
ಮುಂಬಯಿ, 02 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ಕುವೈತ್‌ನಿಂದ ಹೈದರಾಬಾದ್‌ಗೆ ತೆರಳುತ್ತಿದ್ದ ಇಂಡಿಗೋ ವಿಮಾನಕ್ಕೆ ಬಾಂಬ್ ಬೆದರಿಕೆ ಸಂದೇಶ ಬಂದ ಹಿನ್ನಲೆಯಲ್ಲಿ ಮಂಗಳವಾರ ಮುಂಜಾನೆ ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಲಾಗಿದೆ. ವಿಮಾನದಲ್ಲಿದ್ದ ಎಲ್ಲಾ ಪ್ರಯಾಣಿಕರು ಸುರಕ್ಷಿತ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದೆಹಲಿಯ ವಿಮಾನ ನಿಲ್ದಾಣಕ್ಕೆ ಬಂದಿದ್ದ ಬಾಂಬ್ ಬೆದರಿಕೆ ಇಮೇಲ್‌ನಲ್ಲಿರುವ ವಿವರಗಳು ಕುವೈತ್–ಹೈದರಾಬಾದ್ ಇಂಡಿಗೋ ವಿಮಾನ ಸಂಖ್ಯೆಗೆ ಹೊಂದಿಕೆಯಾಗುತ್ತಿದ್ದುದರಿಂದ, ವಿಮಾನವನ್ನು ಮುಂಬೈಗೆ ತಿರುಗಿಸಿ ಛತ್ರಪತಿ ಶಿವಾಜಿ ಮಹಾರಾಜ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಇಳಿಸಲಾಗಿದೆ.
ವಿಮಾನ ಇಳಿದ ನಂತರ ಅದನ್ನು ವಿಶೇಷ ಪ್ರತ್ಯೇಕ ಸ್ಥಳಕ್ಕೆ ಸ್ಥಳಾಂತರಿಸಲಾಗಿದ್ದು ,ಈ ಘಟನೆಯ ಕುರಿತು ಇಂಡಿಗೋ ಏರ್‌ಲೈನ್ಸ್ ಇನ್ನೂ ಅಧಿಕೃತ ಹೇಳಿಕೆ ನೀಡಿಲ್ಲ. ಭದ್ರತಾ ಸಂಸ್ಥೆಗಳು ಇಮೇಲ್ ಮೂಲ ಹಾಗೂ ಬೆದರಿಕೆಯ ಪೂರ್ವಾಪರ ಪರಿಶೀಲಿಸುತ್ತಿವೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa