
ರಾಯಚೂರು , 17 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ಸರಕಾರಿ ನೌಕರರ ಜಿಲ್ಲಾಮಟ್ಟದ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಸ್ಪರ್ಧೆ ಜನವರಿ 8 ಹಾಗೂ 9ರಂದು ನಡೆಯಲಿದ್ದು, ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಡೆಸಬೇಕು ಎಂದು ಅಪರ ಜಿಲ್ಲಾಧಿಕಾರಿಗಳಾದ ಶಿವಾನಂದ ಅವರು ಹೇಳಿದ್ದಾರೆ.
ಡಿಸೆಂಬರ್ 17ರ ಬುಧವಾರ ದಂದು ನಗರದ ನೂತನ ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಸರಕಾರಿ ನೌಕರರ ಜಿಲ್ಲಾಮಟ್ಟದ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಸ್ಪರ್ಧೆ ಕುರಿತು ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸರಕಾರಿ ನೌಕರರ ಕ್ರೀಡಾಕೂಟದಲ್ಲಿ ಪುರುಷರ 45 ವರ್ಷ ಒಳಗಿನ ಮತ್ತು 45 ವರ್ಷ ಮೇಲ್ಪಟ್ಟ ವಿಭಾಗ ಮಾಡಲಾಗಿದೆ. ಅದೇ ರೀತಿ ಮಹಿಳೆಯರಿಗೆ 40 ವರ್ಷ ಒಳಗಿನ ಮತ್ತು 40 ವರ್ಷ ಮೇಲ್ಪಟ್ಟವರಿಗಾಗಿ ಸ್ಪರ್ಧೆಗಳು ನಡೆಯಲಿವೆ ಎಂದರು.
ನೌಕರರು ಪಾಲ್ಗೊಳ್ಳಲು ಆನ್‍ಲೈನ್‍ನಲ್ಲಿ ಕಡ್ಡಾಯವಾಗಿ ನೊಂದಣಿ ಮಾಡಿಕೊಳ್ಳಲು ಅಗತ್ಯ ವ್ಯವಸ್ಥೆ ಕೈಗೊಳ್ಳಬೇಕು. ಕೆಜಿಐಡಿ ಸಂಖ್ಯೆಯೊಂದಿಗೆ ಆಯಾ ಕಚೇರಿ ಮುಖ್ಯಸ್ಥರಿಂದ ದೃಢೀಕರಣ ಪತ್ರ ಹಾಜರುಪಡಿಸಬೇಕು. ಕ್ರೀಡಾಂಗಣದಲ್ಲಿ ಕುಡಿಯುವ ನೀರು, ನೆರಳು, ತುರ್ತು ವೈದ್ಯಕೀಯ ನೆರವು, ಊಟೋಪಹಾರ ಸೇರಿದಂತೆ ಎಲ್ಲ ಅಗತ್ಯ ಸಿದ್ಧತೆ ಕೈಗೊಳ್ಳಲು ಪ್ರತ್ಯೇಕ ಉಪಸಮಿತಿ ರಚಿಸಲಾಗುತ್ತದೆ ಎಂದರು.
ವಾರ್ಷಿಕ ಕ್ರೀಡಾಕೂಟ ಆಯೋಜನೆ ಕುರಿತಂತೆ ಉಪ ಸಮಿತಿಯವರು, ಪದಾಧಿಕಾರಿಗಳು ತಮಗೆ ವಹಿಸುವ ಜವಾಬ್ದಾರಿಗಳನ್ನು ಸಮರ್ಪಕವಾಗಿ ನಿಭಾಯಿಸಿ ಸಹಕಾರ ನೀಡಬೇಕು ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ವರ್ಷವಿಡೀ ಕರ್ತವ್ಯ ನಿರ್ವಹಣೆ, ಸಾರ್ವಜನಿಕ ಕೆಲಸ, ಸರ್ಕಾರಿ ಯೋಜನೆಗಳ ಅನುμÁ್ಠನದಲ್ಲಿ ನಿರತರಾದ ನೌಕರರಿಗೆ ವರ್ಷದ 2 ದಿನ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ನಡೆಸುವ ಮೂಲಕ ಉತ್ಸಾಹ ತುಂಬಿ ಕರ್ತವ್ಯ ನಿರ್ವಹಣೆಗೆ ಮತ್ತಷ್ಟು ಪ್ರೇರಣೆ ನೀಡೋಣ ಎಂದರು.
ಈ ವೇಳೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರಾದ ವಿರೇಶ ನಾಯಕ ಅವರು ಮಾತನಾಡಿ, ಕ್ರೀಡಾಕೂಟದ ಉದ್ಘಾಟನಾ ಸಮಾರಂಭ ಜನವರಿ 8 ರಂದು ಬೆಳಗ್ಗೆ 9ಗಂಟೆಗೆ ನಗರದ ಮಹಾತ್ಮ ಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯಲಿದೆ ಎಂದರು.
ಈ ವೇಳೆ ಸರ್ಕಾರಿ ನೌಕರರ ಜಿಲ್ಲಾಧ್ಯಕ್ಷರಾದ ಕೃಷ್ಣ ಶಾಂವತಗೇರಾ ಅವರು ಮಾತನಾಡಿ, ನೌಕರರ ಕ್ರೀಡಾಕೂಟವನ್ನು ಅದ್ಧೂರಿಯಾಗಿ ನಡೆಸಬೇಕು. ಅತಿ ಹೆಚ್ಚು ನೌಕರರು ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ಬಾರಿ ಸಂಭ್ರಮದಿಂದ ಕ್ರೀಡಾ ಮತ್ತು ಸಾಂಸ್ಕೃತಿಕ ಚಟುವಟಿಕೆ ನಡೆಸಬೇಕು. ಕ್ರೀಡಾಕೂಟದ ವ್ಯವಸ್ಥೆಗೆ ಸಂಬಂಧಿಸಿದಂತೆ ಜವಾಬ್ದಾರಿಯನ್ನು ವಹಿಸಿಕೊಂಡ ಇಲಾಖೆಗಳು ಮುಂಚೂಣಿಯಲ್ಲಿ ನಿಂತು ಕೆಲಸ ಮಾಡಬೇಕೆಂದರು.
ಇದೇ ಸಂದರ್ಭದಲ್ಲಿ ರಾಯಚೂರು ತಹಶೀಲ್ದಾರ್ ಸುರೇಶ ವರ್ಮ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿ ಡಾ.ಸುರೇಂದ್ರ ಬಾಬು, ಜಿಲ್ಲಾ ಸರ್ಕಾರಿ ನೌಕರರ ಸಂಘದ ಪದಧಿಕಾರಿಗಳಾದ ಸಮತೋಷ, ರಾಜಶೇಖರ, ರಾಮು ಸೇರಿದಂತೆ ಇತರರು ಇದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್