
ನವದೆಹಲಿ, 15 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ದೆಹಲಿ–ಎನ್‌ಸಿಆರ್ ಪ್ರದೇಶವನ್ನು ಇಂದು ಬೆಳಿಗ್ಗೆ ದಟ್ಟ ಮಂಜು ಮತ್ತು ಹೊಗೆ ಆವರಿಸಿದ್ದು, ಗೋಚರತೆ ಗಣನೀಯವಾಗಿ ಕಡಿಮೆಯಾಗಿದೆ. ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಮಾಹಿತಿ ಪ್ರಕಾರ, ಸರ್ದಾರ್ ಪಟೇಲ್ ಮಾರ್ಗದಲ್ಲಿ ವಾಯು ಗುಣಮಟ್ಟ ಸೂಚ್ಯಂಕ 483ಕ್ಕೆ ತಲುಪಿದ್ದು, ‘ತೀವ್ರ’ ವರ್ಗದಲ್ಲಿದೆ. ಪಂಡಿತ್ ಪಂತ್ ಮಾರ್ಗ (417), ಬಾರಾಖಂಬಾ ರಸ್ತೆ (474) ಮತ್ತು ಅಕ್ಷರಧಾಮ (493) ಪ್ರದೇಶಗಳಲ್ಲಿಯೂ ವಾಯು ಗುಣಮಟ್ಟ ಅತ್ಯಂತ ಕಳಪೆಯಾಗಿದೆ.
ಮಂಜು ಮತ್ತು ಹೊಗೆಯಿಂದ ವಿಮಾನ ಸಂಚಾರದ ಮೇಲೂ ಪರಿಣಾಮ ಬಿದ್ದಿದ್ದು, ಇಂಡಿಗೋ ವಿಮಾನಯಾನ ಸಂಸ್ಥೆ ಪ್ರಯಾಣಿಕರಿಗೆ ಮಾಹಿತಿ ನೀಡಿದೆ. ಕೆಲವು ವಿಮಾನಗಳ ಹೊರಡುವಲ್ಲಿ ವಿಳಂಬ ಸಂಭವಿಸಬಹುದೆಂದು ತಿಳಿಸಿದ್ದು, ವಿಮಾನ ನಿಲ್ದಾಣಕ್ಕೆ ತೆರಳುವಾಗ ಹೆಚ್ಚುವರಿ ಸಮಯ ಕಾಯ್ದಿರಿಸಲು ಸಲಹೆ ನೀಡಿದೆ.
ಭಾನುವಾರ ದೆಹಲಿ ದೇಶದ ಅತ್ಯಂತ ಕಲುಷಿತ ನಗರಗಳ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದು, ಗಾಳಿಯ ವೇಗ ಗಂಟೆಗೆ 5 ಕಿಮೀ ಮಾತ್ರವಾಗಿತ್ತು. ಮುಂದಿನ ಎರಡು ದಿನಗಳಲ್ಲಿ ವಾಯು ಗುಣಮಟ್ಟ ‘ಅತ್ಯಂತ ಕಳಪೆ’ ಮಟ್ಟಕ್ಕೆ ತಲುಪುವ ಸಾಧ್ಯತೆಯಿದೆ.
ಪರಿಸ್ಥಿತಿ ಹಿನ್ನಲೆಯಲ್ಲಿ ದೆಹಲಿ–ಎನ್‌ಸಿಆರ್‌ನಲ್ಲಿ ನಾಲ್ಕನೇ ಹಂತದ ಗ್ರೇಡೆಡ್ ರೆಸ್ಪಾನ್ಸ್ ಆಕ್ಷನ್ ಪ್ಲಾನ್ ಜಾರಿಯಲ್ಲಿದೆ. 9ರಿಂದ 12ನೇ ತರಗತಿವರೆಗೆ ಶಾಲಾ ತರಗತಿಗಳನ್ನು ಹೈಬ್ರಿಡ್ ಮಾದರಿಯಲ್ಲಿ ನಡೆಸಲು ಶಿಕ್ಷಣ ನಿರ್ದೇಶನಾಲಯ ಸೂಚಿಸಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa