

ಗದಗ, 13 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ಗದಗ ಜಿಲ್ಲೆಯ ರೋಣ ತಾಲೂಕಿನಲ್ಲಿ ಫುಡ್ ಸೇಫ್ಟಿ ಅಧಿಕಾರಿಯೊಬ್ಬರು ಮದ್ಯಪಾನಕ್ಕೆ ಉತ್ತೇಜನ ನೀಡುವ ರೀತಿಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ರೀಲ್ಸ್ ಮಾಡಿರುವುದು ಭಾರಿ ವಿವಾದಕ್ಕೆ ಕಾರಣವಾಗಿದೆ. ಸಾರ್ವಜನಿಕ ಆರೋಗ್ಯದ ಮೇಲ್ವಿಚಾರಣೆ ಹೊತ್ತಿರುವ ಆಹಾರ ಸುರಕ್ಷತಾ ಅಧಿಕಾರಿಯೇ ಬಿಯರ್, ವಿಸ್ಕಿ ಜೊತೆ ರೀಲ್ಸ್ ಮಾಡಿ ವೈರಲ್ ಆಗಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗುವಂತೆ ಮಾಡಿದೆ.
ರೋಣ ತಾಲೂಕಿನ ಫುಡ್ ಸೇಫ್ಟಿ ಆಫೀಸರ್ ಚೇತನ್ ಎಸ್ ಅವರು, ಬಾಗಲಕೋಟೆ ಮೂಲದ ಸೋಷಿಯಲ್ ಮೀಡಿಯಾ ಕಂಟೆಂಟ್ ಕ್ರಿಯೇಟರ್ ನಾಗರಾಜ್ ನಿಲುಗಲ್ ಅವರೊಂದಿಗೆ ಸೇರಿ ರೀಲ್ಸ್ ಮಾಡಿದ್ದು, ಆ ವೀಡಿಯೋವನ್ನು ಇನ್‌ಸ್ಟಾಗ್ರಾಂನಲ್ಲಿ ಅಪ್‌ಲೋಡ್ ಮಾಡಲಾಗಿದೆ. ಲಕ್ಷಾಂತರ ಫಾಲೋವರ್ಸ್ ಹೊಂದಿರುವ ಇನ್ಫ್ಲುಯೆನ್ಸರ್ ಪೇಜ್‌ನಲ್ಲಿ ಈ ವೀಡಿಯೋ ಪ್ರಕಟವಾಗಿದ್ದು, ಮದ್ಯಪಾನವನ್ನು ಖುಷಿಯ ಮೂಲವೆಂಬಂತೆ ಬಿಂಬಿಸಿರುವುದು ವ್ಯಾಪಕ ಟೀಕೆಗೆ ಗುರಿಯಾಗಿದೆ. ಕುಟುಂಬ ಸಮೇತ ಕುಳಿತು ಮದ್ಯಪಾನ ಸೇವನೆ ಮಾಡುವ ದೃಶ್ಯಗಳು ಹಾಗೂ ಗ್ಲಾಸ್, ಬಾಟಲ್ ಹಿಡಿದು ರೀಲ್ಸ್ ಮಾಡಿರುವುದು ಸರ್ಕಾರಿ ಸೇವಾ ನಿಯಮಗಳಿಗೆ ವಿರುದ್ಧವಾಗಿದೆ ಎನ್ನಲಾಗುತ್ತಿದೆ.
ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಮದ್ಯಪಾನದ ವಿರುದ್ಧ ಜಾಗೃತಿ ಮೂಡಿಸಬೇಕಾದ ಅಧಿಕಾರಿ ಈ ರೀತಿಯ ವರ್ತನೆ ತೋರಿರುವುದು ಕರ್ನಾಟಕ ಸಿವಿಲ್ ಸರ್ವಿಸ್ ರೂಲ್ಸ್ ಉಲ್ಲಂಘನೆಯಾಗಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ಈ ಬಗ್ಗೆ ಪ್ರಶ್ನಿಸಿದಾಗ, ಸಂಬಂಧಿಸಿದ ಅಧಿಕಾರಿ ಮಾತನಾಡಲು ನಿರಾಕರಿಸಿದ್ದಾರೆ.
ವಿವಾದ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ ಗದಗ ಉಪವಿಭಾಗಾಧಿಕಾರಿ ಗಂಗಪ್ಪ ಎಂ ಅವರು ಪ್ರತಿಕ್ರಿಯಿಸಿ, ಫುಡ್ ಸೇಫ್ಟಿ ಅಧಿಕಾರಿ ಚೇತನ್ ಎಸ್ ಅವರಿಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡುವುದಾಗಿ ತಿಳಿಸಿದ್ದಾರೆ. ಸರ್ಕಾರದ ಮಟ್ಟದಲ್ಲಿ “ಮದ್ಯಪಾನ ಆರೋಗ್ಯಕ್ಕೆ ಹಾನಿಕಾರಕ” ಎಂಬ ಜಾಗೃತಿ ಕಾರ್ಯಕ್ರಮಗಳು ನಡೆಯುತ್ತಿರುವ ಸಂದರ್ಭದಲ್ಲಿ, ಅಧಿಕಾರಿಯೇ ಮದ್ಯಪ್ರಚಾರ ಮಾಡುವ ರೀತಿಯ ರೀಲ್ಸ್ ಮಾಡಿರುವುದು ಅಸಮಂಜಸ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಒಟ್ಟಿನಲ್ಲಿ, ಮನರಂಜನೆಯ ಹೆಸರಿನಲ್ಲಿ ಸರ್ಕಾರಿ ಅಧಿಕಾರಿ ಮದ್ಯಪಾನ ಪ್ರಚಾರ ಮಾಡಿರುವ ಪ್ರಕರಣ ಭಾರಿ ಚರ್ಚೆಗೆ ಗ್ರಾಸವಾಗಿದ್ದು, ನೋಟಿಸ್‌ಗೆ ಅಧಿಕಾರಿ ನೀಡುವ ಉತ್ತರ ಏನು, ಮುಂದಿನ ದಿನಗಳಲ್ಲಿ ಯಾವ ರೀತಿಯ ಶಿಸ್ತು ಕ್ರಮ ಜರುಗಲಿದೆ ಎಂಬುದನ್ನು ಕಾದು ನೋಡಬೇಕಿದೆ.
ಹಿಂದೂಸ್ತಾನ್ ಸಮಾಚಾರ್ / lalita MP