



ಬಳ್ಳಾರಿ, 03 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ಸಮಾಜದಲ್ಲಿ ವಿಕಲಚೇತನರು ವಿಶೇಷ ಶಕ್ತಿ ಉಳ್ಳವರು, ಪ್ರತಿಯೊಬ್ಬರೂ ವಿಕಲಚೇತನರ ಅಭಿವೃದ್ಧಿಗೆ ಶ್ರಮಿಸೋಣ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ರಾಜೇಶ್ ಎನ್.ಹೊಸಮನೆ ಅವರು ಹೇಳಿದ್ದಾರೆ.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ವಿಕಲಚೇತನರ ಪುನರ್ವಸತಿ ಕೇಂದ್ರ, ವಿಕಲಚೇತನರ ಶ್ರೇಯೋಭಿವೃದ್ಧಿಗಾಗಿ ಶ್ರಮಿಸುತ್ತಿರುವ ಸ್ವಯಂ ಸೇವಾ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ನಗರದ ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಬುಧುವಾರ ಏರ್ಪಡಿಸಿದ್ದ ವಿಶ್ವ ವಿಕಲಚೇತನರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ದೈಹಿಕ-ಮಾನಸಿಕವಾಗಿ ಸದೃಢ ಇರುವ ಮನುಷ್ಯರೇ ಬೇಸತ್ತು, ಕಷ್ಟಕರ ಜೀವನ ನಡೆಸುತ್ತಾರೆ. ಆದರೆ ವಿಕಲಚೇತನರು ಕಷ್ಟ-ನೋವು, ಅಸಹಾಯಕತೆಯ ಸಂದರ್ಭದಲ್ಲಿಯೂ ಯಾವುದೇ ಬೆಂಬಲವಿಲ್ಲದೆ ಛಲದಿಂದ ಜೀವನ ನಡೆಸಲು ಶಕ್ತರಾಗಿರುತ್ತಾರೆ ಎಂದರು.
ವಿಕಲಚೇತನರ ಪೋಷಕರು ಹಾಗೂ ಆರೈಕೆ ಮಾಡುವ ಆರೈಕೆದಾರರು ಅವರು ಯಾವ ಕ್ಷೇತ್ರದಲ್ಲಿ ಸಾಧನೆ ಮಾಡಲು ಬಯಸುವರೋ ಅದಕ್ಕೆ ಬೆಂಬಲ ನೀಡಿ ಸಮಾಜದ ಮುಖ್ಯವಾಹಿನಿಗೆ ತರಬೇಕು. ಜಿಲ್ಲೆಯಲ್ಲಿರುವ ಸ್ವಯಂ ಸೇವಾ ಸಂಸ್ಥೆಗಳು ವಿಕಲಚೇತನರನ್ನು ಮಕ್ಕಳಂತೆ ಆರೈಕೆ ಮಾಡಿ ನೋಡಿಕೊಳ್ಳುತ್ತಿರುವುದು ಶ್ಲಾಘನೀಯವಾಗಿದೆ ಎಂದು ಹೇಳಿದರು.
ಅಂಗವಿಕಲರೂ ಸಹ ಸಾಧನೆ ಮಾಡಲು ಅರ್ಹರಾಗಿದ್ದು, ವಿಜ್ಞಾನಿ ಸ್ಟೀಫೆನ್ ಹಾಕಿಂಗ್ ಅವರು ತಮ್ಮ ಅಂಗ ವೈಕಲ್ಯತೆಯನ್ನು ಮೆಟ್ಟಿ ನಿಂತು ಸಾಧನೆ ಶಿಖರ ಏರಿದ್ದರು. ಅದರಂತೆ ಎಲ್ಲಾ ವಿಶೇಷಚೇತನರು ಕಲೆ, ನೃತ್ಯ, ಆಟ ಸೇರಿದಂತೆ ಪ್ರತಿಯೊಂದು ಕ್ಷೇತ್ರದಲ್ಲಿ ಸಾಧನೆ ಮಾಡಿ, ಹಸನ್ಮುಖ-ಲವಲವಿಕೆಯಿಂದ ಜೀವನ ನಡೆಸಬೇಕು ಎಂದು ಹುರಿದುಂಬಿಸಿದರು.
ಬಳ್ಳಾರಿ ಮಹಾನಗರ ಪಾಲಿಕೆಯ ಮಹಾಪೌರರಾದ ಪಿ.ಗಾದೆಪ್ಪ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಮಾಜದಲ್ಲಿ ವಿಕಲಚೇತನರು ಸ್ವಾವಲಂಬಿಯಾಗಿ ಬದುಕುವ ಛಲವನ್ನು ಹೊಂದಿದ್ದಾರೆ. ಕರುಣೆ ತೋರದೇ ಅವರನ್ನು ಸಮಾನತೆಯಿಂದ ಕಾಣಬೇಕು. ಮಹಾನಗರ ಪಾಲಿಕೆಯ ಆಯ್ಯ-ವ್ಯಯ ಸಭೆಯನ್ನು ಡಿ.09 ಕ್ಕೆ ಏರ್ಪಡಿಸಲಾಗಿದ್ದು, ವಿಕಲಚೇತನರ ಶ್ರೇಯೋಭಿವೃದ್ಧಿಗಾಗಿ ಶ್ರಮಿಸುತ್ತಿರುವ ಸ್ವಯಂ ಸೇವಾ ಸಂಸ್ಥೆಗಳು ಹಾಗೂ ವಿಕಲಚೇತನರು ಸಭೆಯಲ್ಲಿ ಭಾಗವಹಿಸಿ ತಮ್ಮ ಮನವಿಗಳು, ಬೇಡಿಕೆಗಳನ್ನು ಪ್ರಸ್ತಾಪಿಸಬಹುದು ಎಂದು ತಿಳಿಸಿದರು.
ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಶಶಿಕಾಂತ್ ಶಿವಪೂರೆ ಅವರು ಮಾತನಾಡಿ, ವಿಶೇಷಚೇತನರಿಗೆ ಸರ್ಕಾರದಿಂದ ಹಲವಾರು ಸೌಲಭ್ಯಗಳಿದ್ದು, ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯತಿ ಅಭಿವೃದ್ಧಿ ಅನುದಾನದಲ್ಲಿ ಶೇ.05 ರಷ್ಟು ಹಾಗೂ ಗ್ರಾಮ ಪಂಚಾಯತಿಯ 15ನೇ ಹಣಕಾಸು ಅನುದಾನದಲ್ಲಿ ಶೇ.05 ರಷ್ಟು ವಿಶೇಷಚೇತನರಿಗೆ ಮೀಸಲಾತಿ ಇದ್ದು, ಇದರ ಜೊತೆಗೆ ವಸತಿ ಯೋಜನೆ, ನರೇಗಾ ಯೋಜನೆ, ಸ್ವಚ್ಛಭಾರತ್ ಮಿಷನ್ ಮುಂತಾದ ಯೋಜನೆಯಡಿ ವಿಶೇಷಚೇತನರಿಗೆ ಹಲವಾರು ಸೌಲಭ್ಯಗಳು ಇವೆ. ಆದರೂ ಸಹ ಕೆಲವು ಸೌಲಭ್ಯಗಳು ಅವರಿಗೆ ದೊರಕುತ್ತಿಲ್ಲ. ಆದ್ದರಿಂದ ತಾಲ್ಲೂಕು ಪಂಚಾಯತಿ ಹಾಗೂ ಪ್ರತಿ ಗ್ರಾಮ ಪಂಚಾಯಿತಿಯ ಎಮ್‍ಆರ್‍ಡಬ್ಲ್ಯೂ, ವಿಆರ್‍ಡಬ್ಲ್ಯೂ ಗಳು ಸರ್ಕಾರದ ಸೌಲಭ್ಯಗಳ ಬಗ್ಗೆ ತಿಳಿಸಿ ಮಾಹಿತಿ ನೀಡಬೇಕು ಎಂದು ತಿಳಿಸಿದರು.
ವಿಶೇಷಚೇತನರ ಮೂಲಭೂತ ಸೌಲಭ್ಯಗಳು, ಬೇಡಿಕೆಗಳು ಹಾಗೂ ಮನವಿಗಳನ್ನು ಎಮ್‍ಆರ್‍ಡಬ್ಲ್ಯೂ, ವಿಆರ್‍ಡಬ್ಲ್ಯೂ ಗಳ ಪಟ್ಟಿ ಮಾಡಿ ಜಿಲ್ಲಾ ಪಂಚಾಯಿತಿಗೆ ನೀಡಬೇಕು. ಜಿಲ್ಲಾಧಿಕಾರಿಗಳು ಹಾಗೂ ಸಿಇಒ ಅವರ ನೇತೃತ್ವದಲ್ಲಿ ಸಭೆ ನಡೆಸಲಾಗುವುದು. ಜಿಲ್ಲೆಯ 100 ಗ್ರಾಮ ಪಂಚಾಯಿತಿಗಳ ಪೈಕಿ 88 ಗ್ರಾಮಗಳಲ್ಲಿ ಗ್ರಾಮ ಗ್ರಂಥಾಲಯಗಳನ್ನು ಸ್ಥಾಪಿಸಲಾಗಿದ್ದು, ವಿಶೇಷಚೇತನರಿಗೆ ಬ್ರೈಲ್ ಲಿಪಿಯ ಪುಸ್ತಕಗಳನ್ನು ಗ್ರಾಂಥಲಯದಲ್ಲಿ ಅಳವಡಿಸಲಾಗಿದೆ. ಇದರ ಸದುಪಯೋಗ ಪಡೆದುಕೊಳ್ಳಬಹುದು. ಎನ್‍ಆರ್‍ಎಂಎಲ್ ಯೋಜನೆಯಡಿ ವಿಕಲಚೇತನರ ಸಂಘ ರಚನೆ ಮಾಡಲಾಗುತ್ತಿದ್ದು, ಈ ಸಂಘದ ಮೂಲಕ ಜಿಲ್ಲಾ ಪಂಚಾಯತಿಯ ಅನುದಾನದಲ್ಲಿ ವಿಶೇಷಚೇತನರಿಗೆ ಸ್ವ-ಉದ್ಯೋಗ ಮಾಡಲು ಅವಕಾಶ ನೀಡಲಾಗುವುದು ಎಂದರು.
ಇದೇ ವೇಳೆ ಸಾಧನೆಗೈದ ವಿಕಲಚೇತನರಿಗೆ ಸನ್ಮಾನಿಸಿ ಗೌರವಿಸಲಾಯಿತು ಹಾಗೂ ಕ್ರೀಡಾ ಮತ್ತು ಸಾಂಸ್ಕøತಿಕ ಕಾರ್ಯಕ್ರಮದಲ್ಲಿ ವಿಜೇತರಾದ ವಿಕಲಚೇತನರಿಗೆ ಬಹುಮಾನ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಬ್ರೂಸ್‍ಪೇಟೆ ಪೊಲೀಸ್ ಠಾಣೆಯ ಪಿಎಸ್‍ಐ ಮಹಾಂತೇಶ್, ಎಪಿಎಂಸಿ ಪೊಲೀಸ್ ಠಾಣೆಯ ಪಿಎಸ್‍ಐ ಮಹಮ್ಮದ್ ರಪೀ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ರಾಮಕೃಷ್ಣ ನಾಯಕ್, ಜಿಲ್ಲಾ ಕುಷ್ಠರೋಗ ನಿಯಂತ್ರಣಾಧಿಕಾರಿ ಡಾ.ವೀರೇಂದ್ರ ಕುಮಾರ್, ಶಿಕ್ಷಣ ಇಲಾಖೆಯ ಲಕ್ಷ್ಮೀದೇವಿ, ಜೆಎಸ್‍ಡಬ್ಲ್ಯೂ ತಮನ್ನಾ ಸಂಸ್ಥೆಯ ವಿಶೇಷಚೇತನರ ಶಾಲೆಯ ಸವಿತಾ, ವೈ.ಎಂ ಸತೀಶ್ ಫೌಂಡೇಶನ್ ಟ್ರಸ್ಟ್‍ನ ಕಾರ್ತಿಕ್, ನವತಾರೆ ಅಂಗವಿಕಲರ ಒಕ್ಕೂಟದ ಅಧ್ಯಕ್ಷ ಜಾಪರ್ ಸಾಧೀಕ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ನಿರೂಪಣಾಧಿಕಾರಿ ಸವಿತಾ, ಹಿರಿಯ ನಾಗರಿಕರ ಸಬಲೀಕರಣ ಕಲ್ಯಾಣಾಧಿಕಾರಿ ಗೋವಿಂದಪ್ಪ ಹೆಚ್.ಎಂ ಸೇರಿದಂತೆ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಸ್ವಯಂ ಸೇವಕರು, ವಿಕಲಚೇತನರು ಹಾಗೂ ಇತರರು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್