೇ ಕಾರಣವಾಗಿವೆ ಎಂದು ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಆರೋಪಿಸಿದ್ದಾರೆ
Soniya


ನವದೆಹಲಿ, 03 ಡಿಸೆಂಬರ್ (ಹಿ.ಸ.) :

ಆ್ಯಂಕರ್ : ಅಕ್ರಮ ಗಣಿಗಾರಿಕೆ, ಅರಣ್ಯನಾಶ, ಪರಿಸರ ಕಾನೂನುಗಳ ಸಡಿಲಿಕೆ ಮತ್ತು ಯುರೇನಿಯಂ ಮಿಶ್ರಿತ ಅಂತರ್ಜಲದಂತಹ ಗಂಭೀರ ಪರಿಸರ ಬಿಕ್ಕಟ್ಟಿಗೆ ಕೇಂದ್ರ ಸರ್ಕಾರದ ನೀತಿಗಳೇ ಕಾರಣವಾಗಿವೆ ಎಂದು ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಆರೋಪಿಸಿದ್ದಾರೆ.

ಇಂಗ್ಲಿಷ್ ಪತ್ರಿಕೆಯೊಂದರ ಲೇಖನದಲ್ಲಿ ಅವರು, ಅರಾವಳಿ ಪರ್ವತ ಶ್ರೇಣಿಯಲ್ಲಿ 100 ಮೀಟರ್‌ಗಿಂತ ಕಡಿಮೆ ಎತ್ತರದ ಬೆಟ್ಟಗಳಿಗೆ ಗಣಿಗಾರಿಕೆ ನಿಷೇಧದಿಂದ ವಿನಾಯಿತಿ ನೀಡುವ ಇತ್ತೀಚಿನ ನಿರ್ಧಾರವು ಶ್ರೇಣಿಯ 90% ಪ್ರದೇಶಕ್ಕೆ ಅಪಾಯ ತಂದೊಡ್ಡುತ್ತದೆ ಎಂದು ಎಚ್ಚರಿಸಿದರು. ಈಗಾಗಲೇ ಅಕ್ರಮ ಗಣಿಗಾರಿಕೆಯಿಂದ ಹಾನಿಗೊಂಡಿರುವ ಅರಾವಳಿ ಪರಿಸರವನ್ನು ಇದು ಮತ್ತಷ್ಟು ನಾಶಮಾಡುತ್ತದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ದೆಹಲಿ–ಎನ್‌ಸಿಆರ್‌ನಲ್ಲಿ ಪ್ರತಿ ಚಳಿಗಾಲದಲ್ಲೂ ಹೆಚ್ಚುತ್ತಿರುವ ವಿಷಕಾರಿ ಹೊಗೆಯಿಂದ ಗಂಭೀರ ಸಾರ್ವಜನಿಕ ಆರೋಗ್ಯ ಬಿಕ್ಕಟ್ಟು ಉಂಟಾಗಿದೆ. ಕೇವಲ 10 ನಗರಗಳಲ್ಲೇ ವರ್ಷಕ್ಕೆ 34,000ಕ್ಕೂ ಹೆಚ್ಚು ಸಾವುಗಳಿಗೆ ವಾಯುಮಾಲಿನ್ಯ ಕಾರಣವಾಗುತ್ತಿದೆ ಎಂದು ಅವರು ಉಲ್ಲೇಖಿಸಿದ್ದಾರೆ.

ದೆಹಲಿಯ ಅಂತರ್ಜಲ ಮಾದರಿಗಳಲ್ಲಿ 13–15% ನೀರಿನಲ್ಲಿ ಸುರಕ್ಷಿತ ಮಿತಿಗಿಂತ ಹೆಚ್ಚಿನ ಯುರೇನಿಯಂ ಪತ್ತೆಯಾಗಿದೆ, ಪಂಜಾಬ್ ಮತ್ತು ಹರಿಯಾಣದಲ್ಲಿ ಇನ್ನೂ ಹೆಚ್ಚಿದೆ ಎಂದು ಕೇಂದ್ರ ಅಂತರ್ಜಲ ಮಂಡಳಿಯ ವರದಿಯನ್ನು ಉದಾಹರಿಸಿದ್ದು. ನೀರು, ಅರಣ್ಯ ಮತ್ತು ಗಾಳಿ — ಈ ಮೂರು ಕ್ಷೇತ್ರಗಳಲ್ಲೂ ಭಾರತ ತ್ವರಿತ ಪರಿಸರ ಅವನತಿಯ ಹಂತದಲ್ಲಿದೆ ಎಂದಿದ್ದಾರೆ.

ಅರಣ್ಯ ಸಂರಕ್ಷಣಾ ತಿದ್ದುಪಡಿ ಕಾಯ್ದೆ 2023, ಕರಡು EIA 2020 ಮತ್ತು ಕರಾವಳಿ ನಿಯಂತ್ರಣ ನಿಯಮಗಳು 2018 ಮೊದಲಾದ ಕ್ರಮಗಳು ಪರಿಸರ ಪರಿಶೀಲನೆ ಮತ್ತು ಸಂರಕ್ಷಣಾ ವ್ಯವಸ್ಥೆಗಳನ್ನು ದುರ್ಬಲಗೊಳಿಸಿವೆ ಎಂದು ಸೋನಿಯಾ ಗಾಂಧಿ ಆರೋಪಿಸಿದ್ದಾರೆ. ಸಾರ್ವಜನಿಕ ಹಿತಾಸಕ್ತಿಗಿಂತ ದೊಡ್ಡ ಕಂಪನಿಗಳ ಯೋಜನೆಗಳು ಹೆಚ್ಚು ಪ್ರೋತ್ಸಾಹಿತವಾಗುತ್ತಿವೆ ಎಂದೂ ಅವರು ಹೇಳಿದ್ದಾರೆ.

ಬುಡಕಟ್ಟು ಸಮುದಾಯಗಳ ಅರಣ್ಯ ಹಕ್ಕುಗಳನ್ನು ದುರ್ಬಲಗೊಳಿಸುವ ಪ್ರವೃತ್ತಿ ಅತ್ಯಂತ ಕಳವಳಕಾರಿ ಎಂದಿರುವ ಅವರು, ಶತಮಾನಗಳಿಂದ ಅರಣ್ಯ ಸಂರಕ್ಷಣೆಯಲ್ಲಿ ಮಹತ್ವದ ಪಾತ್ರ ವಹಿಸಿರುವ ಈ ಸಮುದಾಯಗಳ ಹಿತಾಸಕ್ತಿಯನ್ನು ಕಡೆಗಣಿಸುವುದು ಗಂಭೀರ ಪರಿಣಾಮಗಳು ಉಂಟುಮಾಡಬಹುದು ಎಂದು ಎಚ್ಚರಿಸಿದ್ದಾರೆ.

ಅಕ್ರಮ ಗಣಿಗಾರಿಕೆಗೆ ಕಟ್ಟುನಿಟ್ಟಿನ ತಡೆ, ಅರಣ್ಯನಾಶ ನಿಲ್ಲಿಸುವುದು, ದುರ್ಬಲಗೊಂಡ ಪರಿಸರ ಕಾನೂನುಗಳ ಮರುಪರಿಶೀಲನೆ, ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ ಸಾಮರ್ಥ್ಯವನ್ನು ಹೆಚ್ಚಿಸುವುದು ಸೇರಿದಂತೆ ಪರಿಸರ ಸಂರಕ್ಷಣೆಗೆ ರಾಷ್ಟ್ರದ ಹೊಸ ಬದ್ಧತೆ ಅನಿವಾರ್ಯ ಎಂದು ಅವರು ಒತ್ತಾಯಿಸಿದರು. ಇಂತಹ ಕ್ರಮಗಳಷ್ಟೇ ದೇಶವನ್ನು ಶುದ್ಧ ಗಾಳಿ, ಸುರಕ್ಷಿತ ನೀರು ಹಾಗೂ ಸುಸ್ಥಿರ ಭವಿಷ್ಯದತ್ತ ಕೊಂಡೊಯ್ಯಲಿವೆ ಎಂದು ಗಾಂಧಿ ಹೇಳಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande