
ನವದೆಹಲಿ, 02 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಚುನಾವಣಾ ಸುಧಾರಣೆಗಳ ಕುರಿತ ಚರ್ಚೆಗೆ ಸರ್ಕಾರ ಒಪ್ಪಿಕೊಂಡಿದೆ. ಲೋಕ ಸಭೆಯಲ್ಲಿ ಡಿಸೆಂಬರ್ 8, ಸೋಮವಾರ ಮಧ್ಯಾಹ್ನ 12 ಗಂಟೆಗೆ 'ವಂದೇ ಮಾತರಂ' 150ನೇ ವಾರ್ಷಿಕೋತ್ಸವದ ಕುರಿತ ಚರ್ಚೆ ನಡೆಯಲಿದ್ದು, ಡಿಸೆಂಬರ್ 9, ಮಂಗಳವಾರ ಮಧ್ಯಾಹ್ನ 12 ಗಂಟೆಯಿಂದ ಚುನಾವಣಾ ಸುಧಾರಣೆಗಳ ಕುರಿತು ಚರ್ಚೆಗೆ ಕೇಂದ್ರ ಸರಕಾರ ಸಮ್ಮತಿ ಸೂಚಿಸಿದೆ.
ಲೋಕಸಭಾಧ್ಯಕ್ಷ ಓಂ ಬಿರ್ಲಾ ಅವರ ಅಧ್ಯಕ್ಷತೆಯಲ್ಲಿ ನಡೆದ ಸರ್ವಪಕ್ಷ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ತಿಳಿಸಿದ್ದಾರೆ. ‘ವಂದೇ ಮಾತರಂ’ ಕುರಿತು ಚರ್ಚೆಯ ನಂತರದ ದಿನ ಚುನಾವಣಾ ಸುಧಾರಣೆಗಳ ವಿಚಾರಣೆ ನಡೆಯಲಿದೆ ಎಂದು ಹೇಳಿದರು.
ಮತದಾರರ ಪಟ್ಟಿ ನವೀಕರಣ ವಿವಾದದಿಂದ ಸಂಸತ್ತಿನ ಎರಡೂ ಸದನಗಳಲ್ಲಿ ಕಳೆದ ಎರಡು ದಿನಗಳಿಂದ ಗದ್ದಲ ಸೃಷ್ಟಿಯಾಗಿದ್ದು, ಇಂದು ಕೂಡ ಲೋಕ ಸಭೆಯ ಕಾರ್ಯಚಟುವಟಿಕೆ ಅನೇಕ ಬಾರಿ ಅಡ್ಡಿಪಡಿಸಲ್ಪಟ್ಟಿತು. ಎರಡೂ ಬಾರಿ ಕಲಾಪವನ್ನು ಮುಂದೂಡಿದ ಬಳಿಕ, ದಿನದ ಮಟ್ಟಿಗೆ ಸ್ಥಗಿತಗೊಳಿಸಲಾಯಿತು.
ಪ್ರಸ್ತುತ 12 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಮತದಾರರ ಪಟ್ಟಿ ನವೀಕರಣದ ಕಾರ್ಯ ನಡೆಯುತ್ತಿದೆ. ಪಶ್ಚಿಮ ಬಂಗಾಳ ಹಾಗೂ ತಮಿಳುನಾಡು ಸೇರಿದಂತೆ ಪ್ರತಿ ಪಕ್ಷ ಆಡಳಿತದ ರಾಜ್ಯಗಳು ಈ ಪ್ರಕ್ರಿಯೆಗೆ ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದು, ಸಂಸತ್ತಿನ ಕಲಾಪಗಳ ಮೇಲೂ ಇದರ ಪರಿಣಾಮ ಗೋಚರಿಸಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa