ಕಾಂಗ್ರೆಸ್‌ ಪ್ರಣಾಳಿಕೆ ದಹಿಸಿ ಅತಿಥಿ ಉಪನ್ಯಾಸಕರ ಆಕ್ರೋಶ
ಗದಗ, 02 ಡಿಸೆಂಬರ್ (ಹಿ.ಸ.) : ಆ್ಯಂಕರ್ : ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ನಗರದಲ್ಲಿ ಕಳೆದ ಎಂಟು ದಿನಗಳಿಂದ ನಡೆಯುತ್ತಿರುವ ಅತಿಥಿ ಉಪನ್ಯಾಸಕರ ಅನಿರ್ದಿಷ್ಟಾವಧಿ ಪ್ರತಿಭಟನೆ ಪಟ್ಟು ಸಡಿಲಿಸುವ ಲಕ್ಷಣಗಳು ಗೋಚರಿಸುತ್ತಿಲ್ಲ. ಕಾಂಗ್ರೆಸ್‌ ಪ್ರಕಟಿಸಿದ್ದ ಪ್ರಣಾಳಿಕೆ ಪಟ್ಟಿಯನ್ನು ದಹಿಸಿ ಪ್ರತ
ಫೋಟೋ


ಗದಗ, 02 ಡಿಸೆಂಬರ್ (ಹಿ.ಸ.) :

ಆ್ಯಂಕರ್ : ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ನಗರದಲ್ಲಿ ಕಳೆದ ಎಂಟು ದಿನಗಳಿಂದ ನಡೆಯುತ್ತಿರುವ ಅತಿಥಿ ಉಪನ್ಯಾಸಕರ ಅನಿರ್ದಿಷ್ಟಾವಧಿ ಪ್ರತಿಭಟನೆ ಪಟ್ಟು ಸಡಿಲಿಸುವ ಲಕ್ಷಣಗಳು ಗೋಚರಿಸುತ್ತಿಲ್ಲ. ಕಾಂಗ್ರೆಸ್‌ ಪ್ರಕಟಿಸಿದ್ದ ಪ್ರಣಾಳಿಕೆ ಪಟ್ಟಿಯನ್ನು ದಹಿಸಿ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಂಘಟನೆಯ ರಾಜ್ಯಾಧ್ಯಕ್ಷ ಡಾ.ಹನುಮಂತಗೌಡ ಕಲ್ಮನಿ, ಸುಮಾರು ಹತ್ತು-ಹದಿನೈದು ವರ್ಷಗಳಿಂದ ಕಡಿಮೆ ಗೌರವಧನಕ್ಕೆ ಸರಕಾರಿ ಪದವಿ ಕಾಲೇಜುಗಳಲ್ಲಿ ಸೇವೆ ಸಲ್ಲಿಸಿದ ಅತಿಥಿ ಉಪನ್ಯಾಸಕರು ಇಂದು ಅಕ್ಷರಶಃ ಬೀದಿಗೆ ಬೀಳುತ್ತಿದ್ದಾರೆ. ಇದಕ್ಕೆ ಸರಕಾರ ಕೈಗೊಂಡಿರುವ ಅಮಾನವೀಯ, ಅವೈಜ್ಞಾನಿಕ ನೀತಿಯೇ ಕಾರಣ ಎಂದು ಕಿಡಿ ಕಾರಿದರು.

ವಿಧಾನಸಭೆ ಚುನಾವಣೆಗೂ ಮುನ್ನ ಕಾಂಗ್ರೆಸ್‌ ತನ್ನ ಪ್ರಣಾಳಿಕೆಯಲ್ಲಿ ರಾಜ್ಯದ ಸರಕಾರಿ ಪದವಿ ಕಾಲೇಜುಗಳಲ್ಲಿ ಸೇವೆ ಸಲ್ಲಿಸುತ್ತಿರುವ ಅತಿಥಿ ಉಪನ್ಯಾಸಕರಿಗೆ ಸೇವಾ ಭದ್ರತೆ ನೀಡುವ ಭರವಸೆ ನೀಡಿತ್ತು. ಈವರೆಗೆ ಪ್ರಣಾಳಿಕೆಯ ಬಹುತೇಕ ಅಂಶಗಳ ವಿಚಾರದಲ್ಲಿ ರಾಜ್ಯದಲ್ಲಿ ಅಸ್ತಿತ್ವದಲ್ಲಿರುವ ಕಾಂಗ್ರೆಸ್‌ ಸರಕಾರ ನುಡಿದಂತೆ ನಡೆದಿದೆ. ಆದರೆ ಅತಿಥಿ ಉಪನ್ಯಾಸಕರ ಸೇವಾಭದ್ರತೆ ವಿಷಯದಲ್ಲಿ ಉದಾಸೀನಧೋರಣೆ ತಾಳಿರುವುದು ಸರಿಯಲ್ಲ ಎಂದು ದೂರಿದರು.

ಕೂಡಲೇ ಸರಕಾರ ಸೇವಾನುಭವ ಇರುವ ಅತಿಥಿ ಉಪನ್ಯಾಸಕರ ಸೇವೆಗೆ ಭದ್ರತೆ ನೀಡಬೇಕು. ಈಗ ನಡೆಯುತ್ತಿರುವ ಅತಿಥಿ ಉಪನ್ಯಾಸಕರ ಆಯ್ಕೆ ಪ್ರಕ್ರಿಯೆಯ ಕೌನ್ಸೆಲಿಂಗ್‌ನ್ನು ತಕ್ಷಣ ನಿಲ್ಲಿಸಬೇಕು. ಇಲ್ಲದಿದ್ದರೆ ಈ ಹೋರಾಟ ಮತ್ತೊಂದು ನರಗುಂದ ಬಂಡಾಯವಾಗುವ ನಿಟ್ಟಿನಲ್ಲಿ ಚಳವಳಿ ರೂಪಿಸಬೇಕಾಗುತ್ತದೆ. ಬೆಳಗಾವಿ ಅಧಿವೇಶನ ಆರಂಭ ಆಗುವುದರೊಳಗೆ ನಮ್ಮ ಬೇಡಿಕೆ ಈಡೇರಬೇಕು. ಇಲ್ಲದಿದ್ದರೆ ಬೆಳಗಾವಿಯಲ್ಲಿ ನಡೆಯಲಿರುವ ನಮ್ಮ ಹೋರಾಟ ಸರಕಾರಕ್ಕೆ ನಡುಕ ಹುಟ್ಟಿಸುವುದು ನಿಶ್ಚಿತ ಎಂದು ಎಚ್ಚರಿಕೆ ನೀಡಿದರು.

ಅತಿಥಿ ಉಪನ್ಯಾಸಕರ ಹೋರಾಟಕ್ಕೆ ಮುಂಡರಗಿ ಹೋರಾಟ ಸಮಿತಿಯ ಅಧ್ಯಕ್ಷ ಬಸವರಾಜ ದೇಸಾಯಿ, ಪಂಚಾಕ್ಷರಿ ಗವಾಯಿಗಳ ಕಾಲೇಜಿನ ಪ್ರಾಚಾರ್ಯ ಡಾ.ಆರ್.ಎಸ್. ದಂಡತಿ ಪ್ರತಿಭಟನೆಯಲ್ಲಿ ಪಾಲ್ಗೊಂಡು ಬೆಂಬಲ ಸೂಚಿಸಿದರು. ಇಂದು ನಡೆದ ಪ್ರಣಾಳಿಕೆ ದಹನ ಹೋರಾಟದಲ್ಲಿ ವಿಜಯಪುರದ ರಾಮನಗೌಡ ಕಲ್ಲಿ, ಬೆಳ್ತಂಗಡಿಯ ಸಂತೋಷಕುಮಾರ, ಧರ್ಮಸ್ಥಳದ ಗಿರೀಶ್‌ ನಾಯಕ, ಉಡುಪಿಯ ಪವನಕುಮಾರ, ಧಾರವಾಡದ ದಾನೇಶ್ವರಿ, ಶಿರೂರು, ಕುಂದಗೋಳ, ಮಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳ ಅತಿಥಿ ಉಪನ್ಯಾಸಕರು ಇದ್ದರು.

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande