ಸರ್ಕಾರಿ ಜಾಗ ಒತ್ತುವರಿ ತೆರವಿಗೆ ತಿಂಗಳ ಗಡುವು : ಸಚಿವ ಬಿ.ಎಸ್.ಸುರೇಶ್
ಬಳ್ಳಾರಿ, 02 ಡಿಸೆಂಬರ್ (ಹಿ.ಸ.) : ಆ್ಯಂಕರ್ : ನಗರದ ಸರ್ಕಾರಿ ಜಾಗ, ರಸ್ತೆ ಮತ್ತು ಉದ್ಯಾನಗಳ ಒತ್ತುವರಿಯನ್ನು ಒಂದು ತಿಂಗಳೊಳಗಾಗಿ ತೆರವುಗೊಳಿಸಬೇಕು ಎಂದು ನಗರಾಭಿವೃದ್ಧಿ ಮತ್ತು ನಗರ ಯೋಜನೆ ಸಚಿವ ಬಿ.ಎಸ್.ಸುರೇಶ್ ಅವರು ಇಲಾಖೆ ಅಧಿಕಾರಿಗಳಿಗೆ ತಿಳಿಸಿದ್ದಾರೆ. ಮಂಗಳವಾರ ನಗರದ ನೂತನ ಜಿಲ್ಲಾಡಳಿ
ಸರ್ಕಾರಿ ಜಾಗ ಒತ್ತುವರಿ ತೆರವಿಗೆ ತಿಂಗಳ ಗಡುವು : ಸಚಿವ ಬಿ.ಎಸ್.ಸುರೇಶ್


ಸರ್ಕಾರಿ ಜಾಗ ಒತ್ತುವರಿ ತೆರವಿಗೆ ತಿಂಗಳ ಗಡುವು : ಸಚಿವ ಬಿ.ಎಸ್.ಸುರೇಶ್


ಬಳ್ಳಾರಿ, 02 ಡಿಸೆಂಬರ್ (ಹಿ.ಸ.) :

ಆ್ಯಂಕರ್ : ನಗರದ ಸರ್ಕಾರಿ ಜಾಗ, ರಸ್ತೆ ಮತ್ತು ಉದ್ಯಾನಗಳ ಒತ್ತುವರಿಯನ್ನು ಒಂದು ತಿಂಗಳೊಳಗಾಗಿ ತೆರವುಗೊಳಿಸಬೇಕು ಎಂದು ನಗರಾಭಿವೃದ್ಧಿ ಮತ್ತು ನಗರ ಯೋಜನೆ ಸಚಿವ ಬಿ.ಎಸ್.ಸುರೇಶ್ ಅವರು ಇಲಾಖೆ ಅಧಿಕಾರಿಗಳಿಗೆ ತಿಳಿಸಿದ್ದಾರೆ.

ಮಂಗಳವಾರ ನಗರದ ನೂತನ ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಬಳ್ಳಾರಿ ಜಿಲ್ಲೆಯ ನಗರಾಭಿವೃದ್ಧಿ ಇಲಾಖೆಗೆ ಸಂಬಂಧಿಸಿದಂತೆ ಏರ್ಪಡಿಸಿದ್ದ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸರ್ಕಾರಿ ಜಾಗದ ಒತ್ತುವರಿಯಾಗಿ ಸಾರ್ವಜನಿಕರ ದೈನಂದಿನ ಚಟುವಟಿಕೆಗಳಿಗೆ ತೊಂದರೆ ಆಗುತ್ತಿರುವ ಬಗ್ಗೆ ಗಮನಕ್ಕೆ ಬಂದಿದೆ ಸರ್ಕಾರಿ ಜಾಗವನ್ನು ಭೂಗಳ್ಳರಿಂದ ರಕ್ಷಿಸಿಕೊಳ್ಳಲು ಅನುವಾಗುವ ರೀತಿಯಲ್ಲಿ ನ್ಯಾಯಾಲಯಗಳಲ್ಲಿ ವಾದ ಮಂಡಿಸಲು ಸಮರ್ಥರಿರುವ ವಕೀಲರನ್ನು ನೇಮಕ ಮಾಡಿಕೊಳ್ಳಬೇಕು ಎಂದರು.

ನಗರದೆಲ್ಲೆಡೆ ನಾಗರಿಕರಿಗೆ ಶುದ್ಧ ಕುಡಿಯುವ ನೀರು ಪೂರೈಕೆಯಾಗಬೇಕು. ಕಲುಷಿತ ನೀರು ಪೂರೈಕೆ ಪ್ರಕರಣಗಳು ಕಂಡುಬಂದರೆ ಅದಕ್ಕೆ ಸಂಬಂಧಿಸಿದ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಹೊಣೆಗಾರರಾಗಿರುತ್ತಾರೆ ಎಂದು ಹೇಳಿದರು.

ತೆರಿಗೆ ಸಂಗ್ರಹ ಹೆಚ್ಚಳಕ್ಕೆ ಗಮನಹರಿಸಬೇಕು. ಅತಿ ಹೆಚ್ಚು ತೆರಿಗೆ ಬಾಕಿ ಉಳಿಸಿಕೊಂಡಿರುವ ಕಟ್ಟಡ ಮಾಲೀಕರ ವಿರುದ್ಧ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಬೇಕು, ವಾಣಿಜ್ಯ ಮತ್ತು ಕಟ್ಟಡ ಪರವಾನಗಿಯನ್ನು ತ್ವರಿತವಾಗಿ ವಿತರಣೆ ಮಾಡಬೇಕು ಎಂದು ತಿಳಿಸಿದರು.

ಮಹಾನಗರ ಪಾಲಿಕೆಯಲ್ಲಿ ಜನನ-ಮರಣ ಪ್ರಮಾಣ ಪತ್ರ ವಿತರಣೆ ಸಕಾಲದಲ್ಲಿ ನಡೆಯುತ್ತಿದೆಯೇ? ಎಂದು ಪ್ರಶ್ನಿಸಿದ ಅವರು, ಸಿಬ್ಬಂದಿ ಕೊರತೆ, ಖಾಲಿ ಇರುವ ಹುದ್ದೆಗಳ ಮಾಹಿತಿ ನೀಡಬೇಕು. ಈ ಕುರಿತು ಇಲಾಖೆಯ ಕಾರ್ಯದರ್ಶಿಯವರೊಂದಿಗೆ ಚರ್ಚಿಸಲಾಗುವುದು ಎಂದರು.

ಮುಖ್ಯಮಂತ್ರಿಯವರ ಕನಸಿನ ಯೋಜನೆಯಾದ ಬಡವರ ಹಸಿವು ನೀಗಿಸಲು ಆರಂಭಿಸಿದ ಇಂದಿರಾ ಕ್ಯಾಂಟೀನ್ ಗಳನ್ನು ಮುಚ್ಚುವಂತಿಲ್ಲ, ಯಾವುದೇ ಕ್ಯಾಂಟೀನ್ ಗಳ ಗುತ್ತಿಗೆದಾರರ ಬಿಲ್ ಪಾವತಿ ಬಾಕಿ ಇದ್ದಲ್ಲಿ ಕೂಡಲೇ ಅವುಗಳನ್ನು ಇತ್ಯರ್ಥಪಡಿಸಬೇಕು ಮತ್ತು ಕ್ಯಾಂಟೀನ್ ಗಳನ್ನು ಆರಂಭಿಸಬೇಕು ಎಂದು ಖಡಕ್ ಸೂಚನೆ ನೀಡಿದರು.

ಸಭೆಯಲ್ಲಿ ಸಂಸದ ಈ.ತುಕಾರಾಮ್, ಬಳ್ಳಾರಿ ಗ್ರಾಮೀಣ ಶಾಸಕ ಬಿ.ನಾಗೇಂದ್ರ, ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ, ಬಳ್ಳಾರಿ ಮಹಾನಗರ ಪಾಲಿಕೆ ಮೇಯರ್ ಪಿ.ಗಾದೆಪ್ಪ, ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಜೆ.ಎಸ್.ಆಂಜನೇಯುಲು, ಉಪಮೇಯರ್ ಮೊಬಿನಾ, ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್.ಕೆ ಸೇರಿದಂತೆ ಪಾಲಿಕೆ ಸದಸ್ಯರು, ಬುಡಾ ಮತ್ತು ಪಾಲಿಕೆ ಅಧಿಕಾರಿ, ಸಿಬ್ಬಂದಿ ಉಪಸ್ಥಿತರಿದ್ದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande