




ಬಳ್ಳಾರಿ, 03 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ಪುಸ್ತಕಗಳು ಮತ್ತು ಯಾವುದೇ ಮಾಹಿತಿಯು ತಿಳಿಯಲು ಗ್ರಂಥಾಲಯಗಳು ಬಹಳ ಉಪಯುಕ್ತವಾಗಿವೆ. ಓದುವ ಹವ್ಯಾಸವಿರುವವರು ಗ್ರಂಥಾಲಯಗಳಲ್ಲಿ ಪುಸ್ತಕಗಳೊಡನೆ ಒಡನಾಟ ಹೊಂದಬೇಕು ಎಂದು ಮಹಾನಗರ ಪಾಲಿಕೆಯ ಮೇಯರ್ ಪಿ.ಗಾದೆಪ್ಪ ಅವರು ಹೇಳಿದ್ದಾರೆ.
ನಗರ ಕೇಂದ್ರ ಗ್ರಂಥಾಲಯ ಕಚೇರಿಯಲ್ಲಿ ಮಂಗಳವಾರ ಆಯೋಜಿಸಿದ್ದ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ-2025ರ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಗ್ರಂಥಾಲಯ ಪಿತಾಮಹ ಡಾ.ಎಸ್.ಆರ್.ರಂಗನಾಥನ್ ಹಾಗೂ ಸರಸ್ವತಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ, ಸಸಿಗೆ ನೀರೆರೆಯುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಅವರು ಮಾತನಾಡಿದರು.
ಹಿರಿಯ ನಾಗರಿಕರು, ಮಕ್ಕಳು, ವಿದ್ಯಾರ್ಥಿಗಳು, ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಾಗುವ ವಿದ್ಯಾರ್ಥಿಗಳು, ಗೃಹಿಣಿಯರು, ಎಲ್ಲಾ ಸಾರ್ವಜನಿಕರು ಗ್ರಂಥಾಲಯಗಳ ಸದ್ಬಳಕೆ ಮಾಡಿಕೊಳ್ಳಬೇಕು. ಗ್ರಂಥಾಲಯಕ್ಕೆ ಹೆಚ್ಚಿನ ಸೌಲಭ್ಯ ಬೇಕಾದಲ್ಲಿ ಮಹಾನಗರ ಪಾಲಿಕೆಯಿಂದ ನೀಡುವುದಾಗಿ ಎಂದು ಭರವಸೆ ನೀಡಿದರು.
ನಗರ ಕೇಂದ್ರ ಗ್ರಂಥಾಲಯದ ಮುಖ್ಯ ಗ್ರಂಥಾಲಯಾಧಿಕಾರಿ ನರಸಣ್ಣ ಅವರು ಪ್ರಾಸ್ತಾವಿಕ ಮಾತನಾಡಿ, ಬಳ್ಳಾರಿ ಜಿಲ್ಲಾ ಕೇಂದ್ರ ಗ್ರಂಥಾಲಯದಲ್ಲಿ ಡಿ.14 ರಂದು ಪುಸ್ತಕ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಪ್ರತಿಯೊಬ್ಬರೂ ಗ್ರಂಥಾಲಯದ ಸದಸ್ಯತ್ವ ನೋಂದಣಿ ಮಾಡಿಕೊಳ್ಳಬೇಕು. ಗ್ರಂಥಾಲಯದ ಮುಂಭಾಗದಲ್ಲಿ “ಪರಿಸರ ಸ್ನೇಹಿ ಗ್ರಂಥಾಲಯ” ಸ್ಥಾಪಿಸಲಾಗಿದೆ. ಕರ್ನಾಟಕದ ಸಾರ್ವಜನಿಕ ಗ್ರಂಥಾಲಯಗಳಲ್ಲಿ ಬಳ್ಳಾರಿಯಲ್ಲಿಯೇ ಮೊದಲ ಬಾರಿಗೆ ಈ ನೂತನ ಗ್ರಂಥಾಲಯ ವ್ಯವಸ್ಥೆ ನಗರ ಕೇಂದ್ರ ಗ್ರಂಥಾಲಯ ಬಳ್ಳಾರಿಯಲ್ಲಿ ಮಾಡಲಾಗಿದೆ ಇದರ ಸದುಪಯೋಗ ಎಲ್ಲರೂ ಪಡೆಯುತ್ತಿದ್ದಾರೆ ಎಂದು ತಿಳಿಸಿದರು.
ನಗರ ಗ್ರಂಥಾಲಯ ಪ್ರಾಧಿಕಾರದ ಸದಸ್ಯರು ಹಾಗೂ ನಿವೃತ್ತ ಉಪನ್ಯಾಸಕ ಎನ್.ಬಸವರಾಜ ಅವರು, ಪುಸ್ತಕ ಓದಿನ ಪ್ರಾಮುಖ್ಯತೆ ಹಾಗೂ ಓದುವ ಸಂಸ್ಕøತಿ ಬಗ್ಗೆ ತಿಳಿಸಿ, ಗ್ರಂಥಾಲಯದ ಸದುಪಯೋಗ ಪಡೆದುಕೊಳ್ಳಲು ತಿಳಿಸಿದರು.
ಮಹಾನಗರ ಪಾಲಿಕೆ ಸದಸ್ಯರು ಹಾಗೂ ನಗರ ಗ್ರಂಥಾಲಯ ಪ್ರಾಧಿಕಾರ ಸದಸ್ಯರಾದ ಬಿ.ಜಾನಕಿ ಅವರು ಮಾತನಾಡಿ, ಗ್ರಂಥಾಲಯದಲ್ಲಿ ಒಳ್ಳೆಯ ಪುಸ್ತಕಗಳಿದ್ದು, ಪ್ರತಿಯೊಬ್ಬರು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.
ಶ್ರೀಮೇಧ ಪದವಿ ಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕ ಡಾ.ಸುಮ ವೈ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿ, ಗ್ರಂಥಾಲಯಗಳಲ್ಲಿನ ಪುಸ್ತಕಗಳನ್ನು ಉಪಯೋಗಿಸಿಕೊಂಡು ಒಂದು ಲೇಖನ ಬರೆದಿದ್ದು, ಅದಕ್ಕೆ ಪ್ರಥಮ ಪ್ರಶಸ್ತಿ ಬಂದಿರುತ್ತದೆ ಎಂದು ತಿಳಿಸಿದರು.
ಜಿಲ್ಲಾ ಕೇಂದ್ರ ಗ್ರಂಥಾಲಯದ ಉಪನಿರ್ದೇಶಕರಾದ ಬಿ.ಕೆ.ಲಕ್ಷ್ಮಿಕಿರಣ್ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ನಗರ ಕೇಂದ್ರ ಗ್ರಂಥಾಲಯದ ಸದುಪಯೋಗ ಪಡೆದುಕೊಂಡು ವಿದ್ಯಾರ್ಥಿಗಳು ತಮ್ಮ ಭವ್ಯ ಭವಿಷ್ಯ ರೂಪಿಸಿಕೊಳ್ಳಲು ತಿಳಿಸಿದರು.
ಗ್ರಂಥಾಲಯದ ಸದುಪಯೋಗ ಪಡೆದು ಸಾಧನೆಗೈದ ಉತ್ತಮ ಸಾಧಕರ ಪ್ರಶಸ್ತಿ ಪಡೆದ ಸಿ.ಎನ್.ಆರ್. ಸರ್ಕಾರಿ ಪ್ರಥಮ ದರ್ಜೆ ಕಾಲೇಜುನ ಸಹಾಯಕ ಪ್ರಾಧ್ಯಾಪಕ ಶಂಕ್ರಪ್ಪ. ಎಂ., ಅವರು ಮಾತನಾಡಿ ನಗರ ಕೇಂದ್ರ ಗ್ರಂಥಾಲಯದಲ್ಲಿ ಪುಸ್ತಕಗಳನ್ನು ಓದಿ, ನಾನು ಸರ್ಕಾರಿ ನೌಕರಿಗೆ ಆಯ್ಕೆಯಾಗಿದ್ದೇನೆ. ಗ್ರಂಥಾಲಯ ಒಂದು ಆಲದಮರವಿದ್ದಂತೆ, ನಗರ ಕೇಂದ್ರ ಗ್ರಂಥಾಲಯದಲ್ಲಿ ಉದ್ಯೋಗಾಕಾಂಕ್ಷಿಗಳಿಗೆ ಒಳ್ಳೆಯ ವಾತವರಣವಿದ್ದು, ಇಲ್ಲಿನ ಅಧಿಕಾರಿ ಸಿಬ್ಬಂದಿಗಳು ಅತ್ಯುತ್ತಮ ಸಹಕಾರ ನೀಡುತ್ತಾರೆ. ಇದರ ಸದುಪಯೋಗ ಪಡೆದುಕೊಳ್ಳಿ ಎಂದರು.
ಇನ್ನೋರ್ವ ಉತ್ತಮ ಸಾಧಕ ಪ್ರಶಸ್ತಿ ಪಡೆದ ಹೊಸಪೇಟೆ ಸಹಕಾರ ಸಂಘ ಲೆಕ್ಕ ಪರಿಶೋಧಕ ಇಲಾಖೆಯ ಲೆಕ್ಕಪರಿಶೋಧಕ ಜ್ಯೋತಿ.ಹೆಚ್ ಅವರು ಮಾತನಾಡಿ, ನಗರ ಕೇಂದ್ರ ಗ್ರಂಥಾಲಯದಲ್ಲಿ ಪುಸ್ತಕಗಳನ್ನು ಓದಿ ಸರ್ಕಾರಿ ನೌಕರಿಗೆ ಆಯ್ಕೆಯಾಗಿದ್ದೇನೆ ಇಲ್ಲಿನ ವಾತಾವರಣವು ಎಲ್ಲರನ್ನು ಓದುವುದಕ್ಕೆ ಪ್ರೇರೇಪಿಸುತ್ತದೆ. ಇಲ್ಲಿನ ಅಧಿಕಾರಿ ಹಾಗೂ ಸಿಬ್ಬಂದಿ ಒಳ್ಳೆಯ ಸಹಕಾರ ನೀಡುತ್ತಾರೆ ಎಲ್ಲರೂ ಗ್ರಂಥಾಲಯದ ಉಪಯೋಗವನ್ನು ಪಡೆದುಕೊಳ್ಳಿರಿ ಎಂದು ತಿಳಿಸಿದರು.
ಸರ್ಕಾರಿ ಪದವಿ ಪೂರ್ವ (ಮಾ.ಪು) ಕಾಲೇಜಿನ ಪ್ರಾಚಾರ್ಯರ ಕೆ.ಸುಂಕಪ್ಪ ಅವರು ಮಾತನಾಡಿ. ದಿನಪತ್ರಿಕೆ, ಮ್ಯಾಗಜಿನ್ ಮತ್ತು ಪುಸ್ತಕಗಳನ್ನು ಓದಲು ಗ್ರಂಥಾಲಯದಲ್ಲಿ ಸರಿಯಾದ ವ್ಯವಸ್ಥೆ ಮಾಡಿರುತ್ತಾರೆ. ಎಲ್ಲಾ ಸಾರ್ವಜನಿಕರು, ಓದುಗರು ಪುಸ್ತಕಗಳನ್ನು ಓದುವ ಹವ್ಯಾಸ ಬೆಳಿಸಿಕೊಳ್ಳಬೇಕು ಎಂದು ತಿಳಿಸಿದರು.
ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ-2025ರ ಅಂಗವಾಗಿ ನಗರದ ವಿವಿಧ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆÀ “ವಿದ್ಯಾರ್ಥಿಗಳಿಗೆ ಸಾರ್ವಜನಿಕ ಗ್ರಂಥಾಲಯಗಳ ಉಪಯೋಗ” ಎಂಬ ವಿಷಯದ ಕುರಿತು ಪ್ರಬಂಧ ಸ್ಪರ್ಧೆ ಏರ್ಪಡಿಸಿ, ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿಯನ್ನು ವಿತರಿಸಲಾಯಿತು ಮತ್ತು ಗ್ರಂಥಾಲಯದ ಉತ್ತಮ ಓದುಗರಲ್ಲಿ ಇಬ್ಬರಿಗೆ ಉತ್ತಮ ಓದುಗರು ಪ್ರಶಸ್ತಿಯನ್ನು ಹಾಗೂ ಗ್ರಂಥಾಲಯದ ಸದುಪಯೋಗ ಪಡೆದು ಸಾಧನೆ ಮಾಡಿದ ಇಬ್ಬರಿಗೆ ಸಾಧನೆಗೈದ ಉತ್ತಮ ಸಾಧಕರು ಪ್ರಶಸ್ತಿಗಳನ್ನು ವಿತರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಸದಸ್ಯರಾದ ಕವಿತ ಹೊನ್ನಪ್ಪ, ಗ್ರಂಥಾಲಯ ಸಹಾಯಕ ಸಿದ್ದಪ್ಪ ಕೆ., ಗ್ರಂಥಾಲಯ ಸಹಾಯಕ ಸಂತೋಷ್ ಕುಮಾರ್.ಎಸ್, ಸಹಾಯಕ ಗ್ರಂಥಪಾಲಕ ಎಸ್.ಟಿ.ಪ್ರಭಾಕರ್, ಡೊಳ್ಳಿನ ಮಹೇಂದ್ರ, ಮಜ್ಜಿಗಿ ವೀರೇಶ್, ಕೆ.ಸುನಿತ, ಪುಷ್ಪಲತ ಹೆಚ್. ಇನ್ನಿತರರು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್