
ಗದಗ, 17 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲ್ಲೂಕಿನ ದೊಡ್ಡೂರು ಗ್ರಾಮದ ಹೊರವಲಯದಲ್ಲಿ ಖಾಸಗಿ ಶಾಲಾ ಬಸ್ ಸಿಬ್ಬಂದಿಗಳ ನಿರ್ಲಕ್ಷ್ಯದಿಂದ ಎಲ್‌ಕೆಜಿ ವಿದ್ಯಾರ್ಥಿಯೊಬ್ಬ ಸ್ಥಳದಲ್ಲೇ ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ ನಡೆದಿದೆ.
ಈ ದುರ್ಘಟನೆಯಿಂದ ಇಡೀ ಗ್ರಾಮದಲ್ಲಿ ಶೋಕ ಹಾಗೂ ಆಕ್ರೋಶದ ವಾತಾವರಣ ನಿರ್ಮಾಣವಾಗಿದೆ.
ಮೃತ ಬಾಲಕನನ್ನು ಪ್ರಥಮ ಅರುಣ ಲಮಾಣಿ ಎಂದು ಗುರುತಿಸಲಾಗಿದೆ. ಆತ ಶಿಗ್ಲಿ ಗ್ರಾಮದ ಲಿಟಲ್ ಹಾರ್ಟ್ಸ್ ಶಾಲೆಯಲ್ಲಿ ಎಲ್‌ಕೆಜಿ ವ್ಯಾಸಂಗ ಮಾಡುತ್ತಿದ್ದ. ಮೃತ ಬಾಲಕನ ತಂದೆ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದು, ರಜೆಯ ಮೇಲೆ ಸ್ವಗ್ರಾಮದಲ್ಲಿದ್ದರು.
ಪ್ರಥಮ ಪ್ರತಿದಿನದಂತೆ ಶಾಲಾ ಬಸ್‌ನಲ್ಲಿ ಶಾಲೆಗೆ ತೆರಳಿ, ಸಂಜೆ ಮರಳಿ ಬರುತ್ತಿದ್ದ ವೇಳೆ ದೊಡ್ಡೂರು ಗ್ರಾಮದ ಹೊರವಲಯದಲ್ಲಿ ದುರ್ಘಟನೆ ಸಂಭವಿಸಿದೆ. ಬಸ್ ಚಲಿಸುತ್ತಿದ್ದ ಸಂದರ್ಭದಲ್ಲೇ ಸುಮಾರು 300 ಮೀಟರ್ ದೂರದಲ್ಲಿ ಬಸ್‌ನ ಬಾಗಿಲಿನಿಂದ ಮಗು ಕೆಳಗೆ ಬಿದ್ದಿರುವುದಾಗಿ ತಿಳಿದುಬಂದಿದೆ.
ಆದರೆ ಬಸ್ ಚಾಲಕ ಹಾಗೂ ಕ್ಲೀನರ್ ತಕ್ಷಣ ಆಸ್ಪತ್ರೆಗೆ ಕರೆದೊಯ್ಯದೆ, ಮಗುವನ್ನು ಸ್ಥಳದಲ್ಲೇ ಎತ್ತಿ ಮತ್ತೆ ಬಸ್‌ಗೆ ಹಾಕಿಕೊಂಡು ಯಾರಿಗೂ ಮಾಹಿತಿ ನೀಡದೇ ಬಸ್ ಮುಂದುವರಿಸಿದ್ದಾರೆಯೆಂಬ ಗಂಭೀರ ಆರೋಪಗಳು ಕೇಳಿಬಂದಿವೆ. ನಂತರ ಉಳಿದ ವಿದ್ಯಾರ್ಥಿಗಳನ್ನು ಇಳಿಸಿ, ಬಸ್ ಸಿಬ್ಬಂದಿ ಸ್ಥಳದಿಂದ ಪರಾರಿಯಾಗಿದ್ದಾರೆ ಎನ್ನಲಾಗಿದೆ.
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಕುಟುಂಬಸ್ಥರು ಸ್ಥಳಕ್ಕೆ ಧಾವಿಸಿ ಆಕ್ರಂದನ ಮುಗಿಲು ಮುಟ್ಟಿದೆ. ಮಗುವಿನ ಅಕಾಲಿಕ ಸಾವಿನಿಂದ ಇಡೀ ಗ್ರಾಮ ಶೋಕದಲ್ಲಿ ಮುಳುಗಿದೆ. ಶಾಲಾ ಬಸ್‌ನ ಸುರಕ್ಷತಾ ಲೋಪ ಹಾಗೂ ಸಿಬ್ಬಂದಿಗಳ ಅಜಾಗರೂಕತೆಯೇ ಈ ದುರಂತಕ್ಕೆ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಸುದ್ದಿ ತಿಳಿದ ಕೂಡಲೇ ಲಕ್ಷ್ಮೇಶ್ವರ ಪೊಲೀಸ್ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಸ್ ಚಾಲಕ, ಕ್ಲೀನರ್ ಹಾಗೂ ಶಾಲಾ ಆಡಳಿತ ಮಂಡಳಿ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ. ಶಾಲಾ ವಾಹನಗಳ ಸುರಕ್ಷತೆ ಹಾಗೂ ಮಕ್ಕಳ ಜೀವ ರಕ್ಷಣೆಗೆ ಸಂಬಂಧಿಸಿದಂತೆ ಸರ್ಕಾರ ಮತ್ತು ಶಿಕ್ಷಣ ಇಲಾಖೆ ಗಂಭೀರ ಕ್ರಮ ಕೈಗೊಳ್ಳಬೇಕೆಂಬ ಬೇಡಿಕೆಯೂ ಜೋರಾಗಿದೆ. ಘಟನೆ ಲಕ್ಷ್ಮೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಹಿಂದೂಸ್ತಾನ್ ಸಮಾಚಾರ್ / lalita MP