ಸಿ.ಎನ್.ಶ್ರೀಧರ್ ನೇತೃತ್ವದಲ್ಲಿ ಆರ್‌ಪಿಆರ್‌ಪಿ ಕಾರ್ಯಕ್ರಮದ ಪ್ರಗತಿ ಪರಿಶೀಲನೆ
ಗದಗ, 03 ಡಿಸೆಂಬರ್ (ಹಿ.ಸ.) : ಆ್ಯಂಕರ್ : ಗ್ರಾಮೀಣ ಆರ್ಥಿಕತೆಗೆ ಹೊಸ ಚೈತನ್ಯ ತುಂಬುವ ಉದ್ದೇಶದಿಂದ ಕೇಂದ್ರ ಸರ್ಕಾರವು 2025-26ನೇ ಸಾಲಿನ ಸಾಮಾನ್ಯ ಬಜೆಟ್‌ನಲ್ಲಿ ಆರ್‌ಪಿಆರ್‌ಪಿ ಯೋಜನೆಯನ್ನು ಘೋಷಿಸಿದೆ. ಗ್ರಾಮೀಣ ಸಮೃದ್ಧಿ ಮತ್ತು ಸ್ಥಿತಿಸ್ಥಾಪಕತ್ವ ಕಾರ್ಯಕ್ರಮ ಎಂಬ ಹೆಸರಿನ ಈ ಬಹುಕ್ಷೇತ್ರ ಯೋಜನ
ಫೋಟೋ


ಗದಗ, 03 ಡಿಸೆಂಬರ್ (ಹಿ.ಸ.) :

ಆ್ಯಂಕರ್ : ಗ್ರಾಮೀಣ ಆರ್ಥಿಕತೆಗೆ ಹೊಸ ಚೈತನ್ಯ ತುಂಬುವ ಉದ್ದೇಶದಿಂದ ಕೇಂದ್ರ ಸರ್ಕಾರವು 2025-26ನೇ ಸಾಲಿನ ಸಾಮಾನ್ಯ ಬಜೆಟ್‌ನಲ್ಲಿ ಆರ್‌ಪಿಆರ್‌ಪಿ ಯೋಜನೆಯನ್ನು ಘೋಷಿಸಿದೆ. ಗ್ರಾಮೀಣ ಸಮೃದ್ಧಿ ಮತ್ತು ಸ್ಥಿತಿಸ್ಥಾಪಕತ್ವ ಕಾರ್ಯಕ್ರಮ ಎಂಬ ಹೆಸರಿನ ಈ ಬಹುಕ್ಷೇತ್ರ ಯೋಜನೆ, ಗ್ರಾಮೀಣ ಪ್ರದೇಶಗಳಲ್ಲಿ ಉದ್ಯೋಗಾವಕಾಶಗಳನ್ನು ಹೆಚ್ಚಿಸುವುದು, ಕೃಷಿ ಉತ್ಪಾದಕತೆಯನ್ನು ವೃದ್ಧಿಸುವುದು ಹಾಗೂ ಸಮಗ್ರ ಅಭಿವೃದ್ಧಿಯನ್ನು ತರಲು ವಿನ್ಯಾಸಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ಸಿ.ಎನ್.ಶ್ರೀಧರ್ ತಿಳಿಸಿದರು.

ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿಂದು ಆರ್.ಪಿ.ಆರ್.ಪಿ. ಯೋಜನೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಈ ಯೋಜನೆಯಡಿ ರಾಜ್ಯ ಸರ್ಕಾರಗಳು ಹಾಗೂ ಸಚಿವಾಲಯಗಳ ಸಹಕಾರದೊಂದಿಗೆ ಗ್ರಾಮೀಣ ಬದುಕಿನ ಗುಣಮಟ್ಟ ಹೆಚ್ಚಿಸುವ ಆದ್ಯತೆಯ ಯೋಜನೆಗಳನ್ನು ಜಾರಿಗೆ ತರುವುದಾಗಿದೆ. ಉದ್ಯೋಗ ಸೃಷ್ಟಿ , ಉದ್ಯಮಾಭಿವೃದ್ಧಿ, ಕೌಶಲ್ಯಾಭಿವೃದ್ಧಿ ಮತ್ತು ಮೂಲಸೌಕರ್ಯ ವಿಕಾಸವೇ ಈ ಕಾರ್ಯಕ್ರಮದ ಮುಖ್ಯ ಆಧಾರಸ್ತಂಭಗಳಾಗಿವೆ. ವಿಶೇಷವಾಗಿ ಗ್ರಾಮೀಣ ಮಹಿಳೆಯರು, ಯುವಕರು ಹಾಗೂ ಭೂ ರಹಿತ ಮತ್ತು ಸಣ್ಣ ರೈತ ಕುಟುಂಬಗಳ ಸಬಲೀಕರಣವನ್ನು ಈ ಯೋಜನೆಯ ಕೇಂದ್ರಬಿಂದುವಾಗಿ ಪರಿಗಣಿಸಲಾಗಿದೆ ಎಂದರು.

ಕೃಷಿ ಉತ್ಪಾದಕತೆ ವೃದ್ಧಿಗೆ ತಂತ್ರಜ್ಞಾನ ಆಧಾರ, ಶಾಶ್ವತ ಕೃಷಿ ಪದ್ದತಿ, ಬೆಳೆ ವೈವಿಧ್ಯೀಕರಣ, ಸುಧಾರಿತ ನೀರಾವರಿ ವ್ಯವಸ್ಥೆ ಮತ್ತು ಸಂಗ್ರಹಣಾ ಸೌಲಭ್ಯಗಳ ವಿಸ್ತರಣೆ ಮೂಲಕ ಕೃಷಿಯನ್ನು ಆಧುನೀಕರಿಸುವುದು ಆರ್‌ಪಿಆರ್‌ಪಿ ಯೋಜನೆಯ ಪ್ರಮುಖ ಗುರಿಯಾಗಿದೆ. ಇದರಿಂದ ಗ್ರಾಮೀಣ ರೈತರ ಆದಾಯ ಮಟ್ಟ ಹೆಚ್ಚಿಸಿ, ಹವಾಮಾನ ಬದಲಾವಣೆಯಿಂದಾಗುವ ಹಾನಿಯನ್ನು ಕಡಿಮೆ ಮಾಡುವ ಉದ್ದೇಶ ಹೊಂದಲಾಗಿದೆ ಎಂದು ವಿವರಿಸಿದರು.

ಗ್ರಾಮೀಣ ಉದ್ಯೋಗ ಸೃಷ್ಟಿ ಮತ್ತು ಉದ್ಯಮಾಭಿವೃದ್ಧಿಗೆ ಉತ್ತೇಜನ, ಗ್ರಾಮೀಣ ಯುವಕರಿಗೆ ಕೌಶಲ್ಯಾಭಿವೃದ್ಧಿ ತರಬೇತಿಗಳು, ಸ್ವಯಂ ಉದ್ಯೋಗ ಮತ್ತು ಸಣ್ಣ ಮಧ್ಯಮ ಮಟ್ಟದ ಉದ್ಯಮ ಸ್ಥಾಪನೆಗೆ ಪ್ರೋತ್ಸಾಹ ನೀಡುವ ಮೂಲಕ ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸಲಾಗುತ್ತದೆ. ತಂತ್ರಜ್ಞಾನ ಬಳಕೆಯನ್ನು ಗ್ರಾಮ ಮಟ್ಟಕ್ಕೆ ತಂದುಕೊಡುವ ಮೂಲಕ ಸೇವಾ, ಉತ್ಪಾದನಾ ಮತ್ತು ಕೃಷಿ ಆಧಾರಿತ ಕ್ಷೇತ್ರಗಳಲ್ಲಿ ಉದ್ಯೋಗದ ಅವಕಾಶಗಳನ್ನು ಹೆಚ್ಚಿಸುವ ಯೋಜನೆ ಇದಾಗಿದೆ. ಇದನ್ನು ಸಮರ್ಪಕವಾಗಿ ವಿವಿಧ ಇಲಾಖೆಗಳು ಯೋಜನೆ ರೂಪಿಸಿ ಅನುಷ್ಟಾನಗೊಳಿಸಬೇಕಿದೆ ಎಂದು ತಿಳಿಸಿದರು.

ಮೂಲಸೌಕರ್ಯ ವಿಕಾಸಕ್ಕೆ ಆದ್ಯತೆ, ಗ್ರಾಮೀಣ ರಸ್ತೆ ಜಾಲ ಬಲಪಡಿಸುವುದು, ವಿಶ್ವಾಸಾರ್ಹ ವಿದ್ಯುತ್ ಪೂರೈಕೆ, ಡಿಜಿಟಲ್ ಸಂಪರ್ಕ ವಿಸ್ತರಣೆ, ಶೌಚಾಲಯ ಮತ್ತು ಸ್ವಚ್ಛತಾ ಸೌಲಭ್ಯಗಳ ಸುಧಾರಣೆ ಮುಂತಾದ ಮೂಲಸೌಕರ್ಯ ಅಭಿವೃದ್ಧಿ ಕಾರ್ಯಗಳನ್ನು ಈ ಯೋಜನೆಯಡಿ ಜಾರಿಗೆ ತರಲಾಗುತ್ತದೆ. ಮೂಲಸೌಕರ್ಯ ಬಲವಾದಷ್ಟೂ ಹೂಡಿಕೆ, ಉದ್ಯೋಗ ಹಾಗೂ ಸೇವಾ ಚಟುವಟಿಕೆಗಳಿಗೆ ಅವಕಾಶ ಹೆಚ್ಚುವುದನ್ನು ಸರ್ಕಾರ ಗುರಿಯಾಗಿಸಿಕೊಂಡಿದೆ.

ಸಣ್ಣ ಉದ್ಯಮಗಳು, ಕೃಷಿ ಆಧಾರಿತ ಉದ್ಯಮಗಳು, ಮೈಕ್ರೋಫೈನಾನ್ಸ್ ಸೌಲಭ್ಯಗಳಿಗೆ ಬೆಂಬಲ, ಮಾರುಕಟ್ಟೆ ಸಂಪರ್ಕ ಮಾರ್ಕೆಟ್ ಲಿಂಕೆಜ್ ಸುಗಮೀಕರಣ ಹಾಗೂ ಡಿಜಿಟಲ್ ಹಣಕಾಸು ಸೇರಿಕೆ ವಿಸ್ತರಣೆಗೆ ಆರ್‌ಪಿಆರ್‌ಪಿ ವಿಶೇಷ ಒತ್ತು ನೀಡಲಿದೆ. ಇದರಿಂದ ಗ್ರಾಮೀಣ ಮಹಿಳಾ ಮತ್ತು ಯುವ ಉದ್ಯಮಿಗಳ ಸಂಖ್ಯೆಯಲ್ಲಿ ಹೆಚ್ಚಳ ಕಾಣುವ ನಿರೀಕ್ಷೆ ಯಿದ್ದು ಇಲಾಖಾಧಿಕಾರಿಗಳು ಇಲಾಖಾದಿಕಾರಿಗಳು ಆಸಕ್ತಿ ವಹಿಸಿ ಕಾರ್ಯನಿರ್ವಹಿಸಲು ಸೂಚಿಸಿದರು.

ಹವಾಮಾನ ಸ್ನೇಹಿ ಕೃಷಿ ವಿಧಾನಗಳು, ನವೀಕರಿಸಬಹುದಾದ ಇಂಧನ ಬಳಕೆ, ಪ್ರಾಕೃತಿಕ ವಿಪತ್ತು ಅಪಾಯ ಕಡಿತಗೊಳಿಸುವ ಕ್ರಮಗಳಿಗೆ ಸಹಾಯಧನ ಮತ್ತು ತಾಂತ್ರಿಕ ಬೆಂಬಲ ಒದಗಿಸುವ ಮೂಲಕ ಗ್ರಾಮೀಣ ಪ್ರದೇಶಗಳನ್ನು ಹವಾಮಾನ ಬದಲಾವಣೆಗಳಿಗೆ ಪ್ರತಿರೋಧಕವಾಗಿಸುವ ಉದ್ದೇಶ ಯೋಜನೆ ಹೊಂದಿದೆ. ಇದರ ಸಂಪೂರ್ಣ ಸದುಪಯೋಗ ಗ್ರಾಮೀಣ ಜನತೆಗೆ ಲಭಿಸಬೇಕಿದೆ. ಈ ನಿಟ್ಟಿನಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳು ಸೂಕ್ತ ಯೋಜನೆ ರೂಪಿಸಿ ಯೋಜನೆ ತಲುಪಿಸುವ ಹೊಣೆಗಾರಿಕೆ ನಿರ್ವಹಿಸುವಂತೆ ಹೇಳಿದರು.

ಗ್ರಾಮೀಣ ಮಹಿಳೆಯರು, ಯುವ ರೈತರು ಮತ್ತು ಗ್ರಾಮೀಣ ಯುವಕರು, ಅಲ್ಪ ಮತ್ತು ಸಣ್ಣ ರೈತರು, ಭೂ ರಹಿತ ಕುಟುಂಬಗಳು ಈ ಯೋಜನೆಯ ಪ್ರಮುಖ ಗುರಿ ಲಾಭಾರ್ಥಿಗಳಾಗಿದ್ದು, ಅವರಿಗೆ ಶಾಶ್ವತ ಆದಾಯ ಹಾಗೂ ಬದುಕಿನ ಭದ್ರತೆ ಒದಗಿಸುವುದು ಆರ್‌ಪಿಆರ್‌ಪಿ ಯೋಜನೆಯ ಮುಖ್ಯ ಉದ್ದೇಶವಾಗಿದೆ ಎಂದು ಜಿಲ್ಲಾಧಿಕಾರಿಗಳು ಆರ್‌ಪಿಆರ್‌ಪಿ ಯೋಜನೆ ಕುರಿತು ಅಧಿಕಾರಿಗಳಿಗೆ ಮನವರಿಕೆ ಮಾಡಿಕೊಟ್ಟರು.

ಏಷಿಯನ್ ಡೆವಲಪ್ ಮೆಂಟ್ ಬ್ಯಾಂಕ್‌ನ ಅಧಿಕಾರಿ ರಾಘವೇಂದ್ರ ಮಾತನಾಡಿ ಆರ್‌ಪಿಆರ್‌ಪಿ ಯೋಜನೆ ಕುರಿತು ಇಲಾಖಾಧಿಕಾರಿಗಳು ನೀಡಿದ ಮಾಹಿತಿಯನ್ನು ಗಮನಿಸಿ ಆರ್‌ಪಿಆರ್‌ಪಿ ಯೋಜನೆಯನ್ನು ಗದಗ ಜಿಲ್ಲೆಯಲ್ಲಿ ಪರಿಣಾಮಕಾರಿಯಾಗ ಅನುಷ್ಟಾನಗೊಳಿಸಲು ವಿಫುಲ ಅವಕಾಶವಿದ್ದು ಗ್ರಾಮೀಣ ಆರ್ಥಿಕ ಸುಧಾರಣೆಗೆ ಸಹಕಾರಿಯಾಗಲಿದೆ ಎಂದರು. ಆರ್ ಪಿ ಆರ್ ಪಿ ಯೋಜನೆಯ ರೂಪು ರೇಷೆಗಳನ್ನು ಡಿಸೆಂಬರ್ 7 ರೊಳಗಾಗಿ ವರದಿ ನೀಡಬೇಕಿದೆ. ಅಲ್ಲದೇ ಮಾರ್ಚ 26 ರೊಳಗಾಗಿ ರಾಜ್ಯದ ಎಲ್ಲ ಜಿಲ್ಲೆಗಳ ರೂಪು ರೇಷೆಗಳ ಸಮಗ್ರ ವರದಿ ಸಲ್ಲಿಸಲು ಕೊನೆಯ ದಿನವಾಗಿದೆ. ಈ ನಿಟ್ಟಿನಲ್ಲಿ ಇಲಾಖಾಧಿಕಾರಿಗಳು ಸೂಕ್ತ ಸಹಕಾರ ನೀಡುವಂತೆ ಕೋರಿದರು.

ಕೃಷಿ, ತೋಟಗಾರಿಕೆ, ಗ್ರಾಮೀಣಾಭಿವೃದ್ಧಿ, ಆರೋಗ್ಯ, ಲೀಡ್ ಬ್ಯಾಂಕ್, ಪ್ರವಾಸೋದ್ಯಮ, ಶಿಕ್ಷಣ , ಪಂಚಾಯತ್ ರಾಜ್, ಎನ್‌ಆರ್‌ಎಲ್‌ಎಂ, ಆಹಾರ, ಪಶುಸಂಗೋಪನಾ ಇಲಾಖೆ ಸೇರಿದಂತೆ ಇತರೆ ಇಲಾಖೆಗಳ ಅಧಿಕಾರಿಗಳು ತಮ್ಮ ಇಲಾಖೆಗಳಿಗೆ ಸಂಬಂಧಿಸಿದಂತೆ ಕೈಗೊಳ್ಳಬಹುದಾದ ಕಾರ್ಯಕ್ರಮಗಳ ಮತ್ತು ಯೋಜನೆಗಳ ರೂಪರೇಷೆ ಸಿದ್ಧಪಡಿಸುವ ಕುರಿತಂತೆ ತಮ್ಮದೇ ಅಭಿಪ್ರಾಯ ಹಾಗೂ ವರದಿಗಳನ್ನು ಸಭೆಯ ಗಮನಕ್ಕೆ ತಂದರು.

ಈ ಸಂದರ್ಭದಲ್ಲಿ ಏಷಿಯನ್ ಡೆವಲಪ್‌ಮೆಂಟ್ ಬ್ಯಾಂಕ್‌ನ ಅಧಿಕಾರಿಗಳಾದ ಅಲೋಕ ಕುಮಾರ್ ಹಾಗೂ ತನುಶ್ರೀ , ಜಿ.ಪಂ. ಉಪಕಾರ್ಯದರ್ಶಿ ಸಿ.ಆರ್.ಮುಂಡರಗಿ ಸೇರಿದಂತೆ ವಿವಿಧ ಜಿಲ್ಲಾ ಮಟ್ಟದ ಅಧಿಕಾರಿಗಳಾದ ಎ.ಎ.ಕಂಬಾಳಿಮಠ, ಎಂ.ವಿ.ಚಳಗೇರಿ, ಚೇತನಾ ಪಾಟೀಲ, ಡಾ.ಬಸವರಾಜ ಬೊಮ್ಮನಹಳ್ಳಿ, ಡಾ.ಎಸ್.ಎಸ್.ನೀಲಗುಂದ, ಆರ್.ಎಸ್.ಬುರಡಿ, ಜಿ.ಎಂ. ಮುಂದಿನಮನಿ, ಕೊಟ್ರೇಶ ವಿಭೂತಿ, ಪದ್ಮಾವತಿ ಜಿ, ಡಾ.ಶರಣು ಗೋಗೇರಿ, ರುದ್ರಣ್ಣಗೌಡ ಜಿ.ಜೆ, ಡಾ. ಎಚ್.ಬಿ.ಹುಲಗಣ್ಣವರ, ಬಸವರಾಜ ಮಲ್ಲೂರ, ಡಾ.ಬಸವರಾಜ ಬಳ್ಳಾರಿ, ಡಾ.ನಂದಾ ಹಣಬರಟ್ಟಿ, ಬಸನಗೌಡ ಕೊಟೂರ, ರಾಜಾರಾಮ ಪವಾರ, ಎಂ.ಎಂ.ತುಂಬರಮಟ್ಟಿ, ಅಮಿತ ಬಿದರಿ, ಶ್ರೀಶೈಲ ಸೊಮನಕಟ್ಟಿ, ಶಿವಕುಮಾರ ಕುರಿಯುವರ, ಸಿದ್ಧಲಿಂಗ ಮಸನಾಯಕ ಸೇರಿದಂತೆ ಇತರರು ಹಾಜರಿದ್ದರು

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande