ಧರ್ಮ ಮಾರ್ಗದಲ್ಲೇ ಜೀವನ ಸಾಗಬೇಕು : ವಿಮಲ ಸಾಗರ ಸೂರಿಜಿ ಮಾರಾಸಾಹೇಬ
ಗದಗ, 17 ಡಿಸೆಂಬರ್ (ಹಿ.ಸ.) : ಆ್ಯಂಕರ್ : ಗದಗ ಜಿಲ್ಲೆ ಶಿರಹಟ್ಟಿ ಪಟ್ಟಣದಲ್ಲಿ ಜೈನ ಸಮಾಜದ ಗುರುಗಳಾದ ವಿಮಲ ಸಾಗರ ಸೂರಿಜಿ ಮಾರಾಸಾಹೇಬ ಅವರು ಧರ್ಮ, ಸಂಸ್ಕೃತಿ ಹಾಗೂ ಆಧ್ಯಾತ್ಮದ ಮಹತ್ವ ಕುರಿತು ಪ್ರವಚನ ನೀಡಿದರು. ಪ್ರತಿಯೊಬ್ಬರೂ ಧರ್ಮ ಮಾರ್ಗದಲ್ಲಿ ನಡೆಯಬೇಕು. ನಮ್ಮ ಸಂಸ್ಕೃತಿ, ಪರಂಪರೆ ಹಾಗೂ ಸ
ಫೋಟೋ


ಗದಗ, 17 ಡಿಸೆಂಬರ್ (ಹಿ.ಸ.) :

ಆ್ಯಂಕರ್ : ಗದಗ ಜಿಲ್ಲೆ ಶಿರಹಟ್ಟಿ ಪಟ್ಟಣದಲ್ಲಿ ಜೈನ ಸಮಾಜದ ಗುರುಗಳಾದ ವಿಮಲ ಸಾಗರ ಸೂರಿಜಿ ಮಾರಾಸಾಹೇಬ ಅವರು ಧರ್ಮ, ಸಂಸ್ಕೃತಿ ಹಾಗೂ ಆಧ್ಯಾತ್ಮದ ಮಹತ್ವ ಕುರಿತು ಪ್ರವಚನ ನೀಡಿದರು.

ಪ್ರತಿಯೊಬ್ಬರೂ ಧರ್ಮ ಮಾರ್ಗದಲ್ಲಿ ನಡೆಯಬೇಕು. ನಮ್ಮ ಸಂಸ್ಕೃತಿ, ಪರಂಪರೆ ಹಾಗೂ ಸಂಸ್ಕಾರಗಳನ್ನು ಎತ್ತಿ ಹಿಡಿಯುವ ಕೆಲಸ ಮಾಡಬೇಕು. ನಮ್ಮ ದೇಶಕ್ಕೆ ಆಧ್ಯಾತ್ಮವೇ ದೊಡ್ಡ ಶಕ್ತಿಯಾಗಿದೆ ಎಂದು ಅವರು ಹೇಳಿದರು.

ಲೋಕ ಕಲ್ಯಾಣಾರ್ಥವಾಗಿ ಗದುಗಿನಲ್ಲಿ ಚತುರ್ಮಾಸದ ನಿಮಿತ್ತ ನಾಲ್ಕು ತಿಂಗಳ ಕಾಲ ಜರುಗಿದ ಧರ್ಮ ಕಾರ್ಯಕ್ರಮವನ್ನು ಮುಗಿಸಿ, ಮೊದಲ ಬಾರಿಗೆ ಮಂಗಳವಾರ ಶಿರಹಟ್ಟಿ ಪಟ್ಟಣಕ್ಕೆ ಆಗಮಿಸಿದ ಅವರನ್ನು ಜೈನ ಸಮಾಜ ಬಾಂಧವರು ವಾದ್ಯ ಮೇಳಗಳೊಂದಿಗೆ ಅದ್ದೂರಿಯಾಗಿ ಬರಮಾಡಿಕೊಂಡರು. ನಂತರ ಪಟ್ಟಣದ ಮೂಲಕ ಸಂಚರಿಸಿ ಪಾರ್ಶ್ವನಾಥ ಜೈನ ಮಂದಿರಕ್ಕೆ ತೆರಳಿ ಧರ್ಮ ಪ್ರವಚನ ನೀಡಿದರು.

ಸಮಾಜದಲ್ಲಿ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರಿಂದ ಸಂಸ್ಕೃತಿ ಉಳಿಯುವದಷ್ಟೇ ಅಲ್ಲದೆ ಯುವ ಪೀಳಿಗೆಯಲ್ಲಿ ಉತ್ತಮ ಸಂಸ್ಕಾರ ಬಿತ್ತಲು ಸಾಧ್ಯವಾಗುತ್ತದೆ. ಇಂದಿನ ದಿನಗಳಲ್ಲಿ ಜನರಲ್ಲಿ ಧಾರ್ಮಿಕ ಭಾವನೆ, ಸಂಸ್ಕೃತಿ ಹಾಗೂ ಸಂಸ್ಕಾರದ ಅರಿವು ಮೂಡಿಸುವುದು ಅತ್ಯಂತ ಅಗತ್ಯವಾಗಿದೆ. ಮಕ್ಕಳಿಗೆ ಉತ್ತಮ ಸಂಸ್ಕಾರ ಹಾಗೂ ಧರ್ಮ ಬೋಧನೆಯ ತತ್ವಗಳನ್ನು ಬಿತ್ತುವುದರಿಂದ ಅವರನ್ನು ಉತ್ತಮ ಪ್ರಜೆಗಳನ್ನಾಗಿ ರೂಪಿಸಬಹುದು ಎಂದು ಅವರು ತಿಳಿಸಿದರು.

ಭಾರತ ಆಧ್ಯಾತ್ಮದ ಪುಣ್ಯ ಭೂಮಿಯಾಗಿದ್ದು, ಇಡೀ ಜಗತ್ತು ಪವಿತ್ರ ನಾಡು ಎಂದು ಕರೆಯುತ್ತದೆ. ಭಾರತೀಯರು ವಿವಿಧ ಕ್ಷೇತ್ರಗಳಲ್ಲಿ ಅಪಾರ ಸಾಧನೆ ಮಾಡುತ್ತಿರುವುದಕ್ಕೆ ಆಧ್ಯಾತ್ಮಿಕ ಶಕ್ತಿಯೇ ಮೂಲ ಕಾರಣವಾಗಿದೆ. ಪ್ರತಿಯೊಬ್ಬರೂ ಮುಂಜಾನೆ ದೇವರ ಸ್ಮರಣೆಯಿಂದ ದಿನಚರಿಯನ್ನು ಆರಂಭಿಸಬೇಕು. ಕಾಣದ ಶಕ್ತಿಯೊಂದು ನಮ್ಮನ್ನು ಕಾಪಾಡುತ್ತದೆ ಎಂಬ ನಂಬಿಕೆಯಿಂದ ದೇವರ ಪೂಜೆ ಮಾಡುತ್ತೇವೆ. ಮಾನವ ಧರ್ಮದ ನೆಲೆಗಟ್ಟಿನ ಮೇಲೆ ಬದುಕು ಸಾಗಿಸುವುದು ಅತ್ಯಂತ ಮಹತ್ವದ್ದಾಗಿದೆ ಎಂದು ವಿಮಲ ಸಾಗರ ಸೂರಿಜಿ ಮಾರಾಸಾಹೇಬ ಹೇಳಿದರು.

ಸಂಸ್ಕಾರ ನೀಡುವುದು ಪಾಲಕರ ಕರ್ತವ್ಯವಾಗಿದೆ. ಆಧ್ಯಾತ್ಮವೇ ಮಾನವನ ದೊಡ್ಡ ನಿಧಿಯಾಗಿದ್ದು, ಆಧ್ಯಾತ್ಮಿಕ ಜೀವನದಿಂದಲೇ ಶಾಂತಿ, ನೆಮ್ಮದಿ, ಶ್ರೇಯಸ್ಸು ಹಾಗೂ ಜೀವನ ಮೌಲ್ಯವನ್ನು ಅನುಭವಿಸಲು ಸಾಧ್ಯವಾಗುತ್ತದೆ ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ಜೈನ ಸಮಾಜದ ಮುಖಂಡರಾದ ಭವರಲಾಲ್ ಮಹೋತ್, ಬುರಚಂದ್ ಜೈನ್, ಉಮೇದಮಲ್ ಜೈನ್, ಗೌತಮ ಜೈನ್, ಪ್ರವೀಣ ಜೈನ್, ದಿಲಿಷ್ ಮಣೋತ್, ಮಧು ಜೈನ್, ಸವಿತಾ ಜೈನ್, ತ್ರಿಶಲ್ ಜೈನ್, ನಿರ್ಮಲಾ ಜೈನ್, ಸಂಗೀತಾ ಜೈನ್, ದೀರಜ್ ಜೈನ್, ಮೇವುಲ್ ಜೈನ್, ಪ್ರಕ್ಷಾಲ್ ಜೈನ್ ಸೇರಿದಂತೆ ಅನೇಕ ಸಮಾಜ ಬಾಂಧವರು ಉಪಸ್ಥಿತರಿದ್ದರು.

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande