
ಹುಬ್ಬಳ್ಳಿ, 13 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ಕರ್ನಾಟಕದಲ್ಲಿ ಮಹಿಳೆಯರಿಗೆ ಸುರಕ್ಷತೆ ಇಲ್ಲ. ಪ್ರತಿ ದಿನ ಅತ್ಯಾಚಾರ, ದೌರ್ಜನ್ಯ, ಆತ್ಮಹತ್ಯೆ, ಕೊಲೆ ನಡೆಯುತ್ತಿವೆ. ಹುಬ್ಬಳ್ಳಿಯ ನೇಹಾ ಕೊಲೆ ಪ್ರಕರಣದಿಂದ ಹಿಡಿದು ಈ ಸರ್ಕಾರದಲ್ಲಿ ಇಂದಿಗೂ ನಿಂತಿಲ್ಲ. ಇದರ ವಿರುದ್ಧ ಸಾಮಾಜಿಕ ಜಾಗೃತಿ ಮಾಡಬೇಕು. ಮಹಿಳೆಯರಿಗೆ ತಿಂಗಳಿಗೆ ಎರಡು ಸಾವಿರ ಕೊಟ್ಟು ಬಾಯಿ ಮುಚ್ಚಿಸಲು ಸಾಧ್ಯವಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.
ಭಾರತೀಯ ಜನತಾ ಪಾರ್ಟಿ ಕರ್ನಾಟಕ ಮಹಿಳಾ ಮೋರ್ಚಾದ ವತಿಯಿಂದ ಇಂದು ಹುಬ್ಬಳ್ಳಿಯ ಅರವಿಂದ ನಗರದಲ್ಲಿ ಭಾರತೀಯ ಜನತಾ ಪಕ್ಷದ ಕಾರ್ಯಾಲಯದಲ್ಲಿ ಉತ್ತರ ಕರ್ನಾಟಕ ವಿಭಾಗದ ಮಹಿಳಾ ಮೋರ್ಚಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ಕರ್ನಾಟಕದ ಭವಿಷ್ಯದ ಮಹಿಳಾ ಶಕ್ತಿ ಇಲ್ಲಿ ಸೇರಿದೆ ಅಂತ ಅನಿಸುತ್ತಿದೆ. ಭವಿಷ್ಯದ ದೃಷ್ಟಿ ಇಟ್ಟುಕೊಂಡು ತಮ್ಮನ್ನು ಇಲ್ಲಿ ಸೇರಿಸಿದ್ದಾರೆ. ಅನ್ಯಾಯದ ವಿರುದ್ಧ ಧ್ವನಿ ಎತ್ತಲು ತಮ್ಮನ್ನು ಸಂಘಟನೆ ಮಾಡಲು ಸೇರಿಸಿದ್ದಾರೆ. ಅದರ ಮೂಲಕ ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಭವ್ಯ ಭವಿಷ್ಯ ಬರೆಯಲು ಸೇರಿಸಿದ್ದಾರೆ. ಈಗ ನಿಮ್ಮ ನಾಯಕತ್ವದ ಗುಣಗಳನ್ನು ತೋರಿಸಿದರೆ 2030 ಕ್ಕೆ ಬರುವಂತಹ ಮೀಸಲಾತಿಯಲ್ಲಿ ತಾಯಂದಿರಿಗೆ ನಾಯಕತ್ವ ತೋರಿಸಲು ಆವಕಾಶ' ಸಿಗುತ್ತದೆ ಎಂದರು.
ಭಾರತದ ಸುಸಂಸ್ಕೃತಿ ಸಂಸ್ಕಾರ ಯಾವುದಾದರೂ ರಾಜಕೀಯ ಪಕ್ಷದಲ್ಲಿ ಇದ್ದರೆ ಅದು ಬಿಜೆಪಿಯಲ್ಲಿದೆ. ನೀವು ಯಶಸ್ವಿ ಗೃಹಿಣಿಯರಾಗಿ, ತಾಯಂದಿರಾಗಿ ನಿಮ್ಮ ನೈತಿಕತೆಯನ್ನು ಉಳಿಸಿಕೊಂಡು ಬಿಜೆಪಿಯಲ್ಲಿ ಪದಾಧಿಕಾರಿಗಳಾಗಿ ಸೇವೆ ಸಲ್ಲಿಸಲು ಬಂದಿದ್ದೀರಿ. ಶೇ 50 ರಷ್ಟಿರುವ ಮಹಿಳಾ ಶಕ್ತಿ ಭಾರತವನ್ನು ಇಡೀ ವಿಶ್ವದಲಿಯೇ ಉನ್ನತ ಸ್ಥಾನಕ್ಕೆ ತೆಗೆದುಕೊಂಡು ಹೋಗುವ ಶಕ್ತಿ ಹೊಂದಿದೆ. ಶೇ 50 ರಷ್ಟು ಅವಕಾಶ ಕೊಟ್ಟರೂ ಭಾರತ ಅಭಿವೃದ್ಧಿಯಾಗುತ್ತದೆ ಎಂದರು.
ಹತ್ತು ವರ್ಷದಲ್ಲಿ ಆಗಬೇಕಾದ ಕೆಲಸ ಐದು ವರ್ಷದಲ್ಲಿ ಆಗಬೇಕೆಂದರೆ ಮಹಿಳೆಯರಿಗೆ ಅವಕಾಶ ಕೊಡಬೇಕು. ಭಾರತದ ಮಹಿಳೆ ಅಬಲೆಯಲ್ಲ ಸಬಲೆ, ಅವಕಾಶ ಸಿಕ್ಕರೆ ಏನೆಲ್ಲ ಮಾಡಬಹುದು ಎನ್ನುವುದನ್ನು ಇತಿಹಾಸದಲ್ಲಿ ಕಿತ್ತೂರು ಚೆನ್ನಮ್ಮ, ಝಾನ್ಸಿರಾಣಿ ಲಕ್ಷ್ಮೀ ಬಾಯಿ ತೋರಿಸಿಕೊಟ್ಟಿದ್ದಾರೆ. ಮೊಗಲರ ಕಾಲದಲ್ಲಿ ನಮ್ಮ ಮಹಿಳೆಯರ ಮೇಲೆ ಅತ್ಯಾಚಾರ, ಅನಾಚಾರ ನಡೆದರೂ ಅದನ್ನು ಸಹಿಸಿಕೊಂಡು ಈ ದೇಶದ ಸಿಂಧೂರ ಉಳಿಸಿಕೊಂಡು ಬಂದಿರುವುದು ನಮ್ಮ ತಾಯಂದಿರು. ಮಹಿಳೆಯರು ಎಲ್ಲ ರಂಗದಲ್ಲಿಯೂ ಇದ್ದಾರೆ. ನಾಸಾದಲ್ಲಿ ಹೆಚ್ಚು ಭಾರತಿಯರಿದ್ದರೆ ಇಸ್ರೋದಲ್ಲಿ ಐವತ್ತರಷ್ಟು ಮಹಿಳೆಯರಿದ್ದಾರೆ. ನಿಮ್ಮಲ್ಲಿ ಪ್ರಾಮಾಣಿಕತೆ, ನಿಷ್ಠೆ ಇರುತ್ತದೆ ಎಂದ ಹೇಳಿದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa