
ವಿಜಯಪುರ, 17 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಅಲೆಮಾರಿ ಹಾಗೂ ಅಲೆ ಅಲೆಮಾರಿ ಜನಾಂಗದ ಅಭಿವೃದ್ಧಿಗೆ ಪೂರಕವಾಗಿ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿ ಅವರಿಗೆ ದೊರಕುವ ಸವಲತ್ತು ಒದಗಿಸಿ ಎಂದು ಜಿಲ್ಲಾಧಿಕಾರಿ ಆನಂದ ಕೆ. ಅವರು ಅಧಿಕಾರಿಗಳಿಗೆ ಸೂಚಿಸಿದರು.
ನಗರದ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಪರಿಶಿಷ್ಟ ಜಾತಿ- ಪರಿಶಿಷ್ಟ ಪಂಗಡದ ಅಲೆಮಾರಿ, ಅರೆಅಲೆಮಾರಿ ಸಮುದಾಯದವರ ಅಭಿವೃದ್ಧಿಗಾಗಿ ಯೋಜನೆಗಳ ಅನುಷ್ಠಾನಗೊಳಿಸುವ ಜಿಲ್ಲಾ ಮಟ್ಟದ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಈ ಜನಾಂಗದವರ ಅಭಿವೃದ್ಧಿಗಾಗಿ ಸರ್ಕಾರ ಹಲವಾರು ಯೋಜನೆಗಳನ್ನು ಕಾರ್ಯರೂಪಿಸಿ ಅನುಷ್ಟಾನಗೊಳಿಸುತ್ತಿದ್ದು, ಅವರಿಗೆ ದೊರಕಿಸಬೇಕಾದ ಸೌಲಭ್ಯ-ಸವಲತ್ತುಗಳನ್ನು ತಲುಪಿಸಲು ಕ್ರಮವಹಿಸಿ. ಈ ಜನಾಂಗದ ಮಕ್ಕಳಿಗೆ ಪ್ರಾಥಮಿಕ ಶಿಕ್ಷಣ ಪಡೆಯಲು ಉತ್ತೇಜನೆ ನೀಡಬೇಕು. ಶಿಕ್ಷಣದ ಪ್ರಾಮುಖ್ಯತೆ ಕುರಿತು ಅರಿವು ತಿಳುವಳಿಕೆ ನೀಡಬೇಕು. ಜನಾಂಗದ ಆರ್ಥಿಕ ಅಭಿವೃದ್ಧಿಗಾಗಿ ಮೂಲಭೂತ ಸೌಲಭ್ಯ ಕಲ್ಪಿಸುವುದು ಸೇರಿದಂತೆ ಹಲವಾರು ಯೋಜನೆಗಳನ್ನು ಅರ್ಹರಿಗೆ ತಲುಪಿಸಿ ಅವರ ಅಭಿವೃದ್ಧಿಗೆ ಪೂರಕವಾಗಿ ಕಾರ್ಯ ನಿರ್ವಹಸುವಂತೆ ಅವರು ಹೇಳಿದರು.
ಅಲೆಮಾರಿ ಹಾಗೂ ಅಲೆ ಅಲೆಮಾರಿ ಜನಾಂಗದವರ ಆರ್ಥಿಕ ಸ್ವಾವಲಂಬನೆಗಾಗಿ ಕ್ರಮ ವಹಿಸಿ. ಈ ಸಮುದಾಯಗಳಿಗೆ ಸರ್ಕಾರ ನೀಡುವ ಆರ್ಥಿಕ ಬೆಂಬಲದ ಯೋಜನೆಗಳ ಬಗ್ಗೆ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ತಿಳಿವಳಿಕೆ ಮೂಡಿಸಿ, ನಿಗಮದಿಂದ ದೊರೆಯುವ ಸರ್ಕಾರದ ಹಲವು ಸೌಲಭ್ಯ- ಸವಲತ್ತುಗಳನ್ನು ಅರ್ಹರು ಪಡೆದುಕೊಳ್ಳಲು ತಿಳುವಳಿಕೆ ನೀಡಿ ಈ ಯೋಜನೆಗಳ ಲಾಭ ಪಡೆದುಕೊಂಡು ಆರ್ಥಿಕ ಸ್ವಾವಲಂಬನೆ ಸಾಧಿಸುವಂತೆ ಜಾಗೃತಿ ಮೂಡಿಸಿ ಎಂದು ಹೇಳಿದರು.
ಈಗಾಗಲೇ ಸಾರಥಿ ಯೋಜನೆಯಡಿ ಅರ್ಜಿ ಸಲ್ಲಿಸಿದ ಫಲಾನುಭವಿಗಳಿಗೆ ವಿಳಂಬವಾಗದಂತೆ ಕ್ರಮ ವಹಿಸಿ ಯೋಜನೆ ಲಾಭ ಪಡೆದುಕೊಳ್ಳಲು ಅನುಕೂಲ ಮಾಡಿಕೊಡುವಂತೆ ಲೀಡ್ ಬ್ಯಾಂಕ್ ಅಧಿಕಾರಿಗಳಿಗೆ ಅವರು ತಿಳಿಸಿದರು. ಜಿಲ್ಲಾ ಪಂಚಾಯತ ನಗರಾಭಿವೃದ್ಧಿ ಕೋಶ ಹಾಗೂ ಗ್ರಾಮ ಪಂಚಾಯತಿ ಸಮನ್ವಯದೊಂದಿಗೆ ವಸತಿ ಯೋಜನೆಗಳ ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕು.
ಜಾಗದ ಮಾಲಿಕತ್ವ ವಾಸಿಸುವ ಕುಟುಂಬಗಳಿಗೆ ನೋಂದಣಿ, ಅಲೆಮಾರಿ ಹಾಗೂ ಅಲೆ ಅಲೆಮಾರಿ ಸಮುದಾಯದವರಿಗೆ ಪ್ರತಿ ವರ್ಷ ವಿವಿಧ ಯೋಜನೆಗಳಡಿಯಲ್ಲಿ ಭೌತಿಕ ಗುರಿಯಲ್ಲಿ ಹೆಚ್ಚಳ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲು ಸರ್ಕಾರದ ವತಿಯಿಂದ ಧನ ಸಹಾಯ,ವಸತಿ, ಸ್ವಯಂ ಉದ್ಯೋಗ ನೇರ ಸಾಲ ಯೋಜನೆ, ಉದ್ಯಮ ಶೀಲತಾ, ಸಾರಥಿ, ಗಂಗಾ ಕಲ್ಯಾಣ, ಭೂಒಡೆತನ ಯೋಜನೆಗಳ ಗುರಿ ನಿಗದಿ,ಈ ಸಮುದಾಯ ವಾಸಿಸುವ ಕಾಲೊನಿಯಲ್ಲಿ ಮೂಲಭೂತ ಸೌಕರ್ಯ ಒದಗಿಸಿ ಅಭಿವೃದ್ಧಿ ಪಡಿಸುವಂತೆ ಸಮಿತಿ ಸದಸ್ಯರು ಕೋರಿದರು.
ಸ್ವಯಂ ಉದ್ಯೋಗ ನೇರ ಸಾಲ ಯೋಜನೆಯಡಿ ಅಲೆಮಾರಿ ಹಾಗೂ ಅರೆ ಅಲೆಮಾರಿ ಜನಾಂಗದ -26 ಉದ್ಯಮ ಶೀಲತಾ -1, ಸ್ವಾವಲಂಭಿ ಸಾರಥಿ-5, ಗಂಗಾ ಕಲ್ಯಾಣ-3, ಭೂಒಡೆತನ-8 ಫಲಾನುಭವಿಗಳನ್ನು ಆಯ್ಕೆ ಮಾಡಲಾಯಿತು.
ಸಭೆಯಲ್ಲಿ ಜಿಲ್ಲಾ ಪಂಚಾಯತ ಮುಖ್ಯ ಲೆಕ್ಕಾಧಿಕಾರಿ ರಾಮಣ್ಣ ಅಥಣಿ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಬದ್ರುದ್ದೀನ ಸೌದಾಗರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಸಂಪತಕುಮಾರ ಗುಣಾರಿ, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರಾರ ಮಹೇಶ ಪೋತದಾರ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಲೆಮಾರಿ ಮತ್ತು ಬುಡಕಟ್ಟು ಸಮುದಾಯದ ಯೋಜನೆಗಳ ಅನುಷ್ಠಾನ ಸಮಿತಿ ಸದಸ್ಯರಾದ ಸುನೀಲ ನಾರಾಯಣ ಭಜಂತ್ರಿ, ಸಂಜೀವಕುಮಾರ ದಶವಂತ, ಧರ್ಮಣ್ಣ ವಿಭೂತಿ, ರಾಹುಲ ಶಿಳ್ಳಿಕ್ಯಾತರ, ಶ್ರೀಮತಿ ಗೀತಾ ಶಂಕರ ಖೋಡೆ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಇತರರು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / jyothi deshpande