
ವಿಜಯಪುರ, 02 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ಡಿಸೆಂಬರ್ 7 ರಂದು ರವಿವಾರ ನಗರದಲ್ಲಿ ನಡೆಯಲಿರುವ ವೃಕ್ಷಥಾನ್ ಹೆರಿಟೇಜ್ ರನ್-2025 ಸೂಸೂತ್ರವಾಗಿ ನಡೆಸಬೇಕು ಮತ್ತು ಅದೇ ದಿನ ನಡೆಯಲಿರುವ ಶಿಕ್ಷಕರ ಟಿಇಟಿ ಪರೀಕ್ಷೆಯಲ್ಲಿ ಪಾಲ್ಗೋಳ್ಳುವ ಅಭ್ಯರ್ಥಿಗಳಿಗೆ ಅನುಕೂಲವಾಗುವಂತೆ ಸಕಲ ರೀತಿಯಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಎಸ್ಪಿ ಲಕ್ಷ್ಮಣ ನಿಂಬರಗಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಇಂದು ಮಂಗಳವಾರ ತಮ್ಮ ಕಚೇರಿಯಲ್ಲಿ ಅಧಿಕಾರಿಗಳು ಮತ್ತು ವೃಕ್ಷಥಾನ್ ಹೇರಿಟೆಜ್ ರನ್ ಕೋರ್ ಕಮಿಟಿ ಸದಸ್ಯರೊಂದಿಗೆ ನಡೆದ ಸಭೆಯಲ್ಲಿ ಅವರು ಮಾತನಾಡಿದರು.
ಹೆರಿಟೇಜ್ ರನ್ ನಡೆಯುವ ಎರಡು ದಿನಗಳ ಮುಂಚೆ ಅಂದರೆ ಶುಕ್ರವಾರ ಮತ್ತು ಶನಿವಾರ ನಗರದ ಡಾ. ಬಿ. ಆರ್. ಅಂಬೇಡ್ಕರ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯುವ ನಾನಾ ಪೂರ್ವಭಾವಿ ಕಾರ್ಯಕ್ರಮಗಳು ಮತ್ತು ನಡೆಯಲಿವೆ. ಅಲ್ಲದೇ, ಡಿಸೆಂಬರ್ 7 ರಂದು ರವಿವಾರ ಓಟ ನಡೆಯಲಿವೆ ಎಂದು ರನ್ ಸಮಿತಿ ಪದಾಧಿಕಾರಿಗಳು ಎಸ್ಪಿಯವರ ಗಮನಕ್ಕೆ ತಂದರು.
ಈ ಸಂದರ್ಭದಲ್ಲಿ ಮಾತನಾಡಿದ ಎಸ್ಪಿಯವರು, ಪೂರ್ವಭಾವಿ ಕಾರ್ಯಕ್ರಮಗಳು ನಡೆಯುವ ದಿನ ಸಂಚಾರ ಪೂರ್ವಭಾವಿ ಕಾರ್ಯಕ್ರಮಗಳ ಎರಡು ದಿನಗಳಂದು ಪೊಲೀಸರು ಭದ್ರತೆ ಒದಗಿಸಬೇಕು. ಯಾವುದೇ ರೀತಿಯಲ್ಲಿ ಗೊಂದಲ ಉಂಟಾಗದಂತೆ ಎಚ್ಚರಿಕೆ ವಹಿಸಬೇಕು ಎಂದು ಹೇಳಿದರು.
ಡಿಸೆಂಬರ್ 7 ರಂದು ರವಿವಾರ ಹೆರಿಟೇಜ್ ರನ್ ನಡೆಯಲಿದ್ದು, ಶನಿವಾರದಿಂದಲೇ ವಾಹನ ಸಂಚಾರಗಳ ಮಾರ್ಗ ಬದಲಾವಣೆ, ಝೀರೋ ಟ್ರಾಫಿಕ್ ಕುರಿತು ಸಭೆ ನಡೆಸಿ ಪರ್ಯಾಯ ಮಾರ್ಗಗಳ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡಬೇಕು. ಸಂಚಾರಿ ಪೊಲೀಸರ ಜೊತೆಯಲ್ಲಿಯೇ ಸಿವಿಲ್ ಪೊಲೀಸರೂ ಕೂಡ ಕಟ್ಟೆಚ್ಚರ ವಹಿಸಬೇಕು. 20 ಸಾವಿರಕ್ಕೂ ಹೆಚ್ಚು ಓಟಗಾರರು ಮತ್ತು ಸಾರ್ವಜನಿಕರು ಸೇರುವುದರಿಂದ ಜನದಟ್ಟಣೆ ನಿಯಂತ್ರಣಕ್ಕೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು. ಬೆಳಿಗ್ಗೆ 6 ಗಂಟೆಯಿಂದಲೇ ನಾನಾ ವಿಭಾಗಗಳ ಓಟಗಳು ಪ್ರಾರಂಭವಾಗಲಿವೆ. 21 ಕಿ. ಮೀ, 10 ಕಿ. ಮೀ ಹಾಗೂ 5 ಕಿ. ಮೀ ಓಟದಲ್ಲಿ ಪಾಲ್ಗೋಳ್ಳುವ ಕ್ರೀಡಾಪಟುಗಳು ಓಡುವ ಮಾರ್ಗ ಝೀರೋ ಟ್ರಾಫಿಕ್ ವ್ಯವಸ್ಥೆ ಮಾಡಬೇಕು. ಆ್ಯಂಬುಲನ್ಸ್ ಸೇರಿದಂತೆ ಅತೀ ತುರ್ತು ಸಂದರ್ಭದಲ್ಲಿ ಯಾವುದೇ ರೀತಿಯಲ್ಲಿ ತೊಡಕು ಆಗದಂತೆ ಈಗಲೇ ಎಸ್ಓಪಿ(ಸ್ಚಾಂಡರ್ಡ್ ಆಪರೇಶನ್ ಪ್ರೊಸೀಜರ್) ಪ್ರಕಾರ ಎಲ್ಲ ಮುಂಜಾಗೃತೆ ವಹಿಸಬೇಕು. ಜೊತೆಗೆ ಟಿಇಟಿ ಪರೀಕ್ಷಾರ್ಥಿಗಳಿಗೆ ತೊಂದರೆ ಆಗದಂತೆ ನೋಡಿಕೊಳ್ಳಬೇಕು. ಅಗತ್ಯವಿರುವ ಕಡೆ ಪೊಲೀಸ್ ವಾಹನಗಳಲ್ಲಿ ಅವರನ್ನು ಪರೀಕ್ಷೆ ಕೇಂದ್ರಗಳಿಗೆ ತಲುಪಿಸಬೇಕು. ವಾಹನಗಳ ಪಾರ್ಕಿಂಗ್(ನಿಲುಗಡೆ) ಸ್ಥಳಗಳನ್ನು ಗುರುತಿಸಿ ನಾಲ್ಕೈದು ದಿನಗಳಲ್ಲಿ ಎಲ್ಲ ಸಿದ್ಧತೆಗಳನ್ನು ಪೂರ್ಣಗೊಳಿಸಬೇಕು ಎಂದು ಎಸ್ಪಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಮಹಾನಗರ ಪಾಲಿಕೆ ಆಯುಕ್ತ ವಿಜಯಕುಮಾರ ಮೆಕ್ಕಳಕಿ ಮಾತನಾಡಿ, ಈಗಾಗಲೇ ನಗರದಲ್ಲಿ ರಸ್ತೆಗುಂಡಿಗಳನ್ನು ಮುಚ್ಚಲಾಗಿದೆ. ಸ್ವಚ್ಛತೆ ಮತ್ತು ನೈರ್ಮಲ್ಯತೆಗೆ ಆದ್ಯತೆ ನೀಡಲಾಗಿದೆ. ಈಗಾಗಲೇ ಕ್ರೀಡಾಪಟುಗಳು ಓಡುವ ಮಾರ್ಗಗಳನ್ನು ಪರಿಶೀಲಿಸಲಾಗಿದೆ ಎಂದು ತಿಳಿಸಿದರು.
ಓಟ ಪ್ರಾರಂಭ ಮತ್ತು ಮುಕ್ತಾಯವಾಗುವ ಮಾರ್ಗಗಳು, ಸಾಂಸ್ಕೃತಿಕ ತಂಡಗಳು ಮತ್ತು ಹೈಡ್ರೇಶನ್ ತಂಡಗಳು ಕಾರ್ಯ ನಿರ್ವಹಿಸುವ 21 ಸ್ಥಳಗಳು, ಅಲ್ಲದೇ, ಮುಖ್ಯ ವೇದಿಕೆಯಲ್ಲಿ ನಡೆಯುವ ಕಾರ್ಯಕ್ರಮಗಳು, ಓಟಗಾರರು ಮೆಡಲ್ ಸ್ವೀಕರಿಸು ಸ್ಥಳ, ಪ್ರಮುಖ ಗಣ್ಯರು, ಗಣ್ಯರು ಹಾಗೂ ಸಾರ್ವಜನಿಕರು ಆಸೀನರಾಗುವ ಸ್ಥಳ, ಫಿಜಿಯೋಥೆರಪಿ ಕೇಂದ್ರಗಳ ಕುರಿತು ರನ್ ಸಮಿತಿ ಪದಾಧಿಕಾರಿಗಳು ಮಾಹಿತಿ ನೀಡಿದರು.
ಈ ಸಭೆಯಲ್ಲಿ ಹೆಚ್ಚುವರಿ ಎಸ್ಪಿ ರಾಮನಗೌಡ ಹಟ್ಟಿ, ಡಿವೈಎಸ್ಪಿ ಡಾ ಬಸವರಾಜ ಯಲಿಗಾರ, ವಿಜಯಪುರ ಸೈಕ್ಲಿಂಗ್ ಗ್ರುಪ್ ಅಧ್ಯಕ್ಷ ಡಾ. ಮಹಾಂತೇಶ ಬಿರಾದಾರ, ವೃಕ್ಷಥಾನ್ ಹೆರಿಟೇಜ್ ಕೋರ್ ಕಮಿಟಿಯ ಸಂಚಾಲಕ ಡಾ. ಮುರುಗೇಶ ಪಟ್ಟಣಶೆಟ್ಟಿ, ಪದಾಧಿಕಾರಿಗಳಾದ ವಿನಯ ಕಂಚ್ಯಾಣಿ, ಸೋಮಶೇಖರ ಸ್ವಾಮಿ, ಶಿವನಗೌಡ ಪಾಟೀಲ, ಸಂತೋಷ ಔರಸಂಗ, ಸಂದೀಪ ಮಡಗೊಂಡ, ಪೊಲೀಸ್ ಇಲಾಖೆ ಮತ್ತು ಮಹಾನಗರ ಪಾಲಿಕೆಯ ನಾನಾ ಅಧಿಕಾರಿಗಳು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / jyothi deshpande