
ಗದಗ, 02 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ಕರ್ನಾಟಕ ರಾಜ್ಯದಲ್ಲಿಯೇ ಗದಗ ಜಿಲ್ಲೆಯು ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಟಾನದಲ್ಲಿ ಶೇ 99.4 ರಷ್ಟು ಗುರಿ ಸಾಧಿಸಿ ಪ್ರಥಮ ಸ್ಥಾನದಲ್ಲಿದೆ. ಈ ಸಾಧನೆಗೆ ಜಿಲ್ಲೆಯ ಗ್ಯಾರಂಟಿ ಯೋಜನೆಗಳ ಇಲಾಖಾಧಿಕಾರಿಗಳು ಹಾಗೂ ಜಿಲ್ಲಾ ಹಾಗೂ ತಾಲೂಕು ಮಟ್ಟದ ಸಮಿತಿಯ ಸದಸ್ಯರುಗಳು ಕಾರಣೀಭೂತರಾಗಿದ್ದಾರೆ ಎಂದು ಜಿಲ್ಲಾಧ್ಯಕ್ಷ ಬಿ.ಬಿ.ಅಸೂಟಿ ಅವರು ಪ್ರಶಂಶಿಸಿದರು.
ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಜರುಗಿದ ಗದಗ ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆ ಗಳ ಅನುಷ್ಟಾನ ಕುರಿತು ಸಬೆಯ ಅದ್ಯಕ್ಷತೆ ವಹಿಸಿ ಮಾತನಾಡಿದರು. ಗ್ಯಾರಂಟಿ ಅನುಷ್ಟಾನದಲ್ಲಿ ರಾಜ್ಯದಲ್ಲಿಯೇ ಪ್ರಥಮ ಸ್ಥಾನ ಹೊಂದಲು ಸಕಾಲದಲ್ಲಿ ಸೂಕ್ತ ಮಾರ್ಗದರ್ಶನವನ್ನು ಗದಗ ಜಿಲ್ಲಾ ಉಸ್ತುವಾರಿ ಸಚಿವರಾದ ಎಚ್.ಕೆ. ಪಾಟೀಲ ಅವರು ನೀಡುವ ಮೂಲಕ ಗದಗ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಪಂಚ ಗ್ಯಾರಂಟಿ ಸೇರಿದಂತೆ ಅಭಿವೃದ್ಧಿ ಕಾಮಗಾರಿಗಳಿಗೂ ಸಹ ಆದ್ಯತೆ ನೀಡುವ ಮೂಲಕ ಸಚಿವ ಎಚ್.ಕೆ.ಪಾಟೀಲ ಅವರು ಮಾರ್ಗದರ್ಶಕರಾಗಿದ್ದಾರೆ ಎಂದು ಹೇಳಿದರು.
ಜಿಲ್ಲೆಯಲ್ಲಿ ಬಿಪಿಎಲ್ ಕಾರ್ಡಗಳು ವಿವಿಧ ಕಾರಣಗಳಿಂದ ರದ್ದಾಗಿವೆ. ಕೆಲವೊಂದು ಬಿಪಿಎಲ್ ಕಾರ್ಡುಗಳು ವಿನಾಕಾರಣ ರದ್ದಾಗಿರುವ ಕುರಿತು ಸಾರ್ವಜನಿಕರಿಂದ ದೂರುಗಳು ಸಮಿತಿಯ ಗಮನಕ್ಕೆ ಬಂದಿವೆ. ಈ ಕುರಿತು ತಹಶಿಲ್ದಾರರು ಹಾಗೂ ಆಹಾರ ನಿರೀಕ್ಷಕರು ಜಂಟಿಯಾಗಿ ಸ್ಥಾನಿಕ ಪರಿಶೀಲನೆ ನಡೆಸಿ ಸೂಕ್ತ ಕ್ರಮ ವಹಿಸಬೇಕು. ಬಿಪಿಎಲ್ ಫಲಾನುಭವಿಗಳಿಗೆ ಸರ್ಕಾರದ ಸೌಲಭ್ಯಗಳನ್ನು ಒದಗಿಸಲು ಅಧಿಕಾರಿಗಳು ಶ್ರಮಿಸಬೇಕು. ಆಯಾ ತಾಲೂಕಿನಲ್ಲಿ ಬಿಪಿಎಲ್ ಕಾರ್ಡ ರದ್ದಾದ ಪಟ್ಟಿಯನ್ನು ಸಮಿತಿಯ ಗಮನಕ್ಕೆ ತರಬೇಕು ಎಂದರು.
ಸರ್ಕಾರದಿಂದ ಜಾರಿಯಾಗಿರುವ ಪಂಚ ಗ್ಯಾರಂಟಿ ಯೋಜನೆಗಳು ಬಡಜನರನ್ನು ಆರ್ಥಿಕವಾಗಿ ಸಬಲರನ್ನಾಗಿಸುವ ಉದ್ದೇಶ ಹೊಂದಿದ್ದು ಈ ಯೋಜನೆಗಳ ಅನುಷ್ಟಾನವು ಬಡಜನರ ಸೇವೆಗೆ ಒದಗಿಸಿದ ಬಹುದೊಡ್ಡ ಅವಕಾಶವಾಗಿದ್ದು ಈ ನಿಟ್ಟಿನಲ್ಲಿ ಅಧಿಕಾರಿಗಳು ವಿಶೇಷ ಆಸಕ್ತಿ ವಹಿಸಿ ಕಾರ್ಯ ನಿರ್ವಹಿಸಬೇಕು ಎಂದು ತಿಳಿಸಿದರು.
ಪ್ರಗತಿ ಪರಿಶೀಲನಾ ಸಭೆಯಲ್ಲಿ ಗೃಹ ಲಕ್ಷ್ಮೇಶ್ವರ ಹಾಗೂ ಅನ್ನಭಾಗ್ಯ ಯೋಜನೆ ಕುರಿತಂತೆ ಸವಿಸ್ತಾರವಾಗಿ ಅಧಿಕಾರಿಗಳಿಂದ ಮಾಹಿತಿ ಪಡೆದು ಇನ್ನೂ ಹೆಚ್ಚಿನ ಪ್ರಗತಿ ಸಾಧನೆಗೆ ಅಧ್ಯಕ್ಷ ಬಿ.ಬಿ.ಅಸೂಟಿ ಅವರು ಸೂಚನೆ ನೀಡಿದರು.
ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ಸರ್ಕಾರದ ಸಭೆ ಸಮಾರಂಭಗಳು ಹಾಗೂ ಜಯಂತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಾಗ ಹಾಗೂ ಆಮಂತ್ರಣ ಪತ್ರಿಕೆ ಮುದ್ರಿಸುವಾಗ ಸಂಬಂಧಿತ ಅಧಿಕಾರಿಗಳು ಕಡ್ಡಾಯವಾಗಿ ಶಿಷ್ಟಾಚಾರ ಪಾಲನೆಯಾಗುವಂತೆ ನೋಡಿಕೊಳ್ಳಬೇಕು ಎಂದು ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಪ್ರಾಧಿಕಾರದ ಅದ್ಯಕ್ಷ ಬಿ.ಬಿ.ಅಸೂಟಿ ಅವರು ಅಧಿಕಾರಿಗಳಿಗೆ ತಿಳಿಸಿದರು.
ಗದಗ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಟಾನ ಪ್ರಾಧಿಕಾರದ ಅಧ್ಯಕ್ಷ ಅಶೋಕ ಮಂದಾಲಿ ಮಾತನಾಡಿ ಜಿಲ್ಲೆಯ ಬಸ್ ನಿಲ್ದಾಣಗಳಲ್ಲಿ ಮೂಲಭೂತ ಸೌಕರ್ಯದೊಂದಿಗೆ ಮಹಿಳೆಯರಿಗೆ ಆಸನ ವ್ಯವಸ್ಥೆ ಇರುವಂತೆ ನೋಡಿಕೊಳ್ಳಬೇಕು. ಆರೋಗ್ಯಕರ ವಾತಾವರಣ ಕಾಪಾಡಲು ಸ್ವಚ್ಛತೆ ಪ್ರಮುಖ ಕಾರಣವಾಗಿರುವುದರಿಂದ ಎಲ್ಲ ಬಸ್ ನಿಲ್ದಾಣಗಳು ಸ್ವಚ್ಛವಾಗಿರುವಂತೆ ಕ್ರಮ ವಹಿಸಬೇಕು. ಗೃಹ ಜ್ಯೋತಿ ಯೋಜನೆ ಸೌಲಭ್ಯ ಅರ್ಹ ಎಲ್ಲ ಫಲಾನುಭವಿಗಳಿಗೆ ಒದಗುವಂತಾಗಬೇಕು. ಈ ನಿಟ್ಟಿನಲ್ಲಿ ಹೆಸ್ಕಾಂ ಇಲಾಖೆಯ ಅಧಿಕಾರಿಗಳು ಶ್ರದ್ಧೆಯಿಂದ ಕಾರ್ಯನಿರ್ವಹಿಸಬೇಕು ಎಂದು ನಿರ್ದೇಶನ ನೀಡಿದರು.
ಪಂಚ ಗ್ಯಾರಂಟಿ ಯೋಜನೆಯ ಸಂಬಂಧಿತ ಅಧಿಕಾರಿಗಳು ಈ ಕೆಳಗಿನಂತೆ ಸಭೆಗೆ ಮಾಹಿತಿ ಒದಗಿಸಿದರು.
ಜಿಲ್ಲೆಯಲ್ಲಿ ವಾಕರಸಾಸಂಸ್ಥೆಯಿಂದ 11-6-2023 ರಿಂದ 31-10-2025 ರವರೆಗೆ ಒಟ್ಟು 12.73 ಕೋಟಿ ಮಹಿಳಾ ಪ್ರಯಾಣಿಕರು ಪ್ರಯಾಣಿಸಿದ್ದಾರೆ. ಶಕ್ತಿ ಯೋಜನೆಯಡಿ 423.02 ಕೋಟಿ ರೂ. ಮಹಿಳಾ ಪ್ರಯಾಣಿಕರ ಆದಾಯವಾಗಿದೆ.
ಗೃಹಜ್ಯೋತಿ ಯೋಜನೆಯಡಿ 31-10-2025 ರವರೆಗೆ 274038 ಸ್ಥಾವರಗಳ ನೋಂದಣಿಯಾಗಿದ್ದು 98.49 % ರಷ್ಟು ಪ್ರಗತಿಯಾಗಿದೆ.
ಯುವನಿಧಿ ಯೋಜನೆಯಡಿ ಜನೆವರಿ 2024 ರಿಂದ ಜುಲೈ 2025 ರವರೆಗೆ 5,834 ಅರ್ಜಿ ಸ್ವೀಕೃತವಾಗಿರುತ್ತವೆ. ಅದರಲ್ಲಿ 4,879 ಅರ್ಹ ಫಲಾನುಭವಿಗಳಿಗೆ ಡಿ.ಬಿ.ಟಿ. ಮೂಲಕ ಹಣ ವರ್ಗಾವಣೆಯಾಗಿರುತ್ತವೆ. ಬಾಕಿ ಉಳಿದಿರುವ 955 ಅಭ್ಯರ್ಥಿಗಳು ಯುವನಿಧಿ ಯೋಜನೆಯ ಷರತ್ತುಗಳಿಗೆ ಹಂತ ಹಂತವಾಗಿ ಅರ್ಹರಾಗುತ್ತಾರೆ.
ಈ ಸಂದರ್ಭದಲ್ಲಿ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಪ್ರಾದಿಕಾರದ ಉಪಾಧ್ಯಕ್ಷರುಗಳಾದ ಪಿ.ಬಿ.ಅಳಗವಾಡಿ, ಹೇಮಂತಗೌಡ ಪಾಟೀಲ, ಜಿ.ಪಂ. ಉಪಕಾರ್ಯದರ್ಶಿ ಸಿ.ಆರ್.ಮುಂಡರಗಿ, ಸಮಿತಿಯ ಸದಸ್ಯರುಗಳು, ಪಂಚ ಗ್ಯಾರಂಟಿ ಯೋಜನೆಯ ಸಂಬಂಧಿತ ಅಧಿಕಾರಿಗಳು ಹಾಜರಿದ್ದರು.
ಹಿಂದೂಸ್ತಾನ್ ಸಮಾಚಾರ್ / lalita MP