
ಬೆಂಗಳೂರು, 03 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ಅತ್ಯಾಚಾರ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಜೆಡಿಎಸ್ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರಿಗೆ ಕರ್ನಾಟಕ ಹೈಕೋರ್ಟ್ ಇಂದು ದೊಡ್ಡ ಶಾಕ್ ನೀಡಿದೆ. ಶಿಕ್ಷೆಯನ್ನು ಅಮಾನತುಗೊಳಿಸಿ ಜಾಮೀನು ನೀಡುವಂತೆ ಸಲ್ಲಿಸಿದ್ದ ಅವರ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.
ಪ್ರಜ್ವಲ್ ಪರವಾಗಿ ಹಿರಿಯ ವಕೀಲ ಸಿದ್ದಾರ್ಥ್ ಲೂಥ್ರಾ ಹಾಜರಾಗಿ, “ಜಾಮೀನು ನೀಡಿದರೂ ಪರಾರಿಯಾಗುವ ಪ್ರಶ್ನೆಯೇ ಇಲ್ಲ. ಉಳಿದಿರುವ ಪ್ರಕರಣಗಳ ವಿಚಾರಣೆಗೆ ಸಕಾಲಕ್ಕೆ ಹಾಜರಾಗುತ್ತೇವೆ,” ಎಂದು ವಾದ ಮಂಡಿಸಿದರು. ಆದರೆ ವಾದ ವಿಚಾರಿಸಿ, ನ್ಯಾಯಾಲಯ ಅರ್ಜಿಯನ್ನು ತಿರಸ್ಕರಿಸಿತು.
ವಿಶೇಷ ನ್ಯಾಯಾಲಯದ ತೀರ್ಪು
ಕೆ.ಆರ್.ನಗರದ ಮನೆಕೆಲಸದಾಕೆಯ ಮೇಲೆ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಪ್ರಜ್ವಲ್ ರೇವಣ್ಣರನ್ನು ದೋಷಿ ಎಂದು ತೀರ್ಪು ನೀಡಿ, ಜೀವಾವಧಿ ಶಿಕ್ಷೆ ವಿಧಿಸಿತ್ತು. ಈ ತೀರ್ಪಿಗೆ ವಿರೋಧವಾಗಿ ಶಿಕ್ಷೆ ಅಮಾನತು–ಜಾಮೀನು ಕೋರಿ ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು.
ಪ್ರಕರಣದ ಹಿನ್ನೆಲೆ
ಕೆ.ಆರ್.ನಗರ ಸಂತ್ರಸ್ತೆ ಪ್ರಕರಣದಲ್ಲಿ ಪ್ರಜ್ವಲ್ ರೇವಣ್ಣ ವಿರುದ್ಧ ಅತ್ಯಾಚಾರ ಮತ್ತು ಅಪಹರಣ ಸೇರಿದಂತೆ ಹಲವು ಗಂಭೀರ ಆರೋಪಗಳು ದಾಖಲಾಗಿದ್ದವು.
ಅತ್ಯಾಚಾರ ಘಟನೆ ಹೊರಬರುತ್ತದೆ ಎಂಬ ಭಯದಿಂದ, ಪ್ರಜ್ವಲ್ ರೇವಣ್ಣ, ಭವಾನಿ ರೇವಣ್ಣ, ಸತೀಶ್ ಬಾಬು ಸೇರಿದಂತೆ ಒಟ್ಟು 9 ಮಂದಿ ಸೇರಿ ಸಂತ್ರಸ್ತೆಯನ್ನು ಅಪಹರಿಸಿ, ಹುಣಸೂರು ಬಳಿಯ ತೋಟದ ಮನೆಯಲ್ಲಿ ಬಂಧಿಸಿದ್ದರು. ಈ ಅಪಹರಣ ಪ್ರಕರಣದಲ್ಲೇ ಪ್ರಜ್ವಲ್ ಸೇರಿದಂತೆ 8 ಮಂದಿ ಜೈಲು ಸೇರಿದ್ದರು. ತಲೆಮರೆಸಿಕೊಂಡಿದ್ದ ಭವಾನಿ ರೇವಣ್ಣ ನಂತರ ನಿರೀಕ್ಷಣಾ ಜಾಮೀನು ಪಡೆದಿದ್ದರು.
ಆನಂತರ ಎಸ್‌ಐಟಿ ಸಂತ್ರಸ್ತೆಯ ಹೇಳಿಕೆ ದಾಖಲಿಸಿ ತನಿಖೆ ನಡೆಸಿ, ದೋಷಾರೋಪಪಟ್ಟಿ ಸಲ್ಲಿಸಿತ್ತು.
ತನಿಖೆ ವೇಳೆ ಪ್ರಜ್ವಲ್ ರೇವಣ್ಣ ಅವರ ಮೊಬೈಲ್‌ನಲ್ಲಿ ಸಂತ್ರಸ್ತೆಯನ್ನು ಬೆತ್ತಲಾಗಿಸುವ ಮೂಲಕ ಲೈಂಗಿಕ ಕಿರುಕುಳ ನೀಡಿದ ವೀಡಿಯೋ ಕ್ಲಿಪ್ ಪತ್ತೆಯಾಗಿ, ಅದು ಪ್ರಕರಣದ ಪ್ರಮುಖ ಸಾಕ್ಷಿಯಾಗಿ ಪರಿಣಮಿಸಿತು. ಎಫ್‌ಎಸ್‌ಎಲ್ ವರದಿಯೂ ವೀಡಿಯೋದಲ್ಲಿರುವ ವ್ಯಕ್ತಿ ಪ್ರಜ್ವಲ್ ರೇವಣ್ಣನೇ ಎಂಬುದನ್ನು ದೃಢಪಡಿಸಿತ್ತು.
ಚುನಾವಣೆ ವೇಳೆ ವೈರಲ್ ಆದ ಪೆನ್‌ಡ್ರೈವ್‌ಗಳು
ಕಳೆದ ಲೋಕಸಭಾ ಚುನಾವಣೆಯ ವೇಳೆ ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾದ ಅಶ್ಲೀಲ ವೀಡಿಯೋಗಳಿರುವ ಪೆನ್‌ಡ್ರೈವ್‌ಗಳು ಹಾಸನದಲ್ಲಿ ವ್ಯಾಪಕವಾಗಿ ಹಂಚಲ್ಪಟ್ಟಿದ್ದು, ಹೊಳೆನರಸೀಪುರದ ಮಹಿಳೆಯೊಬ್ಬರ ದೂರು ಆಧಾರವಾಗಿ ಪೋಲಿಸರು ತನಿಖೆ ಪ್ರಾರಂಭಿಸಿದ್ದರು.
ಈ ಪ್ರಕರಣಕ್ಕೆ ಸಂಬಂಧಿಸಿ 2024ರ ಮೇ 31ರಂದು ಪ್ರಜ್ವಲ್ ರೇವಣ್ಣ ಅವರನ್ನು ಪೊಲೀಸರು ಬಂಧಿಸಿದ್ದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa