
ಬಳ್ಳಾರಿ, 17 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ಬಳ್ಳಾರಿ ಜಿಲ್ಲೆಯ ಕೈಗಾರಿಕೆಗಳಲ್ಲಿ ಸ್ಥಳೀಯರಿಗೆ (ಕನ್ನಡಿಗರಿಗೆ) ಉದ್ಯೋಗ ನೀಡಿ ಸರೋಜಿನಿ ಮಹಿಷಿ ವರದಿ ಅನುಷ್ಠಾನಗೊಂಡಿರುವ ಕುರಿತು ಸ್ವತಂತ್ರ ತಂಡದಿಂದ ತನಿಖೆ ನಡೆಸಬೇಕು ಎಂದು ಬಳ್ಳಾರಿ ನಗರ ಕಾಂಗ್ರೆಸ್ ಶಾಸಕ ನಾರಾ ಭರತರೆಡ್ಡಿ ಅವರು ಆಗ್ರಹಿಸಿದ್ದಾರೆ.
ಬೆಳಗಾವಿಯ `ಸುವರ್ಣ ಸೌಧ'ದಲ್ಲಿ ಉತ್ತರ ಕರ್ನಾಟಕದ ಅಭಿವೃದ್ಧಿ ಕುರಿತು ನಡೆದ ಚರ್ಚೆಯಲ್ಲಿ ಪಾಲ್ಗೊಂಡಿದ್ದ ನಾರಾ ಭರತರೆಡ್ಡಿ, ಉತ್ತರ ಕರ್ನಾಟಕದಲ್ಲಿಯೇ ಅತಿ ಹೆಚ್ಚು ಕೈಗಾರಿಕೆಗಳು ಬಳ್ಳಾರಿಯಲ್ಲಿದ್ದರೂ ಬಳ್ಳಾರಿ - ಕೊಪ್ಪಳ ಜಿಲ್ಲೆಯ ಯುವಕರು ಬೆಂಗಳೂರು ಇನ್ನಿತರೆ ಪಟ್ಟಣಗಳಿಗೆ ಉದ್ಯೋಗ ಹುಡುಕಿಕೊಂಡು ಹೋಗುತ್ತಿರುವುದು ವಿಪರ್ಯಾಸ. ಗ್ರೂಪ್ - ಎ ಅಡಿ ಶೇ. 65, ಗ್ರೂಪ್ - ಬಿ ಅಡಿ ಶೇ. 80, ಗ್ರೂಪ್ - ಸಿ ಮತ್ತು ಡಿ-ನಲ್ಲಿ ಶೇ. 100 ರಷ್ಟು ಉದ್ಯೋಗ ನೀಡಿರುವುದಾಗಿ ಹೇಳಿರುವುದು ತಪ್ಪು.
ಸ್ಥಳೀಯರಿಗೆ ಉದ್ಯೋಗ ನೀಡಿರುವ ಕುರಿತು ಕೈಗಾರಿಕೆಗಳವರು ಸರ್ಕಾರಕ್ಕೆ ನೀಡಿರುವ ಈ ವರದಿಯು ತಪ್ಪುಗಳಿಂದ ಕೂಡಿದೆ. ಸರೋಜಿನಿ ಮಹಿಷಿ ವರದಿಯ ಅನುಷ್ಠಾನಗೊಂಡಿಲ್ಲ. ಭೂಮಿ ನಮ್ಮದು, ಜಲ ನಮ್ಮದು, ವಿದ್ಯುತ್ ನಮ್ಮದು, ಗಾಳಿಯೂ ನಮ್ಮದು. ಆದರೂ, ನಮ್ಮವರು ನಿರುದ್ಯೋಗಿಗಳು ಅಥವಾ ಬೇರೆ ಕಡೆಗಳಲ್ಲಿ ಉದ್ಯೋಗ ಮಾಡುತ್ತಿರುವುದು ಪರಿಸ್ಥಿತಿಯ ವಿಪರ್ಯಾಸ ಎಂದು ವ್ಯಂಗ್ಯವಾಡಿದರು.
ಸರೋಜಿನಿ ಮಹಿಷಿ ವರದಿ ಅನುಷ್ಠಾನದ ಕುರಿತು ಸರ್ಕಾರ ತಕ್ಷಣವೇ ತನಿಖೆ ನಡೆಸಿ, ಕೈಗಾರಿಕೆಗಳು ಸಲ್ಲಿಸುತ್ತಿರುವ ವರದಿಯ ಸತ್ಯಾಸತ್ಯತೆಯನ್ನು ಪರಿಶೀಲಿಸಬೇಕು. ಬಳ್ಳಾರಿ ಜಿಲ್ಲೆಯ ಯುವಪ್ರತಿಭೆಗಳ ಕುರಿತು ಮಲತಾಯಿ ಧೋರಣೆ ತೋರಿಸಬಾರದು ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
`ವಿದ್ಯುತ್ ಅದಾಲತ್ ನಡೆಸಿ'
ಬಳ್ಳಾರಿ ವಿಧಾನಸಭಾ ಕ್ಷೇತ್ರದಲ್ಲಿ ಶೇ. 90 ರಷ್ಟು ಸ್ಲಂಗಳಿವೆ. ಇಲ್ಲಿಯ ನಿವಾಸಿಗಳು ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡಿದ್ದು, ಬಡ್ಡಿ ಸೇರಿ ಸಾವಿರಾರು ರೂಪಾಯಿಗಳನ್ನು ದಾಟಿದೆ. ಇಲ್ಲಿಯ ನಿವಾಸಿಗಳ ಅನುಕೂಲಕ್ಕಾಗಿ ಜೆಸ್ಕಾಂ ಅದಾಲತ್ ನಡೆಸಿ, ಬಡ್ಡಿಯನ್ನು ಮನ್ನಾ ಮಾಡಿ, ಬಾಕಿ ಹಣವನ್ನು ಪಾವತಿಸಲು ಕಾಲಾವಕಾಶ ನೀಡಬೇಕು ಎಂದು ಕೋರಿದರು.
ಜಿಲ್ಲೆಯಲ್ಲಿ ಇರುವ ಡಿಎಂಎಫ್ (ಜಿಲ್ಲಾ ಖನಿಜ ನಿಧಿ)ಯ ಬಳಕೆಗೆ ಸರ್ಕಾರ ತಕ್ಷಣವೇ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಮನವಿ ಮಾಡಿದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್