

ಹೊಸಪೇಟೆ, 23 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ (ಕೋಡಿಹಳ್ಳಿ ಚಂದ್ರಶೇಖರ್ ಬಣ)ಯ ಆಶ್ರಯದಲ್ಲಿ ರೈತ ಮುಖಂಡ ಚೌಧರಿ ಚರಣ್‍ಸಿಂಗ್ ಅವರು ಹುಟ್ಟಿದ ದಿನದಂದು ರೈತರ ದಿನಾಚರಣೆ ಅಂಗವಾಗಿ ಗಾಂಧಿ ಚೌಕ್‍ನಲ್ಲಿ ರೈತರೊಂದಿಗೆ ಮಂಗಳವಾರ ಆಚರಿಸಲಾಯಿತು.
ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷರಾದ ಟಿ. ನಾಗರಾಜ್ ಅವರು, ಯಾವುದೇ ಸರ್ಕಾರ ಅಧಿಕಾರಕ್ಕೆ ಬಂದಲ್ಲಿ ರೈತರಿಗೆ ಅನಾನುಕೂಲಗಳೇ ಹೆಚ್ಚು. ರೈತರ ಪರವಾಗಿ ನಿಷ್ಠೆಯಿಂದ ಕೆಲಸ ಮಾಡುವುದು ಬಹಳಷ್ಟು ಕಡಿಮೆ. ಆದ್ದರಿಂದ ಮುಂದಿನ 2028ರ ಚುನಾವಣೆಯಲ್ಲಿ ರೈತರೇ ಅಧಿಕಾರಕ್ಕೆ ಬಂದಲ್ಲಿ ರೈತರಿಗೆ ಆಗುವ ತೊಂದರೆಗಳನ್ನು ತಪ್ಪಿಸಬಹುದು ಎಂದರು.
ಸಕ್ಕರೆ ಕಾರ್ಖಾನೆಯು 8-9 ವರ್ಷಗಳಿಂದ ಮುಚ್ಚಿದೆ. ಶಾಸಕರಿಗೂ, ಸಚಿವರಿಗೂ ಮತ್ತು ಮುಖ್ಯಮಂತ್ರಿಯವರಿಗೂ ಬಹಳಷ್ಟು ಬಾರಿ ಮನವಿ ಪತ್ರ ಸಲ್ಲಿಸಿದರೂ ಯಾವುದೇ ಉಪಯೋಗವಾಗಿಲ್ಲ. ಸುಮಾರು 120 ರಿಂದ 180 ಕಿ.ಮೀ ದೂರದವರೆಗೆ ಕಬ್ಬು ಸಾಗಾಟ ಮಾಡಲಾಗುತ್ತಿದೆ. ಈ ಕುರಿತು ಸರ್ಕಾರ ತಕ್ಷಣವೇ ಕ್ರಮಕೈಗೊಳ್ಳಬೇಕು ಎಂದರು.
ಕರ್ನಾಟಕ ರಾಜ್ಯ ರೈತ ಸಂಘದ ತಾಲೂಕು ಅಧ್ಯಕ್ಷರಾದ ಸಣ್ಣಕ್ಕಿ ರುದ್ರಪ್ಪ ಅವರು, ಚೌದರಿ ಚರಣ್‍ಸಿಂಗ್ 5ನೇ ಪ್ರಧಾನ ಮಂತ್ರಿಯಾಗಿ ರೈತರ ಪರವಾಗಿ ಅನೇಕ ರೀತಿಯ ಸೌಕರ್ಯಗಳನ್ನು ಕಲ್ಪಿಸಿದ್ದರು. ಮತ್ತು ಕೃಷಿಯಲ್ಲಿ ತುಂಬಾ ಬದಲಾವಣೆ ತರುವಲ್ಲಿ ಹೆಗ್ಗಳಿಕೆಗೆ ಪಾತ್ರರಾಗಿದ್ದು, ಕೃಷಿ ಜಮೀನ್ದಾರ್ ಪದ್ಧತಿ ಮತ್ತು ಜೀತದಾಳು ಪದ್ಧತಿಯನ್ನು ನಿವಾರಿಸುವಲ್ಲಿ ಶ್ರಮಿಸಿದ್ದರು ಎಂದರು.
ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಕಾರ್ಯಧ್ಯಕ್ಷರಾದ ಎಂ. ಜಡಿಯಪ್ಪ ಅವರು, ತಾಲೂಕು ಪಂಚಾಯಿತಿಯಲ್ಲಿ ಬರುವಂತಹ ರೈತರಿಗೆ ಸರ್ಕಾರಿ ಸೌಲಭ್ಯಗಳ ಯಾವುದೇ ಮಾಹಿತಿ ಇಲ್ಲದೇ ಕೊರಗುತ್ತಿದ್ದಾರೆ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಅಥವಾ ಪಿ.ಡಿ.ಓ. ಅಧಿಕಾರಿಗಳು ರೈತರಿಗೆ ಮಾಹಿತಿ ನೀಡಬೇಕು ಮತ್ತು ತೋಟಗಾರಿಕೆ ಇಲಾಖೆಯಲ್ಲಿ ಬರುವಂತಹ ಸರ್ಕಾರದ ಸೌಲತ್ತುಗಳನ್ನು ರೈತರಿಗೆ ಸಮಪರ್ಕಕವಾಗಿ ನೀಡಬೇಕು ಎಂದು ಮಾತನಾಡಿದರು.
ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಉಪಾಧ್ಯಕ್ಷರಾದ ಖಾಜಾ ನಿಯಾಜ್, ಜಹಿರುದ್ದೀನ್, ಪದಾಧಿಕಾರಿಗಳಾದ ಟಿ. ನಾಗರಾಜ, ಸಣ್ಣಕ್ಕಿ ರುದ್ರಪ್ಪ, ಆರ್.ಆರ್. ತಾಯಪ್ಪ, ವಿ. ಗಾಳೆಪ್ಪ, ಅಂಕ್ಲೇಶ್, ಬಸವರಾಜ, ಸುರೇಶ, ವೀರೇಶ್, ರಾಮಾಂಜಿನಿ, ಪಿ.ಕೆ.ಹಳ್ಳಿ ರಾಜಶೇಖರ, ಭುವನಹಳ್ಳಿ ಗೋವಿಂದಪ್ಪ, ಮತ್ತು ಅಧಿಕಾರಿಗಳಾದ ದಯಾನಂದ ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್