
ಗದಗ, 17 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ಗದಗ ಜಿಲ್ಲೆ ಲಕ್ಷ್ಮೇಶ್ವರ ತಾಲೂಕಿನ ಹಿರೇಮಲ್ಲಾಪೂರ ಗ್ರಾಮದಲ್ಲಿ ನಿರ್ಮಾಣಗೊಂಡಿರುವ ಎಥೆನಾಲ್ ಕಾರ್ಖಾನೆಯನ್ನು ಕೂಡಲೇ ಪ್ರಾರಂಭಿಸಬೇಕೆಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ತಹಸೀಲ್ದಾರ ಕಚೇರಿಗೆ ಮನವಿ ಸಲ್ಲಿಸಲಾಯಿತು. ಕಾರ್ಖಾನೆ ಪ್ರಾರಂಭಿಸುವವರೆಗೂ ಅಹೋರಾತ್ರಿ ಧರಣಿ ಸತ್ಯಾಗ್ರಹ ನಡೆಸಲು ಅನುಮತಿ ನೀಡಬೇಕೆಂದು ಸಂಘಟನೆಗಳು ಒತ್ತಾಯಿಸಿದವು.
ಈ ಕುರಿತು ಮನವಿ ಸ್ವೀಕರಿಸಿದ ತಹಸೀಲ್ದಾರ ಧನಂಜಯ ಎಂ., ಬೆಳಗಾವಿಯಲ್ಲಿ ರಾಜ್ಯ ವಿಧಾನಮಂಡಲ ಅಧಿವೇಶನ ನಡೆಯುತ್ತಿರುವ ಹಿನ್ನೆಲೆ ಅನೇಕ ಹಿರಿಯ ಅಧಿಕಾರಿಗಳು ಅಧಿವೇಶನದಲ್ಲಿರುವುದರಿಂದ, ಹೋರಾಟವನ್ನು ಒಂದು ವಾರ ಮುಂದೂಡುವಂತೆ ರೈತರಿಗೆ ಮನವಿ ಮಾಡಿದರು. ಆದರೆ ಇದಕ್ಕೆ ಒಪ್ಪದ ರೈತರು, ಈಗಾಗಲೇ ಹೋರಾಟಕ್ಕೆ ಸಿದ್ಧವಾಗಿ ನೂರಾರು ಸಂಖ್ಯೆಯಲ್ಲಿ ಆಗಮಿಸಿದ್ದೇವೆ. ಯಾವುದೇ ರೀತಿಯ ಕಾಲಾವಕಾಶ ನೀಡುವುದಿಲ್ಲ ಎಂದು ಪಟ್ಟು ಹಿಡಿದರು.
ಪರಿಸ್ಥಿತಿ ಉದ್ವಿಗ್ನವಾಗುವ ಹಂತ ತಲುಪುತ್ತಿದ್ದಂತೆ ತಹಸೀಲ್ದಾರರು ರೈತ ನಾಯಕರೊಂದಿಗೆ ಚರ್ಚೆ ನಡೆಸಿ, ಮನವೊಲಿಸುವಲ್ಲಿ ಯಶಸ್ವಿಯಾದರು. ಕೊನೆಗೆ ಧರಣಿ ಸತ್ಯಾಗ್ರಹವನ್ನು ತಾತ್ಕಾಲಿಕವಾಗಿ ಮುಂದೂಡಲು ರೈತರು ಒಪ್ಪಿಕೊಂಡರು. ಈ ವೇಳೆ ರೈತ ಸಂಘಟನೆಗಳು ಡಿಸೆಂಬರ್ 20ರೊಳಗಾಗಿ ಎಥೆನಾಲ್ ಕಾರ್ಖಾನೆ ಕಾರ್ಯಾರಂಭವಾಗದಿದ್ದಲ್ಲಿ, ಯಾವುದೇ ಸೂಚನೆ ಇಲ್ಲದೆ ಅಹೋರಾತ್ರಿ ಪ್ರತಿಭಟನೆ ಕೈಗೊಳ್ಳಲಾಗುವುದು. ಅದಕ್ಕೆ ಅಗತ್ಯ ಪೊಲೀಸ್ ರಕ್ಷಣೆ ನೀಡಬೇಕೆಂದು ಸ್ಪಷ್ಟವಾಗಿ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಅಧ್ಯಕ್ಷ ಶಂಕರಗೌಡ ಜಯನಗೌಡ್ರು, ಸುರೇಶ ಸಿಂದಗಿ ಮಾತನಾಡಿ, “ಎಥೆನಾಲ್ ಫ್ಯಾಕ್ಟರಿ ಪ್ರಾರಂಭವಾದರೆ ಈ ಭಾಗದ ಮೆಕ್ಕೆಜೋಳ, ಕಬ್ಬು, ಜೋಳ ಬೆಳೆಗಾರ ರೈತರಿಗೆ ನೇರ ಲಾಭವಾಗಲಿದೆ. ರೈತರ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚಾಗಿ, ಉತ್ತಮ ಬೆಲೆ ಸಿಗಲಿದೆ. ಇದರಿಂದ ಗ್ರಾಮೀಣ ಆರ್ಥಿಕತೆ ಬಲಿಷ್ಠವಾಗುತ್ತದೆ” ಎಂದು ಹೇಳಿದರು.
ಲಕ್ಷ್ಮೇಶ್ವರ ತಾಲೂಕಿನಲ್ಲಿ ಸ್ಥಾಪನೆಯಾಗುತ್ತಿರುವ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಸರ್ಕಾರ ಯಾವುದೇ ರೀತಿಯ ಅಡಚಣೆ ಮಾಡಬಾರದು. ಕಾರ್ಖಾನೆ ಆರಂಭದಿಂದ ಉದ್ಯೋಗಾವಕಾಶಗಳು ಹೆಚ್ಚಾಗಲಿದ್ದು, ರೈತರ ಬದುಕಿಗೆ ಹೊಸ ಆಶಾಕಿರಣ ಮೂಡಲಿದೆ. ಆದರೆ ಕೆಲ ಸಂಘಟನೆಗಳು ಅನಾವಶ್ಯಕವಾಗಿ ವಿರೋಧ ವ್ಯಕ್ತಪಡಿಸುತ್ತಿರುವುದು ವಿಷಾದಕರ ಸಂಗತಿ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಅಹೋರಾತ್ರಿ ಧರಣಿ ನಡೆಸುವ ಎಚ್ಚರಿಕೆ ನೀಡಿದ್ದ ರೈತ ಸಂಘಟನೆಗಳು, ತಹಸೀಲ್ದಾರ ಕಚೇರಿಗೆ ನೂರಾರು ರೈತರೊಂದಿಗೆ ಧರಣಿಗೆ ಸಿದ್ಧವಾಗಿಯೇ ಬಂದಿದ್ದವು. ಹೋರಾಟದ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಸೂಕ್ತ ಭದ್ರತೆ ಒದಗಿಸಬೇಕೆಂದು ತಹಸೀಲ್ದಾರರಿಗೆ ತಿಳಿಸಿ, ಹೋರಾಟ ಆರಂಭಿಸುವುದಾಗಿ ಘೋಷಿಸಿದ್ದವು.
ಮನವಿ ಸ್ವೀಕರಿಸಿದ ತಹಸೀಲ್ದಾರ ಧನಂಜಯ ಎಂ., ಈ ವಿಷಯವನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಚರ್ಚಿಸಿ, ಕಾನೂನುಬದ್ಧವಾಗಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಈ ವೇಳೆ ಟಾಕಪ್ಪ ಸಾತಪೂತೆ, ನಾಗರಾಜ ಕಳ್ಳಿಹಾಳ, ಆದೇಶ ಹುಲಗೂರ, ಲಕ್ಷ್ಮವ್ವ ಮೆಳ್ಳಿಗಟ್ಟಿ, ಶರಣಪ್ಪ ಕಮ್ಮಾರ, ವಿರೂಪಾಕ್ಷಪ್ಪ ಅರಳಿ ಸೇರಿದಂತೆ ಅನೇಕ ರೈತರು, ಮಹಿಳೆಯರು ಹಾಗೂ ಸಂಘಟನೆಗಳ ಮುಖಂಡರು ಹಾಜರಿದ್ದು, ಎಥೆನಾಲ್ ಕಾರ್ಖಾನೆ ಶೀಘ್ರ ಪ್ರಾರಂಭಕ್ಕೆ ತಮ್ಮ ಏಕಮನಸ್ಸಿನ ಆಗ್ರಹವನ್ನು ವ್ಯಕ್ತಪಡಿಸಿದರು.
ಹಿಂದೂಸ್ತಾನ್ ಸಮಾಚಾರ್ / lalita MP