ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಎನ್.ಡಿ.ಆರ್.ಎಫ್‌ನಿಂದ ಅವಗಡಗಳ ಅಣುಕು ಪ್ರದರ್ಶನ
ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಎನ್.ಡಿ.ಆರ್.ಎಫ್‌ನಿಂದ ಅವಗಡಗಳ ಅಣುಕು ಪ್ರದರ್ಶನ
ಕೋಲಾರ ಜಿಲ್ಲಾಧಿಕಾರಿಗಳ ಕಛೇರಿಯ ಆವರಣದಲ್ಲಿ ಎನ್.ಡಿ.ಆರ್.ಎಫ್. ಘಟಕದಿಂದ ಅವಘಡಗಳ ಅಣುಕು ಪ್ರದರ್ಶನ ನೀಡಲಾಯಿತು.


ಕೋಲಾರ, ೨೩ ಡಿಸೆಂಬರ್ (ಹಿ.ಸ) :

ಆ್ಯಂಕರ್ : ಜಿಲ್ಲಾಡಳಿತ, ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಹಾಗೂ ಬೆಂಗಳೂರಿನ ಎನ್.ಡಿ.ಆರ್.ಎಫ್ ೧೦ನೇ ಬೆಟಾಲಿಯನ್ ಪ್ರಾದೇಶಿಕ ಪ್ರತಿಕ್ರಿಯೆ ಕೇಂದ್ರದ ಸಂಯುಕ್ತಾಶ್ರಯದಲ್ಲಿ ಇಂದು ಕೋಲಾರ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಕಟ್ಟಡ ಕುಸಿತ ಹಾಗೂ ಬೆಂಕಿ ಅವಗಢ ಸನ್ನಿವೇಶವನ್ನು ಎದುರಿಸುವ ಕುರಿತು ರೋಚಕ ತುರ್ತು ಪರಿಸ್ಥಿತಿ ಅಣುಕು ಪ್ರದರ್ಶನ ನಡೆಯಿತು.

ಜಿಲ್ಲಾಧಿಕಾರಿಗಳಾದ ಡಾ. ಎಂ. ಆರ್. ರವಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಬಿ.ನಿಖಿಲ್ ಅವರ ನೇತೃತ್ವದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಎನ್.ಡಿ.ಆರ್.ಎಫ್ ಅಧಿಕಾರಿಗಳು, ಸಿಬ್ಬಂದಿಗಳು, ಜಿಲ್ಲಾಧಿಕಾರಿಗಳ ಕಚೇರಿ ಸಿಬ್ಬಂದಿ ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.

ಬೆಳಿಗ್ಗೆ ೧೦:೩೦ ಗಂಟೆಗೆ ಜಿಲ್ಲಾಧಿಕಾರಿಗಳ ಕಚೇರಿ ಕಟ್ಟಡವು ರಚನಾತ್ಮಕ ವೈಫಲ್ಯದಿಂದ ಕುಸಿದಿದೆ ಎಂಬ ಕಲ್ಪಿತ ಸನ್ನಿವೇಶದೊಂದಿಗೆ ಕಾರ್ಯಾಚರಣೆ ಆರಂಭವಾಯಿತು. ಕಟ್ಟಡದ ಅವಶೇಷಗಳ ಅಡಿಯಲ್ಲಿ ಅನೇಕ ಜನರು ಸಿಲುಕಿದ್ದಾರೆ ಎಂಬ ಮಾಹಿತಿ ದೊರೆತ ತಕ್ಷಣ ರಕ್ಷಣಾ ಪಡೆಗಳು ಕಾರ್ಯಪ್ರವೃತ್ತವಾದವು.

ಬೆಳಿಗ್ಗೆ ೧೦:೪೦ಕ್ಕೆ ಅಗ್ನಿಶಾಮಕ ದಳ, ಪೊಲೀಸ್ ಮತ್ತು ಆಂಬ್ಯುಲೆನ್ಸ್ ತಂಡಗಳು ಸ್ಥಳಕ್ಕೆ ಆಗಮಿಸಿ ರಕ್ಷಣಾ ಕಾರ್ಯದ ಪ್ರಾಥಮಿಕ ಮೌಲ್ಯಮಾಪನ ಮಾಡಿದವು. ಪರಿಸ್ಥಿತಿ ಗಂಭೀರವಾಗಿದ್ದರಿ0ದ ಎನ್.ಡಿ.ಆರ್.ಎಫ್ ತಂಡಕ್ಕೆ ಕರೆ ನೀಡಲಾಯಿತು.

ಬೆಳಿಗ್ಗೆ ೧೦:೫೦ಕ್ಕೆ ಸ್ಥಳಕ್ಕೆ ಬಂದ ತಂಡವು ಅತ್ಯಾಧುನಿಕ ಶೋಧನಾ ಸಾಧನಗಳೊಂದಿಗೆ ಕಾರ್ಯಾಚರಣೆಯ ನೇತೃತ್ವ ವಹಿಸಿಕೊಂಡಿತು. ಅವಶೇಷಗಳನ್ನು ಕತ್ತರಿಸುವ 'ಕಟಿಂಗ್ ತಂಡ' ಮತ್ತು ಕಟ್ಟಡದ ಸ್ಥಿರತೆ ಪರಿಶೀಲಿಸುವ 'ತಾಂತ್ರಿಕ ತಂಡಗಳು' ಸುರಕ್ಷಿತ ಮಾರ್ಗಗಳನ್ನು ನಿರ್ಮಿಸಿ ಗಾಯಾಳುಗಳನ್ನು ಹೊರತಂದವು.

ಕಾರ್ಯಾಚರಣೆಯನ್ನು ವ್ಯವಸ್ಥಿತವಾಗಿ ನಡೆಸಲು ಆವರಣದಲ್ಲಿ ವಿಶೇಷ ಘಟಕಗಳನ್ನು ಸ್ಥಾಪಿಸಲಾಗಿತ್ತು:

ಅಧಿಕಾರಿಗಳು ರಕ್ಷಣಾ ಕಾರ್ಯವನ್ನು ನಿರ್ದೇಶಿಸಲು ತಾತ್ಕಾಲಿಕ ಕಚೇರಿ. ಸ್ಯಾಟಲೈಟ್ ಫೋನ್ ಮತ್ತು ವಾಕಿ-ಟಾಕಿಗಳ ಮೂಲಕ ಮಾಹಿತಿ ವಿನಿಮಯ. ಗಾಯಾಳುಗಳಿಗೆ ತಕ್ಷಣದ ಚಿಕಿತ್ಸೆ ನೀಡಲು ವೈದ್ಯರು ಮತ್ತು ಪ್ಯಾರಾಮೆಡಿಕಲ್ ಸಿಬ್ಬಂದಿಯ ತಂಡಗಳನ್ನು ಸಣ್ಣದ್ದವಾಗಿರಿಸಲಾಗಿತ್ತು. ವಿಪತ್ತು ಸಂಭವಿಸಿದಾಗ ಇಲಾಖೆಗಳ ಪ್ರತಿಕ್ರಿಯೆ ಸಮಯವನ್ನು ಅಳೆಯುವುದು ಮತ್ತು ಸಂಪನ್ಮೂಲಗಳ ಲಭ್ಯತೆಯನ್ನು ಪರಿಶೀಲಿಸುವುದು ಈ ಪ್ರದರ್ಶನದ ಮುಖ್ಯ ಗುರಿಯಾಗಿತ್ತು. ಅಲ್ಲದೆ, ಇಲಾಖೆಗಳ ನಡುವಿನ ಸಮನ್ವಯತೆಯನ್ನು ಸುಧಾರಿಸಿ ವಿಪತ್ತಿನ ಸಮಯದಲ್ಲಿ ಜೀವಹಾನಿಯನ್ನು ತಡೆಗಟ್ಟುವ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಯಿತು.

ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿಗಳಾದ ಮಂಗಳ, ಎಸ್.ಡಿ.ಆರ್.ಎಫ್ ಕಮಾಂಡರ್, ಪೊಲೀಸ್, ಕಂದಾಯ ಇಲಾಖೆ, ಗೃಹರಕ್ಷಕ ದಳ ಅಧಿಕಾರಿಗಳು, ಸಿಬ್ಬಂದಿ ವರ್ಗ, ನಾಗರಿಕ ರಕ್ಷಣೆ, ಸ್ವಯಂಸೇವಕರು ಮತ್ತು ಎನ್.ಸಿ.ಸಿ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ಚಿತ್ರ : ಕೋಲಾರ ಜಿಲ್ಲಾಧಿಕಾರಿಗಳ ಕಚೇರಿಯ ಆವರಣದಲ್ಲಿ ಎನ್.ಡಿ.ಆರ್.ಎಫ್. ಘಟಕದಿಂದ ಅವಘಡಗಳ ಅಣುಕು ಪ್ರದರ್ಶನ ನೀಡಲಾಯಿತು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande