
ಗದಗ, 17 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ಕಲಾ ವಿಕಾಸ ಪರಿಷತ್ ಹಾಗೂ ಸ್ವಾಮಿ ವಿವೇಕಾನಂದ ಸಾಂಸ್ಕೃತಿಕ ಸಮಿತಿ ಸಂಯುಕ್ತ ಆಶ್ರಯದಲ್ಲಿ ಕನ್ನಡ ರಾಜ್ಯೋತ್ಸವ ಅಂಗವಾಗಿ ‘ನಾಡದೇವಿಗೆ ನಮನ’ ಕಾರ್ಯಕ್ರಮವು ನಗರದ ಸ್ವಾಮಿ ವಿವೇಕಾನಂದ ಸಾಂಸ್ಕೃತಿಕ ಭವನದಲ್ಲಿ ಅದ್ದೂರಿಯಾಗಿ ಜರುಗಿತು.
ಖ್ಯಾತ ಉದ್ದಿಮೆದಾರ ಹಾಗೂ ಕಲಾ ಪೋಷಕ ಸದಾಶಿವಯ್ಯ ಎಸ್. ಮದರಿಮಠ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ರಜತ ಮಹೋತ್ಸವ ಸಮಿತಿ ಅಧ್ಯಕ್ಷ ವಿ.ಕೆ. ಗುರುಮಠ ಅಧ್ಯಕ್ಷತೆ ವಹಿಸಿದ್ದರು. ಪರಿಷತ್ ಸಂಸ್ಥಾಪಕ ವೇ. ಸಿ.ಕೆ.ಹೆಚ್. ಶಾಸ್ತ್ರೀ (ಕಡಣಿ) ಪ್ರಾಸ್ತಾವಿಕವಾಗಿ ಮಾತನಾಡಿ, ಕಲಾ ವಿಕಾಸ ಪರಿಷತ್ ನಡೆದು ಬಂದ ಹಾದಿ, ಕನ್ನಡ ಭಾಷೆ ಹಾಗೂ ಸಂಸ್ಕೃತಿಯ ಸಂರಕ್ಷಣೆಗೆ ಸಂಸ್ಥೆ ಸಲ್ಲಿಸಿದ ಸೇವೆಯನ್ನು ವಿವರಿಸಿದರು.
ವೇದಿಕೆಯಲ್ಲಿ ಗದಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ವಿವೇಕಾನಂದಗೌಡ ಪಾಟೀಲ, ದತ್ತಾ ಗ್ರೂಪ್ ವ್ಯವಸ್ಥಾಪಕ ನಿರ್ದೇಶಕ ಕಿರಣ ಪ್ರಕಾಶ ಭೂಮಾ, ಸ್ವಾಮಿ ವಿವೇಕಾನಂದ ಸಾಂಸ್ಕೃತಿಕ ಸಮಿತಿ ಅಧ್ಯಕ್ಷ ಎ.ಟಿ. ನರೇಗಲ್, ಕನಕದಾಸ ಶಿಕ್ಷಣ ಸಮಿತಿ ಕಾರ್ಯದರ್ಶಿ ರವಿ ದಂಡಿನ, ಕಲಾ ವಿಕಾಸ ಪರಿಷತ್ ಪೋಷಕ ರವಿ ಎಲ್. ಗುಂಜೀಕರ್ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಮಿಸ್ಸಿಂಗ್ ವುಮೆನ್, ಪರಸ್ಪರ ಮತ್ತು ಇತರ ಕಥೆಗಳು, ಮತ್ತೆ ಅರಳಲಿ, ಮಾಯಾ ಗುಹೆ ಮತ್ತು ಇತರ ಮಕ್ಕಳ ಕಥೆಗಳು, ನಾಯಕನಹಟ್ಟಿ ಶ್ರೀಗುರು ತಿಪ್ಪೇರುದ್ರಸ್ವಾಮಿ ಸೇರಿದಂತೆ ವಿವಿಧ ಕೃತಿಗಳ ಲೇಖಕರಿಗೆ ಪಂ. ಪುಟ್ಟರಾಜ ಕೃಪಾಪೋಷಿತ ವರ್ಷದ ಶ್ರೇಷ್ಠ ಕೃತಿರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು. ಅಲ್ಲದೆ ಸುಮಾರು ಎಂಟು ಮಂದಿ ಸಾಧಕರಿಗೆ ಕಲಾ ವಿಕಾಸ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಇದೇ ಸಂದರ್ಭದಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾದ ರಾಜು ಹೆಬ್ಬಳ್ಳಿ ಅವರನ್ನು ಸನ್ಮಾನಿಸಲಾಯಿತು. ಪ್ರೊ. ಅನ್ನದಾನಿ ಹಿರೇಮಠ, ಅಂದಾನಪ್ಪ ವಿಭೂತಿ ಹಾಗೂ ಪ್ರೊ. ಎಸ್.ವಾಯ್. ಚಿಕ್ಕಟ್ಟಿ ಅವರಿಗೆ ಜೀವಮಾನದ ಶ್ರೇಷ್ಠ ಸಾಧನೆಗೆ ನೀಡಲಾಗುವ ಕಲಾ ವಿಕಾಸ ಕನ್ನಡ ಸಿರಿ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ನಡೆದ ಸಂಗೀತ ಸಂಜೆಯಲ್ಲಿ ಪಂ. ವೆಂಕಟೇಶ ಆಲ್ನೋಡ್ ಅವರ ಗಾಯನ, ರಾಘವೇಂದ್ರ ಕೃಷ್ಣಾಜಿ ಕ್ಷತ್ರಿಯ ಅವರ ಭಾನ್ಸುರಿ ವಾದನ ಮತ್ತು ಸವಿತಾ ಗುಡ್ಡದ ಅವರ ಸುಗಮ ಸಂಗೀತ ಸಭಿಕರ ಮನ ಗೆದ್ದಿತು. ಮಧ್ಯಾಹ್ನದ ಭೋಜನ ಸೇವೆಯನ್ನು ವೀರನಗೌಡ ರಾಜಶೇಖರಗೌಡ ಕುಲಕರ್ಣಿ ವಹಿಸಿಕೊಂಡರೆ, ರಾತ್ರಿಯ ಭೋಜನ ಸೇವೆಯನ್ನು ಸುದರ್ಶನ ಹಾನಗಲ್, ರಾಜು ಸುಂಕದ ಹಾಗೂ ಎಂ.ಕೆ. ತುಪ್ಪದ ನಿರ್ವಹಿಸಿದರು.
ಡಾ. ಸುಮಾ ಬಸವರಾಜ ಪ್ರಾರ್ಥನಾ ಸಂಗೀತ ನಡೆಸಿಕೊಟ್ಟರು. ಸಂಕೇತಾ ಸಿದ್ದಿಂಗ ಸ್ವಾಗತಿಸಿದರೆ, ಫಕೀರಮ್ಮ ಚಿಗಟೇರಿ ವಂದಿಸಿದರು. ಕಾರ್ಯಕ್ರಮವನ್ನು ಶ್ರೀಶೈಲ ಬಡಿಗೇರ ನಿರೂಪಿಸಿದರು. ಇದೇ ಸಂದರ್ಭದಲ್ಲಿ ದಿವಂಗತ ಡಾ. ಶಾಮನೂರು ಶಿವಶಂಕರಪ್ಪ ಅವರಿಗೆ ಎರಡು ನಿಮಿಷಗಳ ಮೌನಾಚರಣೆ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಹಿಂದೂಸ್ತಾನ್ ಸಮಾಚಾರ್ / lalita MP