

ಬೆಂಗಳೂರು, 02 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ಕರ್ನಾಟಕ ರಾಜ್ಯ ಕಾಂಗ್ರೆಸ್‌ನೊಳಗಿನ ಅಧಿಕಾರ ಹಂಚಿಕೆಯ ಗೊಂದಲಕ್ಕೆ ತೆರೆ ಎಳೆಯುವ ಪ್ರಯತ್ನವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತೆ ಒಂದೇ ವೇದಿಕೆಯಲ್ಲಿ ಭೇಟಿಯಾಗಿ ಒಗ್ಗಟ್ಟಿನ ಸಂದೇಶ ನೀಡಿದ್ದಾರೆ. ಶನಿವಾರ ಕಾವೇರಿ ನಿವಾಸದಲ್ಲಿ ನಡೆದ ಮೊದಲ ಉಪಹಾರ ಕೂಟದ ಮುಂದುವರಿದ ಭಾಗವಾಗಿ ಇಂದು ಡಿ.ಕೆ.ಶಿವಕುಮಾರ್ ಅವರ ಬೆಂಗಳೂರಿನ ಸದಾಶಿವನಗರ ನಿವಾಸದಲ್ಲಿ ಎರಡನೇ ಉಪಾಹಾರ ಕೂಟ ನಡೆಯಿತು.
ಉಭಯ ನಾಯಕರ ನಡುವಿನ ಸುಮಾರು ಒಂದು ಗಂಟೆಯ ಮಾತುಕತೆ ಸ್ನೇಹಪೂರ್ಣ ವಾತಾವರಣದಲ್ಲಿ ಜರುಗಿದ್ದು, ಸಿದ್ದರಾಮಯ್ಯ ನಾಟಿ ಕೋಳಿ ಸಾರು ಮತ್ತು ಇಡ್ಲಿ ಸವಿದಿದ್ದಾರೆ. ಬಳಿಕ ಜಂಟಿ ಪತ್ರಿಕಾಗೋಷ್ಠಿ ನಡೆಸಿದ ಇಬ್ಬರೂ ನಾಯಕರು ಪಕ್ಷದೊಳಗಿನ ಗೊಂದಲದ ಸುದ್ದಿಗಳಿಗೆ ಅಂತ್ಯ ಕಾಣುವ ಸೂಚನೆ ನೀಡಿದ್ದಾರೆ.
ಪಕ್ಷದ ಆಂತರಿಕ ವಿಚಾರಗಳ ಬಗ್ಗೆ ಮಾತನಾಡಿದ ಸಿದ್ದರಾಮಯ್ಯ, ಹೈಕಮಾಂಡ್ ಹೇಳಿದಂತೆ ನಾನು ಮತ್ತು ಡಿ.ಕೆ.ಶಿವಕುಮಾರ್ ನಡೆದುಕೊಳ್ಳುತ್ತೇವೆ. ನಾವು ಇಬ್ಬರೂ ಸಹೋದರರಂತೆ ಕೆಲಸ ಮಾಡುತ್ತಿದ್ದೇವೆ. ಶನಿವಾರ ನಡೆದ ಸಭೆಯಲ್ಲಿಯೂ ಇದೇ ವಿಷಯ ಚರ್ಚೆಯಾಯಿತು, ಇಂದು ಮತ್ತೆ ಅದೇ ವಿಚಾರವಾಗಿ ಚರ್ಚೆ ಮಾಡಿದ್ದೇವೆ ಎಂದು ಹೇಳಿದರು ಮುಂಬರುವ 2028 ಚುನಾವಣೆಯಲ್ಲಿ ಕೂಡಾ ಒಟ್ಟಿಗೆ ಕೆಲಸ ಮಾಡುವುದಾಗಿ ತಿಳಿಸಿದರು.
ಅಧಿಕಾರ ಹಂಚಿಕೆ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ನಮ್ಮಲ್ಲಿ ಯಾವುದೇ ಗೊಂದಲವಿಲ್ಲ ಎಂದು ಸ್ಪಷ್ಟಪಡಿಸಿದ್ದು,
ಹೈಕಮಾಂಡ್ ಕರೆದರೆ ದೆಹಲಿಗೆ ಹೋಗುತ್ತೇವೆ ಎಂದರು.
ನಾಳೆ ಬುಧವಾರ ಮಂಗಳೂರಿನಲ್ಲಿ ಹಲವು ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದೇನೆ. ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಸಹ ಅಲ್ಲಿ ಹಾಜರಿರುತ್ತಾರೆ ಅವರೊಂದಿಗೆ ಮಾತುಕತೆ ನಡೆಸುತ್ತೇನೆ ಎಂದು ಮಾಹಿತಿ ನೀಡಿದರು.
ಇನ್ನು ಡಿ.ಕೆ.ಶಿವಕುಮಾರ್ ಯಾವಾಗ ಮುಖ್ಯಮಂತ್ರಿಯಾಗಲಿದ್ದಾರೆ ಎಂಬ ಪ್ರಶ್ನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹೈಕಮಾಂಡ್ ಹೇಳಿದಾಗ ಎಂದು ಉತ್ತರಿಸಿದರು.
ಇದೇ ವೇಳೆ ಮಾತನಾಡಿದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಇಂದು ನನ್ನ ನಿವಾಸಕ್ಕೆ ಮುಖ್ಯಮಂತ್ರಿ ಅವರನ್ನು ಸ್ವಾಗತಿಸುವುದು ನನಗೆ ಗೌರವ. ಕರ್ನಾಟಕದ ಅಭಿವೃದ್ಧಿ ಮತ್ತು ಜನರ ಕಲ್ಯಾಣಕ್ಕೆ ನಾವು ಬದ್ಧರಾಗಿದ್ದೇವೆ ಎಂದು ಹೇಳಿದರು.
ಉಭಯ ನಾಯಕರ ಈ ಉಪಾಹಾರ ಕೂಟ ರಾಜ್ಯ ಕಾಂಗ್ರೆಸ್‌ನ ಒಗ್ಗಟ್ಟು ಪ್ರದರ್ಶನಕ್ಕೆ ಮತ್ತೊಂದು ಉದಾಹರಣೆಯಾಗಿದ್ದು, ಅಧಿಕಾರ ಹಂಚಿಕೆ ವಿವಾದಕ್ಕೆ ತಾತ್ಕಾಲಿಕ ತೇಪೆ ಹಚ್ಚಿದಂತಾಗಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa