
ಬೆಳಗಾವಿ, 17 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ಕರ್ನಾಟಕ ಕಾರ್ಮಿಕ ಕಲ್ಯಾಣ ನಿಧಿ ತಿದ್ದುಪಡಿ ವಿಧೇಯಕ ಹಾಗೂ 2025ನೇ ಸಾಲಿನ ಸಿನಿ ಮತ್ತು ಸಾಂಸ್ಕೃತಿಕ ಕಾರ್ಯಕರ್ತರ ಕ್ಷೇಮಾಭಿವೃದ್ಧಿ ತಿದ್ದುಪಡಿ ವಿಧೇಯಕಗಳಿಗೆ ವಿಧಾನ ಪರಿಷತ್‌ನಲ್ಲಿ ಇಂದು ಅನುಮೋದನೆ ದೊರೆಯಿತು.
ವಿಧಾನಸಭೆಯಲ್ಲಿ ಅಂಗೀಕೃತ ರೂಪದಲ್ಲಿದ್ದ ಈ ತಿದ್ದುಪಡಿಗಳನ್ನು ವಿಧಾನ ಪರಿಷತ್‌ನಲ್ಲಿ ಪರ್ಯಾವಲೋಚನೆಗೆ ಮಂಡಿಸಲಾಗಿತ್ತು. ಕಾರ್ಮಿಕ ಸಚಿವರಾದ ಸಂತೋಷ್ ಲಾಡ್ ಅವರು ಪ್ರಸ್ತಾವವನ್ನು ಮಂಡಿಸಿ ತಿದ್ದುಪಡಿಯ ಅಂಶಗಳನ್ನು ಸದನಕ್ಕೆ ವಿವರಿಸಿದರು.
ವಿಧೇಯಕದ ಬಗ್ಗೆ ಅಭಿಪ್ರಾಯ ಮಂಡನೆ: ಪರಿಷತ್ ಸದಸ್ಯರಾದ ಕೇಶವ ಪ್ರಸಾದ್, ರಮೇಶ್ ಬಾಬು, ಐವನ್ ಡಿಸೋಜ, ಕೆ.ಎಸ್. ನವೀನ್, ಡಾ. ಧನಂಜಯ ಸರ್ಜಿ, ಗೋವಿಂದರಾಜು, ಎನ್ ರವಿಕುಮಾರ್, ಟಿ.ಎ. ಶರವಣ, ಸಿ.ಟಿ. ರವಿ ಅವರು ಮಾತನಾಡಿದರು. ಕೆಲವು ಅಂಶಗಳ ಬಗ್ಗೆ ಸ್ಪಷ್ಟೀಕರಣಗಳ ಅಗತ್ಯವಿದೆ ಎಂದು ಹೇಳಿದರು.
ಇದಕ್ಕೆ ಉತ್ತರಿಸಿದ ಸಚಿವ ಲಾಡ್ ಅವರು, ಸದಸ್ಯರ ಅಭಿಪ್ರಾಯಗಳಿಗೆ ಸ್ಪಷ್ಟೀಕರಣ ನೀಡಿ, ಹೆಚ್ಚಿನ ಜನರಿಗೆ ಲಾಭ ಆಗುವ ರೀತಿ ಈ ಮಸೂದೆ ತರಲಾಗಿದೆ ಎಂದು ಸದನಕ್ಕೆ ವಿವರಿಸಿದರು. ನಂತರ ವಿಧೇಯಕವು ಅಂಗೀಕೃತಗೊಂಡಿತು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa