ವಿಕಲಚೇತನರಲ್ಲಿನ ಪ್ರತಿಭೆಯನ್ನು ಗುರುತಿಸಿ ಮುನ್ನಡೆಸಿ : ಸಿ ಎನ್ ಶ್ರೀಧರ
ಗದಗ, 03 ಡಿಸೆಂಬರ್ (ಹಿ.ಸ.) : ಆ್ಯಂಕರ್ : ವಿಕಲಚೇತನರಲ್ಲಿ ಇರುವ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಬೇಕು. ವಿಕಲಚೇತನರಿಗೆ ಅನುಕಂಪ ಬೇಕಾಗಿಲ್ಲ. ಅವರಲ್ಲಿ ಮನೋಸ್ಥೈರ್ಯ ತುಂಬಿ ಮುನ್ನಡೆಸಬೇಕು ಎಂದು ಜಿಲ್ಲಾಧಿಕಾರಿ ಸಿ.ಎನ್.ಶ್ರೀಧರ್ ತಿಳಿಸಿದರು. ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್‌ನಲ್ಲ
ಫೋಟೋ


ಗದಗ, 03 ಡಿಸೆಂಬರ್ (ಹಿ.ಸ.) :

ಆ್ಯಂಕರ್ : ವಿಕಲಚೇತನರಲ್ಲಿ ಇರುವ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಬೇಕು. ವಿಕಲಚೇತನರಿಗೆ ಅನುಕಂಪ ಬೇಕಾಗಿಲ್ಲ. ಅವರಲ್ಲಿ ಮನೋಸ್ಥೈರ್ಯ ತುಂಬಿ ಮುನ್ನಡೆಸಬೇಕು ಎಂದು ಜಿಲ್ಲಾಧಿಕಾರಿ ಸಿ.ಎನ್.ಶ್ರೀಧರ್ ತಿಳಿಸಿದರು.

ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್‌ನಲ್ಲಿಂದು ಗದಗ ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ವಿಕಲಚೇತನರ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಸ್ವಯಂ ಸೇವಾ ಸಂಸ್ಥೆ ಮತ್ತು ಸಂಘಗಳು, ಇವರುಗಳ ಸಹಯೋಗದಲ್ಲಿ “ ಸಾಮಾಜಿಕ ಪ್ರಗತಿಯನ್ನು ಸಾಧಿಸಲು ವಿಕಲಚೇತನರನ್ನು ಒಳಗೊಂಡ ಸಮಾಜಗಳನ್ನು ರೂಪಿಸುವುದು” ಎಂಬ ಘೋಷವಾಕ್ಯದಡಿ ಹಮ್ಮಿಕೊಳ್ಳಲಾದ ವಿಶ್ವ ವಿಕಲಚೇತನರ ದಿನಾಚರಣೆ 2025 ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ವಿಕಲಚೇತನರು ಸ್ವಾವಲಂಬಿಯಾಗಿ ಬದುಕು ಸಾಗಿಸಲು ಹಾಗೂ ಅವರಲ್ಲಿ ಅಡಗಿರುವ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸವಾಗಬೇಕು. ಜಿಲ್ಲೆಯಲ್ಲಿನ ವಿಕಲಚೇತನರು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿ ಅಂತರಾಷ್ಟ್ರೀಯ ಮಟ್ಟದಲ್ಲಿಯೂ ಗದಗ ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ಸಮಾಜದಲ್ಲಿ ವಿಕಲಚೇತನರನ್ನು ಗೌರವದಿಂದ ಕಾಣುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಭಾರತ ದೇಶದಲ್ಲಿನ ಕ್ರಿಡಾಪಟುಗಳಲ್ಲಿ ವಿಕಲಚೇತನ ಕ್ರೀಡಾಪಟುಗಳು ವಿಶ್ವಮಟ್ಟದಲ್ಲಿ ಗುರುತಿಸಿಕೊಂಡು ಯಾವುದರಲ್ಲೂ ತಾವು ಕಡಿಮೆ ಎಲ್ಲ ಎಂದು ಸಾಬಿತುಪಡಿಸಿದ್ದಾರೆ. ದೇವರು ಕೊಟ್ಟ ಅತೀಂದ್ರಿಯ ಶಕ್ತಿಯನ್ನು ಉಪಯೋಗಿಸಿಕೊಂಡು ಸಾಧನೆ ಮಾಡಿದ್ದಾರೆ. ದೇವರು ಕೊಟ್ಟ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡು ಸ್ವಾವಲಂಬಿಯಾಗಿ ಬದುಕು ನಿರ್ವಹಿಸುವುದು ಸಾರ್ಥಕ ಬದುಕೆನಿಸುತ್ತದೆ ಎಂದರು.

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಿ.ಎಸ್.ಶಿವನಗೌಡ್ರ ಮಾತನಾಡಿ ವಿಕಲ ಚೇತನರಿಗೆ ಇರುವ ಹಕ್ಕುಗಳ ಕುರಿತು ಜಾಗೃತಿ ಮೂಡಿಸುವುದು ಹಾಗೂ ಸಮಾಜದಲ್ಲಿ ಅವರನ್ನು ಗೌರವದಿಂದ ಕಾಣಬೇಕು ಎನ್ನುವ ಉದ್ದೇಶದಿಂದ ಈ ದಿನಾಚರಣೆಯನ್ನು ಆಚರಿಸಲಾಗುತ್ತದೆ. ವಿಕಲಚೇತನರಿಗಿರುವ ಹಕ್ಕುಗಳರಕ್ಷಣೆಯಾಗಬೇಕು. ವಿಕಲಚೇತನರ ಹಕ್ಕುಗಳ ಉಲ್ಲಂಘನೆಯಾಗದಂತೆ ನೋಡಿಕೊಳ್ಳಬೇಕು. ಈ ಕುರಿತು ಕಾನೂನು ಸೇವಾ ಪ್ರಾಧಿಕಾರ ವಿಕಲಚೇತನರ ಸಹಾಯವಾಣಿ ಸಂಖ್ಯೆ 15100 ಸಂಪರ್ಕಿಸಿ ಪರಿಹಾರ ಕಂಡಕೊಳ್ಳಬಹುದಾಗಿದೆ. ಸಮಾಜದಲ್ಲಿ ಇತರರ ಜೊತೆಗೆ ಅವರು ಸಮಾನವಾಗಿ ಬದುಕುವಂತೆ ನೋಡಿಕೊಳ್ಳಬೇಕು. ವಿಶೇಷ ಚೇತನರಿಗೆ ಸರ್ಕಾರದಿಂದ ಜಾರಿಯಾಗಿರುವ ಸೌಲಭ್ಯಗಳು ದೊರಕಬೇಕು ಎಂದು ತಿಳಿಸಿದರು.

ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಕಲ್ಯಾಣಾಧಿಕಾರಿ ಕೆ.ಮಹಾಂತೇಶ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಜಿಲ್ಲೆಯಲ್ಲಿ ವಿಕಲಚೇತನರಿಗಾಗಿ 21,414 ಯುಡಿಐಡಿ ಕಾರ್ಡ ವಿತರಿಸುವ ಕಾರ್ಯ ಕೈಗೊಳ್ಳಲಾಗುತ್ತಿದೆ. ವಿಕಲಚೇತನರು ಸ್ವಾವಲಂಬಿಯಾಗಿ ಬದುಕಲು ಸರ್ಕಾರದಿಂದ ಯಂತ್ರ ಚಾಲಿತ ವಾಹನವನ್ನು ನೀಡಲಾಗುತ್ತಿದೆ. ಸಂಗೀತ ಕ್ಷೇತ್ರದಲ್ಲಿ ಅಂಧರ ಬದುಕಿಗೆ ಪಂಡಿತ ಪುಟ್ಟರಾಜ ಗವಾಯಿಗಳುಸ್ವಾವಲಂಬಿ ಜೀವನ ನಡೆಸಲು ದಾರಿದೀಪವಾಗಿದ್ದಾರೆ. ಸರ್ಕಾರದಿಂದ ವಿಕಲಚೇತನರಿಗಾಗಿ ಇರುವ ವಿವಿಧ ಯೋಜನೆಗಳ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದರು.

ಇದೇ ಸಂದರ್ಭದಲ್ಲಿ ವಿಶೇಷ ಸಾಧನೆಗೈದ ವಿಕಲಚೇತನರಿಗೆ ಸನ್ಮಾನಿಸಲಾಯಿತು ಹಾಗೂ ವಿಶ್ವ ವಿಕಲಚೇತನರ ದಿನಾಚರಣೆಯ ಪ್ರಯುಕ್ತ ಹಮ್ಮಿಕೊಳ್ಳಲಾಗಿದ್ದ ಕ್ರೀಡೆ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಗದಗ ಬೆಟಗೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರಸಾಬ ಬಬರ್ಜಿ, ಡಿವೈಎಸ್ ಪಿ ಮಹಾಂತೇಶ ಸಜ್ಜನ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಪದ್ಮಾವತಿ ಜಿ, ಸಮಾಜ ಕಲ್ಯಾಣ ಉಪನಿರ್ದೇಶಕಿ ನಂದಾ ಹಣಬರಟ್ಟಿ, ಎಂ.ಆರ್.ಡಬ್ಲುö್ಯ, ವಿ.ಆರ್.ಡಬ್ಲು, ವಿಕಲಚೇತನರ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಸ್ವಯಂ ಸೇವಾ ಸಂಸ್ಥೆ ಮತ್ತು ಸಂಘಗಳು , ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣಇಲಾಖೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಅಪರ ಜಿಲ್ಲಾಧಿಕಾರಿ ಡಾ.ದುರಗೇಶ್ ಕೆ.ಆರ್ ಸ್ವಾಗತಿಸಿದರು. ಬಾಹುಬಲಿ ಜೈನರ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande