

ಬಳ್ಳಾರಿ, 17 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ಬಳ್ಳಾರಿ ಜಿಲ್ಲೆಯಾದ್ಯಂತ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಟಾನಕ್ಕೆ ಜಿಲ್ಲಾ ಮಟ್ಟದ ಅಧಿಕಾರಿಗಳು ಉತ್ತಮ ಪ್ರಗತಿ ಸಾಧಿಸಿಬೇಕು ಎಂದು ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಪ್ರಾಧಿಕಾರದ ಅಧ್ಯಕ್ಷ ಕೆ.ಇ. ಚಿದಾನಂದಪ್ಪ ಅವರು ತಿಳಿಸಿದ್ದಾರೆ.
ಜಿಲ್ಲಾ ಪಂಚಾಯತ್ ನಜೀರ್ ಸಭಾಂಗಣದಲ್ಲಿ ಬುಧವಾರ ನಡೆದ ಐದು ಗ್ಯಾರಂಟಿ ಯೋಜನೆಗಳ ಜಿಲ್ಲಾ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ರಾಜ್ಯ ಸರ್ಕಾರವು ಮಹಿಳೆಯರ ಸಬಲೀಕರಣಕ್ಕೆ ಹೆಚ್ಚು ಒತ್ತು ನೀಡಿದೆ. ಗೃಹಲಕ್ಷ್ಮೀ ಮತ್ತು ಶಕ್ತಿ ಯೋಜನೆಯು ಮಹಿಳೆಯರಿಗೆ ಸ್ವವಲಂಬನೆಯ ಜೀವನ ಕಟ್ಟಿಕೊಳ್ಳಲು ಸಹಾಯ ಮಾಡಿದೆ. ಪಂಚ ಗ್ಯಾರಂಟಿ ಯೋಜನೆಯು ಯಾವುದೇ ಜಾತಿ, ಧರ್ಮಕ್ಕೆ ಸೀಮಿತವಾಗಿರದೇ ಎಲ್ಲಾ ವರ್ಗದ ಜನರಿಗೆ ತಲುಪುತ್ತಿದೆ ಎಂದರು.
ಗೃಹಲಕ್ಷ್ಮೀ ಯೋಜನೆಯಡಿ ಜಿಲ್ಲೆಯ ಒಟ್ಟು 29,9,004 ಲಕ್ಷ ಫಲಾನುಭವಿಗಳ ಪೈಕಿ 28,9,938 ಫಲಾನುಭವಿಗಳಿಗೆ ಸಹಾಯಧನ ನೆರವು ತಲುಪಿದ್ದು, ಶೇ.96.97 ರಷ್ಟು ಪ್ರಗತಿಯಾಗಿದೆ. ಈವರೆಗೆ ಈ ಯೋಜನೆಯಡಿ ಜಿಲ್ಲೆಗೆ 1259.16 ಕೋಟಿ ರೂ. (2023 ರ ಆಗಷ್ಟ್ ತಿಂಗಳಿನಿಂದ 2025 ಆಗಷ್ಟ್ ವರೆಗೆ) ಸರ್ಕಾರ ಪಾವತಿಸಿದೆ. ಜಿಲ್ಲೆಯಲ್ಲಿ 223 ಲಿಂಗತ್ವ ಅಲ್ಪಸಂಖ್ಯಾತ ಫಲಾನುಭವಿಗಳಿಗೆ ಗೃಹಲಕ್ಷ್ಮೀ ಯೋಜನೆಯಡಿ ಸಹಾಯಧನ ದೊರಕಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ರಾಮಕೃಷ್ಣ ಅವರು ತಿಳಿಸಿದರು.
ಶಕ್ತಿ ಯೋಜನೆಯಡಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಸೌಲಭ್ಯ ಒದಗಿಸಲಾಗಿದ್ದು, ಜಿಲ್ಲೆಯಲ್ಲಿ 6 ಘಟಕಗಳಿವೆ. ದಿನಕ್ಕೆ 68 ಸಾವಿರಕ್ಕಿಂತ ಹೆಚ್ಚು ಮಹಿಳಾ ಪ್ರಯಾಣಿಕರು ಉಚಿತ ಪ್ರಯಾಣ ಮಾಡುತ್ತಿದ್ದಾರೆ. ಈವರೆಗೆ ಒಟ್ಟು 622.50 ಕೋಟಿ ಮಹಿಳೆಯರು ಪ್ರಯಾಣಿಸಿದ್ದಾರೆ. ಯೋಜನೆ ಜಾರಿಯಾದಾಗಿನಿಂದ ಇಲ್ಲಿಯವರೆಗೆ ರೂ.244.47 ಕೋಟಿ (2023 ರ ಜೂನ್ ತಿಂಗಳಿನಿಂದ 2025ರ ಅಕ್ಟೋಬರ್ ವರೆಗೆ) ವೆಚ್ಚವಾಗಿದೆ ಎಂದು ಕೆಕೆಆರ್‍ಟಿಸಿ ಬಳ್ಳಾರಿ ವಿಭಾಗದ ಅಧಿಕಾರಿಗಳು ಸಭೆಗೆ ತಿಳಿಸಿದರು.
ಗೃಹಜ್ಯೋತಿ ಯೋಜನೆಯಡಿ ನೋಂದಾಯಿಸಿಕೊಂಡ 2.97 ಲಕ್ಷ ಮನೆಗಳಿಗೆ ಉಚಿತ ವಿದ್ಯುತ್ ಪ್ರಯೋಜನ ತಲುಪಿದ್ದು, ಪ್ರಗತಿ ಪ್ರಮಾಣ ಶೇ.98 ಪ್ರಗತಿಯಾಗಿದೆ. ಈ ಯೋಜನೆಗೆ ರೂ.374 ಕೋಟಿ ಜಿಲ್ಲೆಯ ಅರ್ಹ ಫಲಾನುಭವಿಗಳಿಗೆ ವೆಚ್ಚವಾಗಿದೆ ಎಂದು ಜೆಸ್ಕಾಂ ಅಧಿಕಾರಿಗಳು ಸಭೆಗೆ ತಿಳಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಜಿಪಂ ಸಿಇಒ ಅವರು, ಪಡಿತರ ಚೀಟಿಯಲ್ಲಿ ಮಹಿಳಾ ಮುಖ್ಯಸ್ಥರು ಮರಣ ಹೊಂದಿದ್ದರೆ ಅದರ ಬಗ್ಗೆ ಮಾಹಿತಿಯನ್ನು ಮಹಿಳಾ ಅಭಿವೃದ್ಧಿ ಇಲಾಖೆಗೆ ತಿಳಿಸಬೇಕು. ಇದರಿಂದ ಮರಣ ಹೊಂದಿದ ಮುಖ್ಯಸ್ಥರ ನಂತರ ಇನ್ನೋರ್ವ ಮಹಿಳಾ ಸದಸ್ಯೆಗೆ ಗೃಹಲಕ್ಷ್ಮೀ ಯೋಜನೆ ಪ್ರಯೋಜನ ಸಿಗಲಿದೆ ಎಂದು ಹೇಳಿದರು.
ಯುವ ನಿಧಿ ಯೋಜನೆ ಮೂಲಕ 10699 ನೋಂದಾಯಿಸಿಕೊಂಡ ಅರ್ಹ ಅಭ್ಯರ್ಥಿಗಳಿಗೆ ಇಲ್ಲಿಯವರೆಗೆ ರೂ.21.99 ಕೋಟಿ ಹಣಕಾಸು ನೆರವು ತಲುಪಿದ್ದು, ಇದರಿಂದ ನಿರುದ್ಯೋಗ ಯುವಕರಿಗೆ ಸಹಕಾರಿಯಾಗಿದೆ ಎಂದು ಜಿಲ್ಲಾ ಉದ್ಯೋಗಾಧಿಕಾರಿಗಳು ಅವರು ಸಭೆಗೆ ತಿಳಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಜಿಪಂ ಸಿಇಒ ಅವರು, ಯುವನಿಧಿ ಯೋಜನೆಗೆ ನೋಂದಾಯಿಸಿಕೊಂಡ ಅಭ್ಯರ್ಥಿಗಳು ಅವರು ಕೆಲಸಕ್ಕೆ ಸೇರಿದ ಬಗ್ಗೆ ವಿಚಾರಿಸಿ ಕೆಲಸ ಸಿಕ್ಕಿದ ನಂತರವು ಯೋಜನೆಯ ಪ್ರಯೋಜನ ಪಡೆಯುತ್ತಿರುವುದರ ಬಗ್ಗೆ ಗಮನ ವಹಿಸಿಬೇಕು. ಉದ್ಯೋಗ ಮೇಳಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ತಾಲ್ಲೂಕು ಮತ್ತು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಜಾಗೃತಿ ಮೂಡಿಸಬೇಕು ಎಂದರು.
ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಪ್ರಾಧಿಕಾರದ ಉಪಾಧ್ಯಕ್ಷರಾದ ಎಂ. ಆಶಾಲತಾ, ಬಳ್ಳಾರಿ ತಾಲ್ಲೂಕು ಗ್ಯಾರಂಟಿ ಯೋಜನೆಗಳ ಅಧ್ಯಕ್ಷ ಗೋನಾಳ್ ಎಂ.ನಾಗಭೂಷಣ ಗೌಡ, ಕುರುಗೋಡು ತಾಲ್ಲೂಕು ಅಧ್ಯಕ್ಷ ಜಿ.ಬಸವನಗೌಡ, ಸಿರುಗುಪ್ಪ ತಾಲ್ಲೂಕು ಅಧ್ಯಕ್ಷ ಮಾರುತಿ ವರಪ್ರಸಾದ್ ರೆಡ್ಡಿ, ಸಂಡೂರು ತಾಲ್ಲೂಕು ಅಧ್ಯಕ್ಷ ನೂರುದ್ಧೀನ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ರಾಮಕೃಷ್ಣ ಸೇರಿದಂತೆ ತಾಪಂ ಇಒಗಳು ಹಾಗೂ ಇತರರು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್