


ಬಳ್ಳಾರಿ, 20 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ವಿದ್ಯಾರ್ಥಿಗಳು ಸುತ್ತಮುತ್ತಲಿನ ಪರಿಸರವನ್ನು ರಕ್ಷಿಸಿ ಉತ್ತಮ ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಪ್ರಯತ್ನಿಸಬೇಕು ಎಂದು ಕರ್ನಾಟಕ ವಿಶ್ವವಿದ್ಯಾಲಯದ ಮಾಜಿ ಕುಲಸಚಿವರಾಗಿರುವ ಪ್ರೊ. ನಜೀರ್ ಅಹ್ಮದ್ ಅವರು ತಿಳಿಸಿದ್ದಾರೆ.
ಬಳ್ಳಾರಿಯ ಶ್ರೀಮತಿ ಸರಳಾದೇವಿ ಸತೀಶ್ಚಂದ್ರ ಅಗರವಾಲ್ ಸರ್ಕಾರಿ ಪ್ರಥಮ ದರ್ಜೆ ಸ್ವಾಯತ್ತ ಕಾಲೇಜಿನಲ್ಲಿ ನಡೆದ, `ವ್ಯವಹಾರ, ಪರಿಸರ ಮತ್ತು ಪತ್ರಿಕೋದ್ಯಮದ ಸಾಮಾಜಿಕ ನ್ಯಾಯ ಮತ್ತು ನೀತಿಶಾಸ್ತ್ರ’ ವಿಷಯವಾಗಿ ರಾಜ್ಯ ಮಟ್ಟದ ಒಂದು ದಿನದ ಕಾರ್ಯಾಗಾರದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಪರಿಸರ ಹಾನಿ ದುರ್ಬಲ ಸಮುದಾಯಗಳ ಮೇಲೆ ಅಸಮಾನವಾಗಿ ಪರಿಣಾಮ ಬೀರುತ್ತದೆ. ಮಾಲಿನ್ಯವನ್ನು ಕಡಿಮೆ ಮಾಡುವುದು, ಸುಸ್ಥಿರ ಸಂಪನ್ಮೂಲ ಬಳಕೆ, ಪರಿಸರ ಪ್ರಯೋಜನಗಳು ನ್ಯಾಯಯುತವಾಗಿ ಹಂಚಿಕೊಳ್ಳಲಾಗಿದೆಯೆ ಎಂದು ಪ್ರಭುತ್ವಗಳು ನೋಡಿಕೊಳ್ಳಬೇಕು ಎಂದು ತಿಳಿಸಿದರು.
ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ವಾಣಿಜ್ಯ ವಿಭಾಗದ ಪ್ರಾಧ್ಯಾಪಕರು ಮತ್ತು ವಿಭಾಗದ ಮುಖ್ಯಸ್ಥರಾದ ಡಾ. ಜಿಲಾನ್ ಬಾಷಾ ಅವರು, ವ್ಯವಹಾರಗಳಲ್ಲಿ ತೊಡಗಿರುವ ವ್ಯಾಪಾರಸ್ಥರು, ಉದ್ಯಮಿಗಳು ಸಾಮಾಜಿಕ ಜವಾಬ್ದಾರಿಯನ್ನು ಹೊಂದಿರುತ್ತಾರೆ. ಸಾಮಾಜಿಕ ಮತ್ತು ಪರಿಸರ ಒಳಿತು ವ್ಯವಹಾರದ ಪರಿಕಲ್ಪನೆಯಲ್ಲಿ ಅಡಗಿರುತ್ತದೆ. ಉದ್ಯಮಗಳಲ್ಲಿ ನ್ಯಾಯಯುತ ವೇತನಗಳನ್ನು ನೀಡಬೇಕು. ಪರಿಸರ ಮಾಲಿನ್ಯ ಮಾಡದಂತೆ ಪಾರದರ್ಶಕತೆ ಮತ್ತು ಪರಿಣಾಮಗಳಿಗೆ ಹೊಣೆಗಾರಿಕೆಯಾಗಬೇಕಾಗುತ್ತದೆ ಎಂದರು.
ಹಂಪಿ ಕನ್ನಡ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ. ಲೋಕೇಶ್ ಅವರು, `ಸಾಮಾಜಿಕ ನ್ಯಾಯ ಮತ್ತು ಪತ್ರಿಕೋದ್ಯಮದ ನೈತಿಕತೆ’ ವಿಷಯದ ಕುರಿತು, ಪತ್ರಕರ್ತರಾದವರು ಅಧಿಕಾರದ ಅಸಮತೋಲನವನ್ನು ಪರಿಹರಿಸಲು ಸಮಾಜದಲ್ಲಿ ನಿಷ್ಪಕ್ಷಪಾತ ವರದಿಗಾರಿಕೆ ಮಾಡಬೇಕು. ವರದಿಗಾರಿಕೆಯು ಸಾಮಾಜಿಕ ನ್ಯಾಯವನ್ನು ಎತ್ತಿಹಿಡಿಯುವ ರೀತಿಯಲ್ಲಿರಬೇಕು ಎಂದರು.
ಕಾಲೇಜಿನ ಪ್ರಾಂಶುಪಾಲ ಪ್ರಹ್ಲಾದ್ ಚೌಧರಿ ಅಧ್ಯಕ್ಷತೆ ವಹಿಸಿ, ಉದ್ಘಾಟನಾ ಭಾಷಣ ಮಾಡಿದರು. ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ಇಸ್ಮಾಯಿಲ್ ಎಂ.ಮಕಾಂದರ್ ಅವರು ಪ್ರಾಸ್ತಾವಿಕ ಭಾಷಣ ಮಾಡಿದರು.
ಇತಿಹಾಸ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ. ಕೆ.ಬಸಪ್ಪ ಅವರು ಸ್ವಾಗತಿಸಿದರು. ಡಾ. ಅಪರ್ಣಾ ಹಿರೇಮಠ ಅವರು ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್