ಲಕ್ಷ್ಮೇಶ್ವರ ರೈತರ ಹೋರಾಟಕ್ಕೆ ಮಣಿದ ಸರ್ಕಾರ, ಮೆಕ್ಕೆಜೋಳ ಖರೀದಿ ಕೇಂದ್ರ ಆರಂಭ, ರೈತರ ವಿಜಯೋತ್ಸವ
ಗದಗ, 02 ಡಿಸೆಂಬರ್ (ಹಿ.ಸ.) : ಆ್ಯಂಕರ್ : ಗದಗ ಜಿಲ್ಲೆ ಲಕ್ಷ್ಮೇಶ್ವರ ಪಟ್ಟಣದಲ್ಲಿ 17 ದಿನಗಳಿಂದ ಅಹೋರಾತ್ರಿ ಹೋರಾಟ ನಡೆಸುತ್ತಿದ್ದ ಅನ್ನದಾತರಿಗೆ ಕೊನೆಗೂ ಜಯ ಸಿಕ್ಕಿದೆ. ಮೆಕ್ಕೆಜೋಳ ಖರೀದಿ ಕೇಂದ್ರ ಓಪನ್ ಮಾಡುವಂತೆ ಒತ್ತಾಯಿಸಿ ರಸ್ತೆತಡೆ, ಉಪವಾಸ ಸತ್ಯಾಗ್ರಹ, ಪೊರಕೆ ಚಳುವಳಿ ಸೇರಿ ನಿರಂತರ ಒತ್ತ
ಫೋಟೋ


ಗದಗ, 02 ಡಿಸೆಂಬರ್ (ಹಿ.ಸ.) :

ಆ್ಯಂಕರ್ : ಗದಗ ಜಿಲ್ಲೆ ಲಕ್ಷ್ಮೇಶ್ವರ ಪಟ್ಟಣದಲ್ಲಿ 17 ದಿನಗಳಿಂದ ಅಹೋರಾತ್ರಿ ಹೋರಾಟ ನಡೆಸುತ್ತಿದ್ದ ಅನ್ನದಾತರಿಗೆ ಕೊನೆಗೂ ಜಯ ಸಿಕ್ಕಿದೆ. ಮೆಕ್ಕೆಜೋಳ ಖರೀದಿ ಕೇಂದ್ರ ಓಪನ್ ಮಾಡುವಂತೆ ಒತ್ತಾಯಿಸಿ ರಸ್ತೆತಡೆ, ಉಪವಾಸ ಸತ್ಯಾಗ್ರಹ, ಪೊರಕೆ ಚಳುವಳಿ ಸೇರಿ ನಿರಂತರ ಒತ್ತಡ ಹಾಕುತ್ತಿದ್ದ ರೈತರ ಹೋರಾಟಕ್ಕೆ ಸರ್ಕಾರ ಮಣಿದು, ಡಿಸೆಂಬರ್ 1ರ ರಾತ್ರಿ 10 ಗಂಟೆಗೆ ಖರೀದಿ ಕೇಂದ್ರಕ್ಕೆ ಅಧಿಕೃತ ಚಾಲನೆ ನೀಡಿದೆ.

ಡಿಸಿ ಸಿ.ಎನ್. ಶ್ರೀಧರ್ ಹೋರಾಟದ ವೇದಿಕೆಗೆ ಆಗಮಿಸಿ ರಿಬ್ಬನ್ ಕತ್ತರಿಸಿ ಖರೀದಿ ಕೇಂದ್ರವನ್ನು ಉದ್ಘಾಟಿಸಿದ ಕ್ಷಣದಲ್ಲಿ, ರೈತರು ರಣಕಹಳೆ ಊದಿ, ಘೋಷಣೆ ಕೂಗಿ ಜಯಘೋಷ ಮಾಡಿದ್ದಾರೆ. ಪಟಾಕಿ ಸಿಡಿಸಿ, ಬಾಳೆ ಗಿಡಗಳಿಂದ ವೇದಿಕೆ ಶೃಂಗಾರ ಮಾಡಿ ವಿಜಯೋತ್ಸವ ಆಚರಿಸಿದರು. ಪಟ್ಟಣದಲ್ಲಿ ಎತ್ತುಗಳ ಅಲಂಕಾರ, ಎತ್ತಿನಬಂಡಿ ಮೆರವಣಿಗೆ, ಬ್ಯಾಂಡ್ ಬಾಜಾ, ಮಠಾಧೀಶರ ನೇತೃತ್ವದ ಭವ್ಯ ಮೆರವಣಿಗೆ ಸಂಭ್ರಮಕ್ಕೆ ಇನ್ನಷ್ಟು ರಂಗು ತುಂಬಿತು.

5 ಕ್ವಿಂಟಾಲ್ ಮಿತಿ – ರೈತರ ಅಸಮಾಧಾನ

ಸರ್ಕಾರ ಒಬ್ಬ ರೈತರಿಂದ ಕೇವಲ 5 ಕ್ವಿಂಟಾಲ್ ಮಾತ್ರ ಖರೀದಿಸುವ ನಿರ್ಧಾರ ತೆಗೆದುಕೊಂಡಿರುವುದು ರೈತರ ಕೋಪಕ್ಕೆ ಕಾರಣವಾಗಿದೆ. “ಕನಿಷ್ಠ 20 ಕ್ವಿಂಟಾಲ್ ಖರೀದಿ ಮಾಡಬೇಕು; ಒಂದು ವಾರದಲ್ಲಿ ಆದೇಶ ಬದಲಾವಣೆ ಆಗದಿದ್ದರೆ ಅಧಿವೇಶನ ವೇಳೆ ಬೆಳಗಾವಿ ಚಲೋ” ಎಂದು ರೈತರ ಒಕ್ಕೂಟ ಎಚ್ಚರಿಕೆ ನೀಡಿದೆ.

ಆದರಹಳ್ಳಿ ಗವಿಮಠದ ಕುಮಾರ ಮಹಾರಾಜರು ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ವೇಳೆ, ಮಧ್ಯಾಹ್ನದಲ್ಲೇ ‘ಖರೀದಿ ಕೇಂದ್ರ ಆರಂಭ’ ಭರವಸೆ ನೀಡಿದ್ದರೂ, ಸಂಜೆಗೂ ಕ್ರಮ ಕೈಗೊಳ್ಳದ ಜಿಲ್ಲಾಡಳಿತದ ವಿರುದ್ಧ ರೈತರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಬದಾಮಿ–ಪಾಲಾ ಹೆದ್ದಾರಿ ತಡೆದು ಟಯರ್‌ಗಳಿಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಿದರು. ಶ್ರೀಗಳ ಆರೋಗ್ಯ ಹದಗೆಟ್ಟರೆ ಜಿಲ್ಲಾಧಿಕಾರಿಗಳೇ ಹೊಣೆ ಎಂಬ ಎಚ್ಚರಿಕೆಯ ಬಳಿಕ, ರಾತ್ರಿ 10ಕ್ಕೆ ಖರೀದಿ ಕೇಂದ್ರ ಆರಂಭಿಸಲಾಯಿತು.

ರಾಜ್ಯ ರೈತರಿಗೆ ಸಾರಿರುವ ಸಂದೇಶ

ಲಕ್ಷ್ಮೇಶ್ವರ ರೈತರ ಹೋರಾಟ ರಾಜ್ಯದ ಇತರ ಜಿಲ್ಲೆಗಳ ಖರೀದಿ ಕೇಂದ್ರಗಳಿಗೂ ದಾರಿ ತೋರಿಸುವಂತೆ ಮಾಡಿದೆ. ಸಾಲ, ಬೆಲೆ, ಮಾರುಕಟ್ಟೆ ಸಂಕಷ್ಟಗಳಿಂದ ನಲುಗುತ್ತಿರುವ ರೈತರಿಗೆ ಸರ್ಕಾರ ಕೊನೆಗೂ ಸ್ಪಂದಿಸಿರುವುದು ಸಂತೋಷದ ಸಂಗತಿ. ಆದರೆ 5 ಕ್ವಿಂಟಾಲ್ ಮಿತಿಯ ಹೊಸ ನಿಯಮ ಕುರಿತ ಗೊಂದಲ ಹಾಗೂ ಅಸಮಾಧಾನ ಮಾತ್ರ ಮುಂದುವರಿದಿದ್ದು, ಮುಂದಿನ ದಿನಗಳಲ್ಲಿ ರೈತರ ಮತ್ತೊಂದು ದೊಡ್ಡ ಹೋರಾಟಕ್ಕೂ ಸಾಧ್ಯತೆ ಕಂಡು ಬರುತ್ತಿದೆ.

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande