
ಕೋಲಾರ, ೦೨ ಡಿಸೆಂಬರ್(ಹಿ.ಸ) :
ಆ್ಯಂಕರ್ : ಬ್ರಿಟೀಷರ ಸೇನೆಯಲ್ಲಿದ್ದೇ ಸಾಮ್ರಾಜ್ಯಶಾಹಿ ಶಕ್ತಿಗಳ ವಿರುದ್ಧ ಹೋರಾಟ ಮಾಡುತ್ತ ಭಾರತದ ವಿಮೋಚನೆಗಾಗಿ ಬಹು ದೊಡ್ಡ ಕೊಡುಗೆ ನೀಡಿದ ಮೇಜರ್ ಜಯಪಾಲ್ ಸಿಂಗ್ ದೇಶದ ಹಲವಾರು ಹೋರಾಟಗಳಿಗೆ ಸ್ಪೂರ್ತಿಯಾಗಿದ್ದಾರೆ. ವಿಶ್ವ ಕುಂದಾಪುರರವರು ಅನುವಾದಿಸಿರುವ ವಿಮೋಚನೆಯ ಸಮರದಲ್ಲಿ ಮೇಜರ್ ಜಯಪಾಲ್ ಸಿಂಗ್ ನೆನಪುಗಳ ಕೃತಿಯಲ್ಲಿ ಹಲವಾರು ಮಹತ್ತರವಾದ ಐತಿಹಾಸಿಕ ಮತ್ತು ಸೈದ್ಯಾಂತಿಕ ಹೆಜ್ಜೆ ಗುರುತುಗಳನ್ನು ನೋಡಬಹುದಾಗಿದೆ. ಜಯಪಾಲ್ಸಿಂಗ್ರವರಿಗೆ ದೇಶದ ವಿಮೋಚನೆಯ ಬಗ್ಗೆ ಇದ್ದ ಬಧ್ದತೆಯನ್ನು ಕೃತಿಯಲ್ಲಿ ಮೆಲಕು ಹಾಕಬಹುದಾಗಿದೆ. ಕೃತಿಯನ್ನು ಹೃದಯ ಸ್ಪರ್ಶಿಯಾಗಿ ಬರೆಯಲಾಗಿದೆ.ಸುಲಿಲತವಾಗಿ ಓದಬಹುದಾಗಿದೆ ಎಂದು ಜನ ಶಕ್ತಿ ವಾರಪತ್ರಿಕೆಯ ಕಾರ್ಯನಿರತ ಸಂಪಾದಕ ಡಾ. ಎಸ್ .ವೈ.ಗುರುಶಾಂತ್ ಅಭಿಪ್ರಾಯ ಪಟ್ಟರು.
ಓದುಗ ಕೇಳುಗ- ನಮ್ಮ ನಡೆ ಆಶ್ರಯದಲ್ಲಿ ವಿಮೋಚನೆಯ ಸಮರದಲ್ಲಿ ಮೇಜರ್ ಜಯಪಾಲ್ ಸಿಂಗ್ ನೆನಪುಗಳ ಕೃತಿಯ ಬಗ್ಗೆ ಮಾತನಾಡಿದರು. ಜಯಪಾಲ್ ಸಿಂಗ್ರವರ ಹೋರಾಟದ ಹೆಜ್ಜೆ ಗುರುತುಗಳನ್ನು ಭಾವನಾತ್ಮಕವಾಗಿ ಕೃತಿಯಲ್ಲಿ ವಿವರಿಸಲಾಗಿದೆ. ಕೃತಿಯನ್ನು ಓದಿದಾಗ ಜಯಪಾಲ್ ಸಿಂಗ್ರವರಲ್ಲಿ ಕವಿ ಹೃದಯ ಇರುವುದು ಭಾಸವಾಗುತ್ತದೆ. ಹಲವಾರು ಭಾವನಾತ್ಮಕ ಮತ್ತು ಮಾನವೀಯ ಅಂಶಗಳನ್ನು ನೋಡಬಹುದಾಗಿದೆ. ದೇಶದ ವಿಮೋಚನೆ ಮತ್ತು ಕೃಷಿ ಕೂಲಿ ಕಾರ್ಮಿಕರು ಮತ್ತು ತೆಲಾಂಗಣ ಚಳವಳಿಯಲ್ಲಿ ಜಯಪಾಲ್ ಸಿಂಗ್ ವಹಿಸಿದ್ದ ಪಾತ್ರವನ್ನು ಅತ್ಯಂತ ಪರಿಣಾಮಕಾರಿಯಾಗಿ ಚಿತ್ರಿಸಲಾಗಿದೆ.
ಜಯಪಾಲ್ ಸಿಂಗ್ ದೇಶದ ವಿಮೋಚನೆಯ ಬಗ್ಗೆ ಹೋರಾಟವನ್ನು ಬ್ರಿಟೀಷರ ನೆರಳಿನಲ್ಲಿ ರೂಪಿಸಿದರು. ದೇಶದಲ್ಲಿ ಬ್ರಿಟೀಶ್ ಸಾಮ್ರಾಜ್ಯಶಾಹಿಗಳ ಬಗ್ಗೆ ಜನಾಕ್ರೋಶ ಬುಗಿಲೆದ್ದು ಬ್ರಿಟೀಷ್ ಸಾಮ್ರಾಜ್ಯದ ಬೇರುಗಳ ಅಲುಗಾಡುತ್ತಿದ್ದವು. ವಿಮೋಚನೆಯ ಚಳವಳಿಯ ಮುಂಚೂಣಿ ನಾಯಕರನ್ನು ಕೊಲ್ಲಲು ಬ್ರಿಟೀಷ್ ಸೇನೆ ಸಂಚು ರೂಪಿಸಿತ್ತು. ಸೇನೆಯಲ್ಲಿದ್ದುಕೊಂಡು ಅಪಾಯದಿಂದ ನಾಯಕರನ್ನು ಜಯಪಾಲ್ಸಿಂಗ್ ಪಾರುಮಾಡಿದ ಪ್ರಸಂಗಳನ್ನು ಕೃತಿಯಲ್ಲಿ ವಿವರಿಸಲಾಗಿದೆ.
ಜಯಪಾಲ್ ಸಿಂಗ್ ಸೇನೆಗೆ ಸೇರಲು ಹಲವು ಘಟನೆಗಳು ಪ್ರೇರಣೆಯಾಗಿದ್ದವು. ಮಹಾತ್ಮ ಗಾಂಧಿ ಆರಂಭಿಸಿದ ಉಪ್ಪಿನ ಸತ್ಯಾಗ್ರಹ ಗ್ರಾಮದಲ್ಲಿ ಎಮ್ಮೆ ಕಾಯುತ್ತಿದ್ದ ಹನ್ನೆರಡು ವರ್ಷದ ಜಯಪಾಲ್ಸಿಂಗ್ ರವರನ್ನು ಪ್ರಭಾವಿಸಿತ್ತು. ಮತ್ತೊಂದು ಘಟನೆ ಜಯಪಾಲ್ರವರ ಕುತುಹಲಕ್ಕೆ ಕಾರಣವಾಯಿತು. ಮಹಾತ್ಮ ಗಾಂಧಿಯವರ ಕರೆಯ ಮೇರೆಗೆ ಇಪ್ಪತ್ತು ಸಾವಿರ ಮಂದಿ ಬ್ರಿಟೀಷರ ವಿರುಧ್ದ ಹೋರಾಟಕ್ಕೆ ಅಣಿಯಾಗಿದ್ದರು. ಆದರೆ ಐದು ಮಂದಿ ಪೋಲೀಸರು ಇಪ್ಪತ್ತು ಸಾವಿರ ಜನರನ್ನು ಚದುರಿಸಿದರು. ಈ ಘಟನೆ ಬಹುವಾಗಿ ಅವರನ್ನು ಕಾಡಿತ್ತು. ಆನಂತರ ಅವರು ಸೇನೆಗೆ ಸೇರಲು ಮುಂದಾದರು.
ಅವರು ಸೇನೆಗೆ ಸೇರಿದಾಗ ಇಡೀ ದೇಶದಲ್ಲಿ ಬ್ರಿಟೀಷರು ದೇಶಬಿಟ್ಟು ತೊಲಗಬೇಕೆಂದು ಜನಾಕ್ರೋಶ ಬುಗಿಲೆದ್ದಿತ್ತು. ಕಾಂಗ್ರೆಸ್ ಸಂಪೂರ್ಣ ವಿಮೋಚನೆಗೆ ಒತ್ತಾಯಿಸಿತ್ತು. ಬ್ರಿಟೀಷರು ಭಾರತ ಬಿಟ್ಟುತೊಲಗಬೇಕೆಂಬುದು ಕಾಂಗ್ರೆಸ್ ಆಗ್ರಹವಾಗಿತ್ತು. ಮತ್ತೊಂದು ಕಡೆ ಸಿ.ಪಿ.ಎಂ ಪಕ್ಷದವರು ವಿಮೋಚನೆಯ ಜೊತೆಗೆ ಕೂಲಿ ಕಾರ್ಮಿಕರು ಹಾಗು ರೈತರ ಸಮಸ್ಯೆಗಳಿಗೆ ಪರಿಹಾರ ಅಗತ್ಯವಿದ್ದು ಆಂತರಿಕ ಶತೃಗಳ ಬಗ್ಗೆ ಹೋರಾಟ ಆರಂಭಿಸಿದರು. ಮತ್ತೊಂದು ಕಡೆ ಕ್ರಾಂತಿಕಾರಿಗಳು ದೇಶದ ವಿಮೋಚನೆಗಾಗಿ ತಮ್ಮದೇ ಹಾದಿಯಲ್ಲಿ ಹೋರಾಟ ನಡೆಸುತ್ತಿದ್ದರು ಎಂದು ಹೋರಾಟದ ಹೆಜ್ಜೆ ಗುರತುಗಳನ್ನು ಗುರುಶಾಂತ್ ವಿವರಿಸಿದರು.
ಬ್ರಿಟೀಷರು ಸ್ವಾತಂತ್ರ ಹೋರಾಟಗಾರರನ್ನು ಅಪಹ್ಯಾಸ ಮಾಡುತ್ತಿದ್ದರು. ಸೇನೆಯಲ್ಲಿ ಭಾರತೀಯ ಸೈನಿಕರನ್ನು ಅತ್ಯಂತ ಕ್ರೂರವಾಗಿ ನಡೆಸಿಕೊಳ್ಳುತ್ತಿದ್ದರು. ಸೇನೆಗೆ ಸೇರಿದ ಜಯಪಾಲ್ ಸಿಂಗ್ ನಾಲ್ವರ ತಂಡ ರಚಿಸಿದರು. ಸೇನೆಯಲ್ಲಿದ್ದುಕೊಂಡೆ ಬ್ರಿಟೀಷರ ವಿರುದ್ದ ಸಂಚು ರೂಪಿಸಿದರು. ಕಾಂಗ್ರೆಸ್ ಸೇರಿದಂತೆ ವಿವಿದ ರಾಜಕೀಯ ಪಕ್ಷಗಳನ್ನು ಸಂಪರ್ಕಿಸುತ್ತಿದ್ದರು. ಸೇನೆಯ ರಹಸ್ಯಗಳನ್ನು ವಿಮೋಚನೆಯ ಚಳವಳಿಯ ಮುಂಚೂಣಿ ನಾಯಕರಿಗೆ ತಲುಪಿಸುತ್ತಿದ್ದರು. ಬ್ರಿಟೀಷರು ಸೈನಿಕರ ಮೇಲೆ ನಡೆಸುತ್ತಿದ್ದ ದಬ್ಬಾಳಿಕೆಯ ವಿರುಧ್ದ ಅವರಿಗೆ ರೋಷವಿತ್ತು. ಬ್ರಿಟೀಷರ ಸೇನೆಯಲ್ಲಿ ಭಾರತಿಯರ ಪರಿಸ್ಥಿತಿ ಯಾವ ರೀತಿ ಇತ್ತು ಎಂಬುದನ್ನು ವಿವರಿಸಿದ್ದಾರೆ.
ಶಕ್ತಿಶಾಲಿ ಬ್ರಿಟೀಷರ ವಿರುಧ್ದ ಸೈನಿಕ ದಂಗೆಯ ಮೂಲಕ ದೇಶವನ್ನು ವಿಮೋಚನೆ ಮಾಡಬೇಕು ಎಂದು ಜಯಪಾಲ್ ಆಲೋಚನೆ ಮಾಡಿರಲಿಲ್ಲ. ಅದು ಅಸಾಧ್ಯವಾದ ಹೋರಾಟವಾಗಿತ್ತು. ಸೈನಿಕರ ದಂಗೆಯ ಅಪಾಯವನ್ನು ಅರಿತ ಜಯಪಾಲ್ ಸಿಂಗ್ ದೇಶದಲ್ಲಿ ಹೋರಾಟ ನಡೆಸತ್ತಿದ್ದ ನಾಯಕರೊಂದಿಗೆ ರಹಸ್ಯವಾಗಿ ಸಂಪರ್ಕ ಸಾಧಿಸಿದರು.
ಬ್ರಿಟೀಷರು ದೇಶ ಬಿಟ್ಟು ತೊಲಬೇಕು ಎಂದು ಕಾಂಗ್ರೆಸ್ ಅಧಿವೇಶನದಲ್ಲಿ ಒಕ್ಕೊರಲ ನಿರ್ಣಯ ಅಂಗೀಕರಿಸಲಾಯಿತು. ಮತ್ತೊಂದು ಕಡೆ ಭೂಮಾಲಿಕರು ಮತ್ತು ಬಂಡವಾಳಶಾಹಿಗಳು ತೊಲಗಬೇಕು. ಜೊತೆಗೆ ದೇಶದ ವಿಮೋಚನೆಯಾಗಬೇಕು ಎಂಬುದು ಸಿ.ಪಿ.ಎಂ ಪಕ್ಷದ ಆಗ್ರಹವಾಗಿತ್ತು ಎಂಬುದನ್ನು ಕೃತಿಯಲ್ಲಿ ವಿವರಿಸಲಾಗಿದೆ.
ಸೇನೆಯಲ್ಲಿ ನಡೆಯುತ್ತಿದ್ದ ಶೋಷಣೆಯಿಂದಾಗಿ ಜಯಪಾಲ್ ಸಿಂಗ್ ಬ್ರಿಟೀಷರಿಗೆ ಮುಖಾಮುಖಿಯಾದರು.ಹೊರಗಿನ ವಾತಾವರಣ ಪಕ್ವವಾಗಿರಲಿಲ್ಲ.ಇಡೀ ದೇಶದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು. ಬ್ರಿಟೀಷರು ಹೊಡೆದು ಆಳುವ ನೀತಿ ಅನುಸರಿಸುತ್ತಿದ್ದರು. ವ್ಯವಸ್ಥಿತವಾಗಿ ಮತೀಯ ಗಲಭೆಗಳನ್ನು ಸೃಷ್ಟಿ ಮಾಡಿದರು. ಮಂಚೂಣಿ ನಾಯಕರನ್ನು ಕೊಲೆ ಮಾಡಲು ಬ್ರಿಟೀಷ್ ಗುಪ್ತಚರ ಇಲಾಖೆ ರಹಸ್ಯವಾಗಿ ಸಂದೇಶವನ್ನು ಸೇನೆಗೆ ರವಾನಿಸಿತ್ತು ಎಂಬುದನ್ನು ಜಯಪಾಲ್ಸಿಂಗ್ ನಾಯಕರಿಗೆ ತಿಳಿಸಿದ್ದರು.
ಈಶಾನ್ಯ ಭಾರತಕ್ಕೆ ಬೇಟಿನೀಡಲಿದ್ದ ನೆಹರುರವರನ್ನು ಕೊಲೆ ಮಾಡಲು ಬ್ರಿಟೀಷರು ಸಂಚು ರೂಪಿಸಿದ್ದರು. ಆದರೆ ಸಂಚನ್ನು ಬಯಲು ಮಾಡಿದ ಜಯಪಾಲ್ ಸಿಂಗ್ ನೆಹರುರವರ ಹತ್ಯೆಯನ್ನು ತಪ್ಪಿಸಿದರು. ಜಯಪಾಲ್ ಸಿಂಗ್ರವರ ಚಲನವಲನಗಳ ಬಗ್ಗೆ ಅನುಮಾನಗೊಂಡು ಮಹಿಳಾ ಗೂಡಾಚಾರಿಣಿಯ ಮೂಲಕ ಕೊಲೆ ಮಾಡಲು ಬ್ರಿಟೀಷ್ ಸೇನೆ ಸಂಚು ರೂಪಿಸಿತ್ತು. ಜಯಪಾಲ್ ಸಿಂಗ್ ಸೇನೆಯಿಂದ ತಪ್ಪಿಸಿಕೊಂಡು ಭೂಗತರಾದರು. ನೆಹರುರವರಿಗೆ ಧೀರ್ಘವಾದ ಪತ್ರ ಬರೆಯುತ್ತಾರೆ. ಭೂಗತರಾದ ಜಯಪಾಲ್ ಸಿಂಗ್ ಹೋರಾಟವನ್ನು ಮುಂದುವರೆಸಿದ ಬಗ್ಗೆ ರೋಚಕವಾಗಿ ವಿವರಿಸಲಾಗಿದೆ ಎಂದು ತಿಳಿಸಿದರು.
ಆದರೆ ದೇಶಕ್ಕೆ ಬ್ರಿಟೀಷರ ದಾಸ್ಯದಿಂದ ಬಿಡುಗಡೆಯಾಗಿ ಸ್ವಾತಂತ್ರ ಬಂದ ಮೇಲೆ ಜಯಪಾಲ್ ಸಿಂಗ್ರವರನ್ನು ಬಂಧಿಸಿ ಕೊಲ್ಕತ್ತ ಜೈಲಿನಲ್ಲಿ ಇರಿಸಲಾಯಿತು. ಬ್ರಿಟೀಷರಿಗಿಂತ ನೆಹರು ಸರ್ಕಾರ ಕ್ರೂರವಾಗಿ ನಡೆಸಿಕೊಂಡಿತು. ದೇಶಕ್ಕೆ ಸ್ವಾತಂತ್ರ ಬಂದಾಗ ತೆಲಾಂಗಣ ಚಳವಳಿ ತೀವ್ರಗೊಂಡಿತ್ತು. ಹೈದರಾಬಾದ್ ನಿಜಾಮರು ಮತ್ತು ಭೂಮಾಲಿಕರ ಶೋಷಣೆಯ ವಿರುಧ್ದ ತೆಲಾಂಗಣ ಚಳವಳಿ ತೀವ್ರಗೊಂಡಿತ್ತು. ಸರ್ದಾರ್ ವಲ್ಲಭ ಭಾಯಿ ಪಟೇಲ್ ತೆಲಾಂಗಣ ಚಳವಳಿಯನ್ನು ದಮನ ಮಾಡಲು ಮುಂದಾದರು.
ಜೈಲಿನಿಂದ ತಪ್ಪಿಸಿಕೊಂಡು ಭೂಗತರಾದ ಜಯಪಾಲ್ ಸಿಂಗ್ ತೆಲಾಂಗಣ ಚಳವಳಿಯನ್ನು ಮುಂದುವರೆಸಿದರು. ದೇಶದ ವಿಮೋಚನಾ ಚಳವಳಿಯಲ್ಲಿ ಜಯಪಾಲ್ ಸಿಂಗ್ ಕಾಂಗ್ರೆಸ್ ನಾಯಕರಿಗಿಂತ ಸಿ.ಪಿ.ಎಂ ನಾಯಕರನ್ನು ಹೆಚ್ಚು ನಂಬುತ್ತಿದ್ದರು.ಜಾಟ್ ಕುಟುಂಬದಲ್ಲಿ ಜನಿಸಿದ ಜಯಪಾಲ್ ಸಿಂಗ್ ಕೊನೆಯ ತನಕ ಸಿ.ಪಿ.ಎಂನೊAದಿಗೆ ಒಡನಾಟ ಮುಂದುವರೆಸಿ ಶೋಷಿತರ ಪರ ಹೋರಾಟ ನಡೆಸಿದರು. ವಿಜಯವಾಡದಲ್ಲಿ ನಡೆದ ಸಿ.ಪಿ. ಎಂ ಸಮ್ಮೇಳನದಲ್ಲಿ ಪ್ರತಿನಿಧಿಯಾಗಿ ಭಾಗವಹಿಸಿದ್ದರು.ತಾವು ನಂಬಿದ ಸಿದ್ದಾಂತಗಳೊAದಿಗೆ ಬಧ್ದತೆಯನ್ನು ತೋರಿದರು. ಅವರೊಬ್ಬ ಪ್ರಾಮಾಣಿಕ ದೇಶ ಪ್ರೇಮಿ ಹಾಗು ಹೋರಾಟಗಾರ ಎಂಬ ಹೆಜ್ಜೆ ಗುರುತುಗಳನ್ನು ವಿಮೋಚನಾ ಹಾದಿಯಲ್ಲಿ ಜಯಪಾಲ್ ಸಿಂಗ್ ಹೆಜ್ಜೆ ಗುರುತುಗಳನ್ನು ಕೃತಿಯಲ್ಲಿ ಚಿತ್ರಿಸಲಾಗಿದೆ ಎಂದು ಡಾ.ಎಸ್.ವೈ.ಗುರುಶಾಂತ್ ಎಂದು ಮೆಲಕು ಹಾಕಿದರು.
ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಮಾತನಾಡಿ ಜಯಪಾಲ್ ಸಿಂಗ್ ಎಮ್ಮೆ ಕಾಯುವ ಕಾಯಕದಿಂದ ಬಾಲಕನಾಗಿ ದೇಶದ ಸ್ವಾತಂತ್ರ ಚಳವಳಿಯನ್ನು ಗಮನಿಸುತ್ತಾರೆ. ಆನಂತರ ಸೇನೆಗೆ ಸೇರುತ್ತಾರೆ. ಸಾಮ್ರಾಜ್ಯಶಾಹಿ ಶಕ್ತಿಗಳ ವಿರುಧ್ದ ಅವರು ನಡೆಸುತ್ತಿದ್ದ ದೃಷ್ಟಿಕೋನವೇ ಬೇರೆಯಾಗಿರುತ್ತದೆ.ನೆಹರು ಹುಟ್ಟು ಅವರ ಹೋರಾಟದ ಹಿನ್ನಲೆಯೇ ಬೇರೆಯಾಗಿತ್ತು.ಇದರಿಂದಾಗಿಯೇ ಅವರು ನೆಹರುರವರನ್ನು ಸರ್ವಾಧಿಕಾರಿ ಎಂದು ಕರೆದಿದ್ದರು ಎಂದು ತಿಳಿಸಿದರು.
ಜಯಪಾಲ್ ಸಿಂಗ್ ಎಂದೂ ಬ್ರಿಟಿಷರೊಂದಿಗೆ ರಾಜಿ ಮಾಡಿಕೊಳ್ಳಲಿಲ್ಲ. ಅವರ ದೇಶ ಭಕ್ತಿ ಹಾಗು ಬಧ್ದತೆಯನ್ನು ಎಂದಿಗೂ ಪ್ರಶ್ನಿಸಲು ಸಾಧ್ಯವಿಲ್ಲ. ಆದರೆ ದೇಶಕ್ಕೆ ಸ್ವಾತಂತ್ರ ಬಂದಮೇಲೆ ನೆಹರು ಸರ್ಕಾರ ಜಯಪಾಲ್ ಸಿಂಗ್ ರವರನ್ನು ನಡೆಸಿಕೊಂಡ ರೀತಿ ಅಕ್ಷಮ್ಯ ಅಪರಾಧ ಎಂದು ರಮೇಶ್ ಕುಮಾರ್ ವಿಷಾಧಿಸಿದರು.
ಕಾರ್ಯಕ್ರಮದಲ್ಲಿ ಪುರುಷೋತ್ತಮ್ ರಾವ್, ಹ.ಮಾ .ರಾಮಚಂದ್ರ ಜೆ.ಜೆ.ನಾಗರಾಜ್, ವಿಶ್ವಕುಂದಾಪುರ ಭಾಗಿಯಾಗಿದ್ದರು.
ಚಿತ್ರ; ಓದುಗ ಕೇಳುಗ-ನಮ್ಮ ನಡೆ ಕಾರ್ಯಕ್ರಮದಲ್ಲಿ ವಿಮೋಚನಾ ಚಳವಳಿಯಲ್ಲಿ ಮೇಜರ್ ಜಯಪಾಲ್ ಸಿಂಗ್ ನೆನಪುಗಳ ಕೃತಿ ಕುರಿತು ಜನಶಕ್ತಿ ವಾರಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕ ಡಾ.ಎಸ್. ವೈ.ಗುರುಶಾಂತ್ ಮಾತನಾಡಿದರು. ಮಾಜಿ ಸ್ಪೀಕರ್ ರಮೇಶ್ ಕುಮಾರ್ ಹಾಗೂ ಕೃತಿಯ ಬರಹಗಾರ ವಿಶ್ವಕುಂದಾಪುರ ಚಿತ್ರದಲ್ಲಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್