
ಬೆಂಗಳೂರು, 20 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ಹಿರಿಯ ಕಾಂಗ್ರೆಸ್ ನಾಯಕ ಹಾಗೂ ಮಾಜಿ ಸಚಿವ ಕೆ.ಎನ್. ರಾಜಣ್ಣ ಅವರು ತಮ್ಮ ಹಾಗೂ ಕುಟುಂಬ ಸದಸ್ಯರ ಮೇಲೆ ಹನಿ ಟ್ರ್ಯಾಪ್ ಪ್ರಯತ್ನ ನಡೆದಿದೆ ಎಂದು ವಿಧಾನ ಸಭೆಯ ಒಳಗೇ ಆರೋಪಿಸಿ ತನಿಖೆಗೆ ಆಗ್ರಹಿಸಿದ ಬೆನ್ನಲ್ಲೇ, ಇದೀಗ ಮತ್ತೊಬ್ಬ ಕಾಂಗ್ರೆಸ್ ಸಚಿವ ತಮ್ಮ ಹೆಸರಿಗೆ ಮಸಿ ಬಳಿಯಲು ಸ್ವಪಕ್ಷದವರಿಂದಲೇ ಷಡ್ಯಂತ್ರ ನಡೆಯುತ್ತಿದೆ ಎಂಬ ಅನುಮಾನ ವ್ಯಕ್ತಪಡಿಸಿದ್ದಾರೆ.
ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ತಮ್ಮ ಮೇಲೆ ಬಂದಿರುವ ಭೂಕಬಳಿಕೆ ಆರೋಪಗಳ ಹಿಂದೆ ಸ್ವಪಕ್ಷದವರ ಕೈವಾಡವಿದೆ ಎಂದು ಹೇಳುವ ಮೂಲಕ ಕಾಂಗ್ರೆಸ್ ಪಕ್ಷದೊಳಗೆ ತೀವ್ರ ಆಂತರಿಕ ಕಚ್ಚಾಟ ನಡೆಯುತ್ತಿರುವುದನ್ನು ಬಹಿರಂಗಪಡಿಸಿದ್ದಾರೆ. ಇದು ಆಡಳಿತ ಪಕ್ಷದ ಒಳಗಿನ ಬಿಕ್ಕಟ್ಟಿಗೆ ಸ್ಪಷ್ಟ ಸಾಕ್ಷಿಯಾಗಿದೆ ಎಂದು ಪ್ರತಿಪಕ್ಷಗಳು ಟೀಕಿಸಿವೆ.
ಈ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಪ್ರತಿಕ್ರಿಯೆ ನೀಡಿರುವ ಪ್ರತಿಪಕ್ಷ ನಾಯಕ ಆರ್. ಅಶೋಕ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗುಂಪಿನಲ್ಲೇ ಗುರುತಿಸಿಕೊಂಡಿರುವ ನಾಯಕರೇ ಪದೇಪದೇ ಟಾರ್ಗೆಟ್ ಆಗುತ್ತಿರುವುದು ಕಾಕತಾಳೀಯವೇ ಅಥವಾ ವ್ಯವಸ್ಥಿತ ಕುತಂತ್ರವೇ ಎಂದು ಪ್ರಶ್ನಿಸಿದ್ದಾರೆ. ಈ ಎಲ್ಲಾ ಷಡ್ಯಂತ್ರಗಳ ಹಿಂದಿರುವ ‘ಮಹಾನಾಯಕ’ ಯಾರು ಎಂಬುದನ್ನು ಕಾಂಗ್ರೆಸ್ ಸ್ಪಷ್ಟಪಡಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಕಾಂಗ್ರೆಸ್ ಪಕ್ಷದ ಆಂತರಿಕ ಕಚ್ಚಾಟದ ಬಗ್ಗೆ ಬಿಜೆಪಿ ಪಕ್ಷಕ್ಕೆ ಯಾವುದೇ ಆಸಕ್ತಿಯಿಲ್ಲ ಎಂದು ಹೇಳಿರುವ ಅಶೋಕ, ಆದರೆ ಆಡಳಿತ ಪಕ್ಷವೇ ಈ ರೀತಿ ಆಂತರಿಕ ಕಲಹದಲ್ಲಿ ಮುಳುಗಿ ಆಡಳಿತ ಮತ್ತು ಅಭಿವೃದ್ಧಿಗೆ ಧಕ್ಕೆ ತರುತ್ತಿರುವಾಗ, ಅದರ ವಿರುದ್ಧ ಧ್ವನಿ ಎತ್ತುವುದು ಜವಾಬ್ದಾರಿಯುತ ಪ್ರತಿಪಕ್ಷ ನಾಯಕನಾಗಿ ನನ್ನ ಕರ್ತವ್ಯವಾಗಿದೆ ಎಂದು ಹೇಳಿದ್ದಾರೆ.
ಈ ಎಲ್ಲಾ ಬೆಳವಣಿಗೆಗಳ ಕುರಿತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹಾಗೂ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ರಾಜ್ಯದ ಜನತೆಗೆ ಸ್ಪಷ್ಟ ಉತ್ತರ ನೀಡಬೇಕು ಎಂದು ಆರ್. ಅಶೋಕ ಒತ್ತಾಯಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa