
ವಿಜಯಪುರ, 17 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ಎಸ್‌ಎಸ್‌ಎಲ್‌ಸಿ ಫಲಿತಾಂಶ ಸುಧಾರಣೆಗೆ ಮುಂದಿನ ಮೂರು ತಿಂಗಳು ಶಿಕ್ಷಕರು ಸೇರಿದಂತೆ ಎಲ್ಲರೂ ಸಮನ್ವಯದಿಂದ ಕಾರ್ಯ ನಿರ್ವಹಿಸುವಂತೆ ಕರ್ನಾಟಕ ಪ್ರೌಢಶಾಲಾ ಮಂಡಳಿ ಮತ್ತು ಮೌಲ್ಯ ನಿರ್ಣಯ ಮಂಡಳಿಯ ಅಧ್ಯಕ್ಷರಾದ ಪ್ರಕಾಶ ನಿಟ್ನಳ್ಳಿ ಅವರು ಹೇಳಿದರು.
ವಿಜಯಪುರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ ಹಾಗೂ ಶಾಲಾ ಶಿಕ್ಷಣ ಇಲಾಖೆ ಅವರ ಸಹಯೋಗದಲ್ಲಿ ಬುಧವಾರ ನಗರದ ಬಿ.ಎಲ್.ಡಿ.ಇ ಸಂಸ್ಥೆಯ ಫ.ಗು.ಹಳಕಟ್ಟಿ ಇಂಜಿನಿಯರಿಂಗ್ ಕಾಲೇಜಿನ ಸಭಾಂಗಣದಲ್ಲಿ ನಡೆದ ಎಸ್‌ಎಸ್‌ಎಲ್‌ಸಿ ಫಲಿತಾಂಶ ಸುಧಾರಣೆಗಾಗಿ ವಿಜಯಪುರ-ಬಾಗಲಕೋಟೆಯ ವಿಭಾಗ ಮಟ್ಟದ ಸಂಪನ್ಮೂಲ ಶಿಕ್ಷಕರ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ಮಗುವಿನ ಸಾಮಾಜಿಕ, ಆರ್ಥಿಕ ಸ್ಥಿತಿಗತಿ ಹಾಗೂ ಮನಸ್ಥಿತಿಯನ್ನು ಅರಿತುಕೊಂಡು ಗುಣಾತ್ಮಕ ಮತ್ತು ಪರಿಮಾಣಾತ್ಮಕವಾಗಿ ಬೋಧನಾ ಕ್ರಮಗಳನ್ನು ಅಳವಡಿಸಿಕೊಂಡು ಶಿಕ್ಷಕರು ಬೋಧನೆ ಮಾಡುವ ಮೂಲಕ ಅವರ ಕಲಿಕಾ ಸಾಮರ್ಥ್ಯವನ್ನು ಹೆಚ್ಚಿಸಿ ವಿಷಯ ಕರಗತ ಮಾಡಿಸಬೇಕು. ಮುಂದಿನ ಮೂರು ತಿಂಗಳು ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿಗಾಗಿ ಕಾಳಜಿ ಪೂರಕವಾಗಿ ಶ್ರಮಿಸುವ ಹೊಣೆಗಾರಿಕೆ ನಮ್ಮೆಲ್ಲರದ್ದಾಗಿದೆ ಎಂದು ಅವರು ಹೇಳಿದರು.
ಪರೀಕ್ಷೆಗೆ ಸಂಬ0ಧಿಸಿದ ನೀಲನಕ್ಷೆ, ಮಾದರಿ ಪ್ರಶ್ನೆ ಪತ್ರಿಕೆ, ಪರೀಕ್ಷಾ ಉಪಕ್ರಮಗಳನ್ನು ಈಗಾಗಲೇ ಒದಗಿಸಿದೆ. ಅದರಂತೆ ಫಲಿತಾಂಶ ಸುಧಾರಣೆಗಾಗಿ ನೀಡುವ ನಿರ್ದೇಶನಗಳನ್ನು ಅಳವಡಿಸಿಕೊಂಡು, ವಿವಿಧ ರೀತಿಯ ಪರೀಕ್ಷೆಗಳನ್ನು ಏರ್ಪಡಿಸಿ, ಈ ಪರೀಕ್ಷೆಗಳನ್ನು ಮುಖ್ಯ ಪರೀಕ್ಷೆ ಎಂದೇ ಮಕ್ಕಳಿಗೆ ಮನವರಿಕೆ ಮಾಡಿಕೊಟ್ಟು ಅಚ್ಚುಕಟ್ಟಾಗಿ ನಡೆಸಬೇಕು. ಈ ನಿಟ್ಟಿನಲ್ಲಿ ನಮ್ಮ ಹೊಣೆಗಾರಿಕೆ ಹೆಚ್ಚಿಗಿದ್ದು, ಇದನ್ನರಿತು ಈ ದಿಸೆಯಲ್ಲಿ ಕಾರ್ಯನಿರ್ವಹಿಸಬೇಕು. ಎಸ್‌ಎಸ್‌ಎಲ್‌ಸಿ ಮಕ್ಕಳ ಜೀವನದ ಬಹುಮುಖ್ಯ ಘಟ್ಟವಾಗಿದ್ದು, ಅವರ ಭವಿಷ್ಯದ ದೃಷ್ಟಿಯಿಂದ ಕಲಿಕೆಗೆ ಪೂರಕವಾಗಿ ವಿಷಯ ಮನನ ಮಾಡಲು ಶ್ರಮಿಸಿ ಎಂದು ಅವರು ಹೇಳಿದರು.
ಅದರಂತೆ, ಈ ಕಾರ್ಯಾಗಾರದಲ್ಲಿನ ಸಂಪನ್ಮೂಲ ವ್ಯಕ್ತಿಗಳು ಇಲ್ಲಿ ಪಾಲ್ಗೊಂಡು ತರಬೇತಿಯನ್ನು ಸದುಪಯೋಗಪಡಿಸಿಕೊಂಡು,ಇದೇ ವಾರದಲ್ಲಿ ತಾಲೂಕಾ ಮಟ್ಟದಲ್ಲಿ ಕಾರ್ಯಾಗಾರವನ್ನು ಆಯೋಜಿಸಿ, ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಎಲ್ಲರೂ ಕೈಜೋಡಿಸಿ ಎಂದು ತಿಳಿಸಿದರು.
ಕರ್ನಾಟಕ ಪ್ರೌಢ ಶಾಲಾ ಮಂಡಳಿ ಮತ್ತು ಮೌಲ್ಯ ನಿರ್ಣಯ ಮಂಡಳಿಯ ನಿರ್ದೇಶಕರಾದ ಎಚ್.ಎನ್. ಗೋಪಾಲಕೃಷ್ಣ ಅವರು ಮಾತನಾಡಿ, ಎಸ್‌ಎಸ್‌ಎಲ್‌ಸಿ ಫಲಿತಾಂಶ ಸುಧಾರಣೆಗಾಗಿ ಮಂಡಳಿ ವಿವಿಧ ಉಪಕ್ರಮಗಳನ್ನು ರೂಪಿಸಿದ್ದು, ಈಗಾಗಲೇ ರಾಜ್ಯಾದ್ಯಂತ ವಿವಿಧ ಜಿಲ್ಲೆಗಳಲ್ಲಿ ಕಾರ್ಯಾಗಾರ ಹಮ್ಮಿಕೊಂಡು, ಸಂಪನ್ಮೂಲ ವ್ಯಕ್ತಿಗಳಿಗಾಗಿ ಕಾರ್ಯಾಗಾರದಲ್ಲಿ ವಿವಿಧ ವಿಷಯಗಳ ಕುರಿತು ತರಬೇತಿ ನೀಡಲಾಗುತ್ತಿದೆ. ಪ್ರಸಕ್ತ ಎಸ್‌ಎಸ್‌ಎಲ್‌ಸಿ ಫಲಿತಾಂಶ ಸುಧಾರಣೆಗಾಗಿ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಕ್ರಿಯಾ ಯೋಜನೆಯನ್ವಯ ಕಾರ್ಯನಿರ್ವಹಿಸಿ, ಮಗುವಿನ ಕಲಿಕಾಸಕ್ತಿ ಗುರುತಿಸಿ, ವಿಷಯವಾರು ಬೋಧನಾ ಕ್ರಮಗಳನ್ನು ಅನುಸರಿಸುವ ಜವಾಬ್ದಾರಿ ಶಿಕ್ಷಕರ ಹಾಗೂ ಸಂಪನ್ಮೂಲ ವ್ಯಕ್ತಿಗಳದಾಗಿದೆ. ಮುಖ್ಯ ಶಿಕ್ಷಕರಿಗೆ ತರಬೇತಿಗಳನ್ನು ಆಯೋಜಿಸಬೇಕು. ಸಂಪನ್ಮೂಲ ಶಿಕ್ಷಕರು ಅತ್ಯಂತ ಪರಿಣಾಮಕಾರಿ ವಿಷಯ ತಿಳಿಸಿಕೊಟ್ಟು ಮಗುವಿನ ಶೈಕ್ಷಣಿಕ ಪ್ರಗತಿಗೆ ಕೈಜೋಡಿಸಿ, ಮುಂದಿನ ಮೂರು ತಿಂಗಳಲ್ಲಿ ಹೆಚ್ಚೆಚ್ಚು ಶೈಕ್ಷಣಿಕ ಚಟುವಟಿಕೆಗಳನ್ನು ಏರ್ಪಡಿಸಿ, ಮಕ್ಕಳ ಕಲಿಕಾ ಪ್ರಗತಿ ಹೆಚ್ಚಿಸಿ ಎಂದು ಹೇಳಿದರು.
ಧಾರವಾಡದ ಅಪರ ಆಯುಕ್ತರ ಕಚೇರಿಯ ನಿರ್ದೇಶಕರಾದ ಈಶ್ವರ ನಾಯಕ ಎಸ್‌ಎಸ್‌ಎಲ್‌ಸಿ ಫಲಿತಾಂಶ ಹೆಚ್ಚಳಕ್ಕಾಗಿ ಶ್ರಮಿಸುವುದು ಏಕೈಕ ಗುರಿಯಾಗಿದೆ. ಕಲಿಕಾಸಕ್ತಿ ಬೆಳೆಸಿ, ಮಕ್ಕಳ ಕಲಿಕೆಗೆ ಪ್ರೋತ್ಸ್ಸಾಹಿಸುವಲ್ಲಿ ಶಿಕ್ಷಕರ ಪಾತ್ರ ಬಹುಮುಖ್ಯವಾಗಿದೆ. ಪ್ರಯತ್ನ, ಪರಿಣಿತಿ ಪ್ರಗತಿಯೊಂದಿಗೆ ಶಿಕ್ಷಕರು ಪರಿಣಾಮಕಾರಿ ಬೋಧನೆ ಮಾಡಬೇಕು ಎಂದು ಹೇಳಿದರು.
ಸಭೆಯಲ್ಲಿ ಬಿಎಲ್‌ಡಿಇ ಸಂಸ್ಥೆಯ ಫ.ಗು.ಹಳಕಟ್ಟಿ ಇಂಜಿನೀಯರಿAಗ್ ಕಾಲೇಜಿನ ಪ್ರಾಂಶುಪಾಲರಾದ ಮಂಜುನಾಥ.ಪಿ, ಉಪ ಪ್ರಾಂಶುಪಾಲರಾದ ಲೀನಾ ರಾಘವ, ಬಾಗಲಕೋಟೆಯ ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ ಅಜಿತ ಮನ್ನಿಕೇರಿ, ವಿಜಯಪುರದ ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ ವೀರಯ್ಯ ಸಾಲಿಮಠ, ಬಾಗಲಕೋಟೆಯ ಡಯಟ್ ಪ್ರಾಂಶುಪಾಲರಾದ ಸಲೀಂ ಪಾಶಾ, ವಿಜಯಪುರದ ಡಯಟ್ ಪ್ರಾಂಶುಪಾಲರಾದ ಉಮಾದೇವಿ ಸೊನ್ನದ ಸೇರಿದಂತೆ ಅವಳಿ ಜಿಲ್ಲೆಯ ಶಿಕ್ಷಣಾಧಿಕಾರಿಗಳು, ಕ್ಷೇತ್ರ ಸಮನ್ವಯಾಧಿಕಾರಿಗಳು, ಸಂಪನ್ಮೂಲ ಅಧಿಕಾರಿಗಳು, ಶಿಕ್ಷಕರು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / jyothi deshpande